ADVERTISEMENT

ಐಟಿಎಫ್‌ ಮಹಿಳಾ ಓಪನ್ ಟೆನಿಸ್ | ಶ್ರೀವಲ್ಲಿ ಮುನ್ನಡೆ, ಮಾಯಾ, ವೈದೇಹಿ ನಿರ್ಗಮನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 20:54 IST
Last Updated 18 ಫೆಬ್ರುವರಿ 2026, 20:54 IST
ಭಾರತದ ಶ್ರೀವಲ್ಲಿ ಭಮಿಡಿಪಾಟಿ
ಭಾರತದ ಶ್ರೀವಲ್ಲಿ ಭಮಿಡಿಪಾಟಿ   

ಬೆಂಗಳೂರು: ಭಾರತದ ಶ್ರೀವಲ್ಲಿ ರಶ್ಮಿಕಾ ಭಮಿಡಿಪಾಟಿ ಅವರು ಬುಧವಾರ ಶ್ರಮಪಟ್ಟು 7–6 (6), 6–4 ರಿಂದ ಮಾಲ್ಟಾದ ಫ್ರಾನ್ಸೆಸ್ಕಾ ಕರ್ಮಿ ಅವರನ್ನು ಸೋಲಿಸಿ ಕೆಪಿಬಿ ಟ್ರಸ್ಟ್‌ ಐಟಿಎಫ್‌ ಮಹಿಳಾ ಓಪನ್ ಟೆನಿಸ್‌ ಟೂರ್ನಿಯ ಎರಡನೇ ಸುತ್ತಿಗೆ ಮುನ್ನಡೆದರು.

ವಿಶ್ವ ಕ್ರಮಾಂಕದಲ್ಲಿ 543ನೇ ಸ್ಥಾನದಲ್ಲಿರುವ ಶ್ರೀವಲ್ಲಿ ತವರಿನಲ್ಲಿ ಆಡುವ ಲಾಭದ ಜೊತೆಗೆ, ತಮ್ಮ ಪ್ರಬಲ ಸರ್ವ್‌ಗಳ ಮೇಲೆ ನಂಬಿಕೆಯಿರಿಸಿ, 336ನೇ ಕ್ರಮಾಂಕದ ಕರ್ಮಿ ಅವರನ್ನು ಸೋಲಿಸಿದರು. ಶ್ರೀವಲ್ಲಿ ಈ ಟೂರ್ನಿಗೆ ವೈಲ್ಡ್‌ ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದರು.

ಎಸ್‌.ಎಂ.ಕೃಷ್ಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ರಶ್ಮಿಕಾ ನೇರ ಸೆಟ್‌ಗಳ ಜಯಪಡೆದರೆ, ಭಾರತ ಇನ್ನಿಬ್ಬರು ಆಟಗಾರ್ತಿಯರಾದ ಮಾಯಾ ರಾಜೇಶ್ವರನ್ ರೇವತಿ ಮತ್ತು ವೈದೇಹಿ ಚೌಧರಿ ಹೊರಬಿದ್ದರು. 

ADVERTISEMENT

24 ವರ್ಷ ವಯಸ್ಸಿನ ಶ್ರೀವಲ್ಲಿ ಅವರ ಆರಂಭ ಉತ್ತಮವಾಗಿರಲಿಲ್ಲ. ಅವರಿಗಿಂತ ಒಂದು ವರ್ಷ ಕಿರಿಯವರಾದ ಕರ್ಮಿ ಮೊದಲ ಸೆಟ್‌ನಲ್ಲಿ 4–2 ಮುನ್ನಡೆ ಪಡೆದಿದ್ದರು. ಆದರೆ ಮಹತ್ವದ ಏಳನೇ ಗೇಮ್‌ನಲ್ಲಿ ಸರ್ವ್‌ ಉಳಿಸಿಕೊಂಡ ಶ್ರೀವಲ್ಲಿ ಅವರು ವಿಶ್ವಾಸ ವೃದ್ಧಿಸಿಕೊಂಡರು. ನಂತರ ಅವರು ಎದುರಾಳಿಯ ಸರ್ವ್ ಮುರಿದು 4–4ರಲ್ಲಿ ಸಮಮಾಡಿಕೊಂಡರು. 

ಇಬ್ಬರು ಸಮಬಲದ ಹೋರಾಟ ನಡೆಸಿದರು. ಆದರೆ ಟೈಬ್ರೇಕರ್‌ನಲ್ಲಿ ಶ್ರೀವಲ್ಲಿ ಕೈಮೇಲಾಯಿತು. ಟೈಬ್ರೇಕರ್‌ನ ಯಶಸ್ಸು  ಹೈದರಾಬಾದಿನ ಆಟಗಾರ್ತಿಯಲ್ಲಿ ಉತ್ಸಾಹ ಮೂಡಿಸಿದ್ದು, ಎರಡನೇ ಸೆಟ್‌ನಲ್ಲಿ ವ್ಯಕ್ತವಾಯಿತು. ಎದುರಾಳಿಯನ್ನು ಅನೇಕ ಬಾರಿ ಒತ್ತಡಕ್ಕೆ ಸಿಲುಕಿಸಿ ಪಂದ್ಯ ಗೆದ್ದರು.

ಶ್ರೀವಲ್ಲಿ ಅವರ ಮುಂದಿನ ಎದುರಾಳಿ, ಮೂರನೇ ಶ್ರೇಯಾಂಕದ ಹಾನೆ ವಾಂಡೆವಿಂಕೆಲ್. ವಿಶ್ವ ಕ್ರಮಾಂಕದಲ್ಲಿ 124ನೇ ಶ್ರೇಯಾಂಕ ಹೊಂದಿರುವ ಬೆಲ್ಜಿಯಮ್‌ನ ಹಾನೆ 6–1, 6–2 ರಿಂದ ತೈಪೆಯ ಯಾ– ಸುವಾನ್ ಅವರನ್ನು ಹಿಮ್ಮೆಟ್ಟಿಸಿದರು.

‘ನಿರ್ಣಾಯಕ ಸಂದರ್ಭದಲ್ಲಿ ಉತ್ತಮ ಆಟ ಹೊರಬಂದಿದ್ದು ಪಂದ್ಯ ನನ್ನ ಕಡೆ ವಾಲಿಸಿತು’ ಎಂದು ಶ್ರೀವಲ್ಲಿ ಪಂದ್ಯದ ನಂತರ ಪ್ರತಿಕ್ರಿಯಿಸಿದರು.

ಇದಕ್ಕೆ ಮೊದಲು, ಐದನೇ ಶ್ರೇಯಾಂಕದ ಪೊಲಿನಾ ಇಯಾಟ್ಸೆಂಕೊ (ರಷ್ಯಾ) ಅವರು 6–1, 1–6, 6–0 ಯಿಂದ ಮಾಯಾ ರೇವತಿ ಅವರನ್ನು ಸೋಲಿಸಿದರು. ರಷ್ಯಾದ ಆಟಗಾರ್ತಿ ವಿಶ್ವ ಕ್ರಮಾಂಕದಲ್ಲಿ 160ನೇ ಸ್ಥಾನದಲ್ಲಿದ್ದಾರೆ.

ಭಾರತದ ಮತ್ತೊಬ್ಬ ಆಟಗಾರ್ತಿ, ವಿಶ್ವ ಕ್ರಮಾಂಕದಲ್ಲಿ 475ನೇ ಸ್ಥಾನದಲ್ಲಿರುವ ವೈದೇಹಿ ಚೌಧರಿ ಅವರು ಆಸ್ಟ್ರೇಲಿಯಾದ ತಲಿಯಾ ಗಿಬ್ಸನ್ ಎದುರು ಸೋಲನುಭವಿಸಿದರು. ಈ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ತಲಿಯಾ 6–4, 6–0 ಯಿಂದ ಜಯಗಳಿಸಿದರು.

ಎರಡನೇ ಶ್ರೇಯಾಂಕದ ಲಾನ್ಲಾನಾ ತರಾರುಡೀ (ಥಾಯ್ಲೆಂಡ್‌), ಏಳನೇ ಶ್ರೇಯಾಂಕದ ಎಲಿನಾ ಪ್ರಿಡಾನ್ಕಿನಾ (ರಷ್ಯಾ), ಶ್ರೇಯಾಂಕರಹಿತ ಆಟಗಾರ್ತಿ ಜಪಾನ್‌ನ ಮೀ ಯಮಾಗುಚಿ ಸಹ ಎರಡನೇ ಸುತ್ತಿಗೆ ದಾಪುಗಾಲಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.