ADVERTISEMENT

ಐಟಿಎಫ್‌ ಮಹಿಳಾ ಟೆನಿಸ್ ಟೂರ್ನಿ: ವ್ಯಾಲೆಂಟಿನಿಗೆ ಆಘಾತ ನೀಡಿದ ಋತುಜಾ

ಜೀಲ್ ದೇಸಾಯಿ ಜಯಭೇರಿ

ಬಸವರಾಜ ದಳವಾಯಿ
Published 8 ಮಾರ್ಚ್ 2023, 19:49 IST
Last Updated 8 ಮಾರ್ಚ್ 2023, 19:49 IST

ಬೆಂಗಳೂರು: ಮನಮೋಹಕ ಆಟದ ರಸದೌತಣ ಉಣಬಡಿಸಿದ ಪಂದ್ಯದಲ್ಲಿ ಗೆದ್ದ ಭಾರತದ ಋತುಜಾ ಭೋಸ್ಲೆ ಅವರು ಐಟಿಎಫ್‌ ಮಹಿಳಾ ಟೆನಿಸ್‌ ಟೂರ್ನಿಯ ಎರಡನೇ ಸುತ್ತಿಗೆ ಲಗ್ಗೆಯಿಟ್ಟರು.

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಅಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಋತುಜಾ ಬುಧವಾರ 4–6, 6–4, 6–0ರಿಂದ ಎರಡನೇ ಶ್ರೇಯಾಂಕದ ಆಟಗಾರ್ತಿ, ಗ್ರೀಸ್‌ನ ವ್ಯಾಲೆಂಟಿನಿ ಗ್ರಾಮಾಟಿಕೊಪುಲು ಅವರನ್ನು ಪರಾಭವಗೊಳಿಸಿದರು.

ಎರಡು ತಾಸು 19 ನಿಮಿಷ ನಡೆದ ಪಂದ್ಯದಲ್ಲಿ ಉಭಯ ಆಟಗಾರ್ತಿಯರು ಬೆವರು ಸುರಿಸಿದರು.

ADVERTISEMENT

ಪಂದ್ಯದ ಮೊದಲ ಸೆಟ್‌ನಲ್ಲಿ ಸತತ ಮೂರು ಗೇಮ್‌ ‌ತಮ್ಮದಾಗಿಸಿಕೊಂಡ ಋತುಜಾ ಸುಲಭವಾಗಿ ಜಯ ಗಳಿಸುವ ಭರವಸೆ ಮೂಡಿಸಿದ್ದರು. ಆದರೆ ತಿರುಗೇಟು ನೀಡಿದ ಗ್ರೀಸ್‌ ಆಟಗಾರ್ತಿ, ಋತುಜಾ ಮಾಡಿದ ಡಬಲ್‌ ಫಾಲ್ಟ್‌ಗಳ ಲಾಭ ಪಡೆದು ನಾಲ್ಕನೇ ಗೇಮ್ ಗೆದ್ದುಕೊಂಡರು. ಈ ಸೆಟ್‌ನಲ್ಲಿ ಒಂಬತ್ತರ ಪೈಕಿ 7 ಸರ್ವ್‌ಗಳನ್ನು ಪಾಯಿಂಟ್ಸ್‌ನಲ್ಲಿ ಪರಿವರ್ತಿಸಿದರು. ತೀವ್ರ ಪೈಪೋಟಿಯ ಬಳಿಕ ಸೆಟ್‌ ಗೆದ್ದು ಬೀಗಿದರು.

ಎರಡನೇ ಸೆಟ್‌ನಲ್ಲಿ ವ್ಯಾಲೆಂಟಿನಾ ಉತ್ಸಾಹ ಕಳೆದುಕೊಂಡಂತೆ ಕಂಡುಬಂದರು. ಐದು ಡಬಲ್‌ ಫಾಲ್ಟ್‌ಗಳನ್ನು ಮಾಡಿದ ಅವರು ಸೆಟ್‌ ಕೈಚೆಲ್ಲಿದರು. ಮುಂಗೈ ಹೊಡೆತಗಳಲ್ಲಿ ಪ್ರಾಬಲ್ಯ ಮೆರೆದ ಋತುಜಾ ಈ ಸೆಟ್‌ನಲ್ಲಿ ಒಂದು ಏಸ್‌ ಕೂಡ ಸಿಡಿಸಿದರು. ಹತಾಶರಾಗಿದ್ದ ಗ್ರಾಮಾಟಿಕೊಪೊಲೊ ಅವರು ಒಂದು ಹಂತದಲ್ಲಿ ರೆಫರಿ ಪಾಯಿಂಟ್‌ ನೀಡದ್ದಕ್ಕೆ ಪಂದ್ಯವನ್ನು ತೊರೆಯುವ ಮಾತುಗಳನ್ನೂ ಆಡಿದರು. ಆದರೆ ಅವರ ಕೋಚ್‌ ನೀಡಿದ ಸೂಚನೆಯ ಅನುಸಾರ ಮುಂದುವರಿದರು.

ಮೂರನೇ ಸೆಟ್‌ನಲ್ಲಿ ಋತುಜಾ ಸಂಪೂರ್ಣ ಹಿಡಿತ ಸಾಧಿಸಿದರು. ಎದುರಾಳಿಗೆ ಒಂದೂ ಗೇಮ್ ಬಿಟ್ಟುಕೊಡದೆ ಸೆಟ್‌ ಹಾಗೂ ಪಂದ್ಯ ಗೆದ್ದು ಸಂಭ್ರಮದ ಅಲೆಯಲ್ಲಿ ತೇಲಿದರು.

ಜೀಲ್‌ಗೆ ಸುಲಭ ಗೆಲುವು: ಬಿರುಸಿನ ಹೊಡೆತಗಳನ್ನು ಪ್ರಯೋಗಿಸಿದ ಭಾರತದ ಜೀಲ್ ದೇಸಾಯಿ ಮೊದಲ ಸುತ್ತಿನ ಪಂದ್ಯದಲ್ಲಿ 6–3, 6–2ರಿಂದ ಜರ್ಮನಿಯ ಸಾರಾ ರೆಬೆಕ್ಕಾ ಸೆಕುಲಿಚ್‌ ಅವರನ್ನು ಮಣಿಸಿದರು.

ವೈದೇಹಿ,ಸಹಜಾಗೆ ಸೋಲು: ಭರವಸೆಯ ಪ್ರತಿಭೆ ವೈದೇಹಿ ಚೌಧರಿ ಅವರ ಸವಾಲು ಮೊದಲ ಸುತ್ತಿನಲ್ಲೇ ಅಂತ್ಯವಾಯಿತು. ಭಾರತದ ಆಟಗಾರ್ತಿ 2–6, 1–6ರಿಂದ ಇಂಡೊನೇಷ್ಯಾದ ಪ್ರಿಸ್ಕಾ ಮೇಡಲಿನ್‌ ನುಗ್ರೊಹೊ ವಿರುದ್ಧ ಸೋತರು. ಪೈಪೋಟಿ ನೀಡದೆ ಸುಲಭವಾಗಿ ಪಂದ್ಯ ಕೈಚೆಲ್ಲಿದರು. ಇನ್ನೊಂದು ಹಣಾಹಣಿಯಲ್ಲಿ ಸಹಜಾ ಯಮಲಪಲ್ಲಿ 6–7, 3–6ರಿಂದ ಲಾತ್ವಿಯಾದ ಡಯಾನಾ ಮರ್ಚಿಕೆವಿಂಚಾ ಎದುರು ಮುಗ್ಗರಿಸಿದರು.

ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ ಥಾಯ್ಲೆಂಡ್‌ನ ಮನಚಾಯಾ ಸವಾಂಗ್‌ಕೆವ್‌ 6–3, 6–3ರಿಂದ ಜಪಾನ್‌ನ ಮಿಸಾಕಿ ದೊಯಿ ಎದುರು, ಸ್ವಿಟ್ಜರ್ಲೆಂಡ್‌ನ ನದೈನ್ ಕೆಲ್ಲರ್ 6–0, 6–4ರಿಂದ ಜಪಾನ್‌ನ ಅಕಿಕೊ ಒಮಯೆ ವಿರುದ್ಧ, ಜೆಕ್‌ ಗಣರಾಜ್ಯದ 15 ವರ್ಷದ ಆಟಗಾರ್ತಿ ಬ್ರೆಂಡಾ ಫ್ರುವಿರ್ತೊವಾ 6–1, 6–0ರಿಂದ ಚೀನಾ ತೈಪೆಯ ಯಾ ಸುನ್‌ ಲೀ ವಿರುದ್ಧ, ಬೋಸ್ನಿಯಾದ ಡಿ ಹರ್ಡ್‌ಜೆಲಸ್‌ 6–4, 6 (5)–7, 6–3ರಿಂದ ಪೋರ್ಚುಗಲ್‌ನ ಫ್ರಾನ್ಸಿಸ್ಕಾ ಜೋರ್ಗ್‌ ವಿರುದ್ಧ ಜಯ ಗಳಿಸಿ ಮುನ್ನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.