ADVERTISEMENT

ಐಟಿಎಫ್‌ ಟೆನಿಸ್‌: ವೆಂಡೆವಿಂಕೆಲ್‌ಗೆ ಸಿಂಗಲ್ಸ್‌ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 21:02 IST
Last Updated 22 ಫೆಬ್ರುವರಿ 2026, 21:02 IST
<div class="paragraphs"><p>ರನ್ನರ್‌ ಅಪ್‌ ವೈಷ್ಣವಿ ಅಡ್ಕರ್ ಹಾಗೂ ಚಾಂಪಿಯನ್‌ ಹ್ಯಾನೆ ವೆಂಡೆವಿಂಕೆಲ್</p></div>

ರನ್ನರ್‌ ಅಪ್‌ ವೈಷ್ಣವಿ ಅಡ್ಕರ್ ಹಾಗೂ ಚಾಂಪಿಯನ್‌ ಹ್ಯಾನೆ ವೆಂಡೆವಿಂಕೆಲ್

   

 ಚಿತ್ರ: ಕೃಷ್ಣಕುಮಾರ್‌ ಪಿ.ಎಸ್‌

ಬೆಂಗಳೂರು: ವೈಲ್ಡ್‌ಕಾರ್ಡ್‌ ಮೂಲಕ ಪ್ರವೇಶ ಪಡೆದು ಶ್ರೇಯಾಂಕ ಆಟಗಾರ್ತಿಯರಿಗೆ ಆಘಾತ ನೀಡಿದ್ದ
ವೈಷ್ಣವಿ ಅಡ್ಕರ್ ಅವರ ಯಶಸ್ಸಿನ ಓಟ ಫೈನಲ್‌ನಲ್ಲಿ ಕೊನೆಗೊಂಡಿತು. ಎರಡನೇ ಶ್ರೇಯಾಂಕದ ಹ್ಯಾನೆ ವೆಂಡೆವಿಂಕೆಲ್ ಅವರು ಭಾನುವಾರ ಏಕಪಕ್ಷೀಯವಾಗಿದ್ದ ಫೈನಲ್‌ನಲ್ಲಿ ವೈಷ್ಣವಿ ಅವರನ್ನು ಸೋಲಿಸಿ ಕೆಪಿಬಿ ಟ್ರಸ್ಟ್‌ ಐಟಿಎಫ್‌ ಮಹಿಳಾ ಓಪನ್ ಡಬ್ಲ್ಯು 100 ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ADVERTISEMENT

ಎಸ್‌.ಎಂ.ಕೃಷ್ಣ ಟೆನಿಸ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬೆಲ್ಜಿಯಮ್‌ನ ಆಟಗಾರ್ತಿ 6–0, 6–1 ರಿಂದ ಜಯಗಳಿಸಿದರು. ವಿಶ್ವ ಕ್ರಮಾಂಕದಲ್ಲಿ 124ನೇ ಸ್ಥಾನದಲ್ಲಿ ರುವ ವೆಂಡೆವಿಂಕೆಲ್‌ ಈ ಟೂರ್ನಿಯುದ್ದಕ್ಕೂ ಪ್ರಾಬಲ್ಯ ಮೆರೆದು ಫೈನಲ್‌ನಲ್ಲೂ ಆಧಿಪತ್ಯ ಮುಂದುವರಿಸಿ 57 ನಿಮಿಷಗಳಲ್ಲಿ ಜಯಗಳಿಸಿದರು.

ಬೆಲ್ಜಿಯಮ್‌ನ ಆಟಗಾರ್ತಿ 100 ಡಬ್ಲ್ಯುಟಿಎ ಅಂಕಗಳ ಜೊತೆಗೆ ಸುಮಾರು ₹14 ಲಕ್ಷ ನಗದು ಬಹುಮಾನ ತಮ್ಮದಾಗಿಸಿಕೊಂಡರು. ಪುಣೆಯ 21 ವರ್ಷ ವಯಸ್ಸಿನ ಆಟಗಾರ್ತಿ ವೈಷ್ಣವಿ ಅವರು ಇಲ್ಲಿನ ಯಶಸ್ಸಿಗಾಗಿ 53 ಡಬ್ಲ್ಯುಟಿಎ ಪಾಯಿಂಟ್ಸ್‌ ಮತ್ತು ₹7.50 ಲಕ್ಷ ನಗದು ಬಹುಮಾನ ಗಳಿಸಿದರು. ವೈಷ್ಣವಿ ವಿಶ್ವ ಕ್ರಮಾಂಕದಲ್ಲಿ 690ನೇ ಸ್ಥಾನದಲ್ಲಿದ್ದಾರೆ.

ವೆಂಡೆವಿಂಕೆಲ್ ಮೊದಲ ಸೆಟ್‌ನ ಆರಂಭದಲ್ಲೇ ಅಡ್ಕರ್ ಅವರ ಸರ್ವ್‌ ಮುರಿದು ಬಲುಬೇಗ 3–0 ಮುನ್ನಡೆ ಸಾಧಿಸಿದರು. ಫೋರ್‌ಹ್ಯಾಂಡ್‌ ಹೊಡೆತಗಳಲ್ಲಿ ಯಶಸ್ಸು ಸಾಧಿಸಿದ ಅವರು ಎದುರಾಳಿ ಎಸಗಿದ ತಪ್ಪುಗಳ ಲಾಭ ಪಡೆದರು.

‘ನನಗೆ ಅವರ (ಅಡ್ಕರ್) ಆಟ ಅಷ್ಟೇನೂ ಪರಿಚಿತವಾಗಿರಲಿಲ್ಲ. ಆದರೆ ಆಕೆ ಕೆಲವು ಉತ್ತಮ ಆಟಗಾರ್ತಿಯನ್ನು ಸೋಲಿಸಿದ್ದು ತಿಳಿದಿತ್ತು. ಇದನ್ನು ಗಮನದಲ್ಲಿರಿಸಿದ್ದೆ. ಹೀಗಾಗಿ ಯಾವ ಹಂತದಲ್ಲೂ ಪಂದ್ಯವನ್ನು ಸುಲಭವಾಗಿ ತೆಗೆದುಕೊಳ್ಳ ಲಿಲ್ಲ’ ಎಂದು ವೆಂಡೆವಿಂಕೆಲ್ ಪ್ರತಿಕ್ರಿಯಿಸಿದರು.

‘ನನಗೆ ಇದು ಉತ್ತಮ ವಾರವಾಗಿತ್ತು. ಕಳೆದ ವರ್ಷ ನನ್ನ ಪಾಲಿಗೆ ಕಠಿಣವಾಗಿತ್ತು. ಇಲ್ಲಿ ಹಲವು ಅಂಶಗಳನ್ನು ಕಲಿತೆ. ನನ್ನ ಆಟದ ಮೇಲೆ ನಂಬಿಕೆ ಮತ್ತು ಆತ್ಮವಿಶ್ವಾಸ ಮೂಡಿದೆ’ ಎಂದು ವೈಷ್ಣವಿ ಅಡ್ಕರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.