ಯಾನಿಕ್ ಸಿನ್ನರ್
ರಾಯಿಟರ್ಸ್ ಚಿತ್ರ
ಮೆಲ್ಬರ್ನ್: ವಿಶ್ವದ ಅಗ್ರಮಾನ್ಯ ಆಟಗಾರ ಇಟಲಿಯ ಯಾನಿಕ್ ಸಿನ್ನರ್ ಅವರು ಭಾನುವಾರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವರೇವ್ ವಿರುದ್ಧ ನೇರ ಸೆಟ್‌ಗಳಿಂದ ಜಯಗಳಿಸಿ, ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡರು.
ರಾಡ್ ಲೇವರ್ ಅರೇನಾದಲ್ಲಿ ನಡೆದ ಹಣಾಹಣಿಯಲ್ಲಿ ಅಗ್ರ ಶ್ರೇಯಾಂಕದ ಸಿನ್ನರ್ 6-3, 7-6 (7/4), 6-3ರಿಂದ ಎರಡನೇ ಶ್ರೇಯಾಂಕದ ಜ್ವರೇವ್ ಅವರನ್ನು ಮಣಿಸಿ, ಸತತ ಎರಡನೇ ಬಾರಿ ಪ್ರಶಸ್ತಿ ಗೆದ್ದರು. ಚೊಚ್ಚಲ ಕಿರೀಟದ ನಿರೀಕ್ಷೆಯಲ್ಲಿದ್ದ 27 ವರ್ಷ ವಯಸ್ಸಿನ ಜರ್ಮನಿಯ ಆಟಗಾರನಿಗೆ ಮತ್ತೆ ನಿರಾಸೆಯಾಯಿತು.
ಅಮೆರಿಕ ಓಪನ್ ಹಾಲಿ ಚಾಂಪಿಯನ್ 23 ವರ್ಷ ವಯಸ್ಸಿನ ಸಿನ್ನರ್ ಈ ಗೆಲುವಿನ ಮೂಲಕ ಗ್ರ್ಯಾನ್‌ಸ್ಲಾಮ್ ಕಿರೀಟವನ್ನು ಮೂರಕ್ಕೆ ಹೆಚ್ಚಿಸಿಕೊಂಡರು. ಈ ಸಾಧನೆ ಮಾಡಿದ ಇಟಲಿಯ ಮೊದಲ ಟೆನಿಸ್‌ಪಟು ಎಂಬ ಹಿರಿಮೆಗೂ ಪಾತ್ರವಾದರು. ಈ ಮೊದಲು ಇಟಲಿಯ ನಿಕೋಲಾ ಪಿಯೆಟ್ರಾಂಜೆಲಿ (1959, 1960ರ ಫ್ರೆಂಚ್ ಓಪನ್) ಎರಡು ಪ್ರಶಸ್ತಿ ಗೆದ್ದಿದ್ದರು.
ಸಿನ್ನರ್ ಅವರು ಮೆಲ್ಬರ್ನ್ ಪಾರ್ಕ್‌ನಲ್ಲಿ ಪ್ರಶಸ್ತಿಯನ್ನು ಉಳಿಸಿಕೊಂಡ ಈ ಶತಮಾನದ ನಾಲ್ಕನೇ ಆಟಗಾರ ಎನಿಸಿಕೊಂಡರು. ಈ ಮೊದಲು ಅಮೆರಿಕದ ಆ್ಯಂಡ್ರೆ ಅಗಾಸಿ, ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಮತ್ತು ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಸತತ ಎರಡು ಬಾರಿ ಪ್ರಶಸ್ತಿ ಗೆದ್ದಿದ್ದರು.
ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಮೂರನೇ ಬಾರಿ ಫೈನಲ್ ತಲುಪಿದ್ದ ಜರ್ಮನಿಯ ಆಟಗಾರನಿಗೆ ಈ ಬಾರಿಯೂ ಪ್ರಶಸ್ತಿ ಗಗನಕುಸುಮವಾಯಿತು. ಅವರು ಸೆಮಿಫೈನಲ್‌ನಲ್ಲಿ ಹತ್ತು ಬಾರಿಯ ಚಾಂಪಿಯನ್ ಜೊಕೊವಿಚ್ ಅವರನ್ನು ಎದುರಿಸಿದ್ದರು. ಮೊದಲ ಸೆಟ್ ಅನ್ನು ಟೈಬ್ರೈಕರ್‌ನಲ್ಲಿ ಕಳೆದುಕೊಂಡ ಜೊಕೊವಿಚ್, ಗಾಯದ ಕಾರಣದಿಂದ ಸ್ಪರ್ಧೆಯಿಂದ ಹಿಂದೆ ಸರಿದರು. ಹೀಗಾಗಿ, ಜ್ವರೇವ್ ಮೊದಲ ಬಾರಿ ಇಲ್ಲಿ ಪ್ರಶಸ್ತಿ ಸುತ್ತು ತಲುಪಿದ್ದರು.
‘ನೀವು ನಿಜಕ್ಕೂ ಅದ್ಭುತ ಆಟಗಾರ. ಇಂದಿನ ದಿನ ನಿಮಗೆ ಕಹಿಯಾಗಿರಬಹುದು. ಎಂದಿಗೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ. ನಿಮ್ಮ ಆಟವನ್ನು ಮುಂದುವರಿಸಿ. ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗಲಿದೆ’ ಎಂದು ಜ್ವರೇವ್ ಅವರನ್ನು ಉದ್ದೇಶಿಸಿ ಯಾನಿಕ್ ಸಿನ್ನರ್ ಹೇಳಿದರು.
ಉದ್ದೀಪನ ಮದ್ದುಸೇವನೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಸಿನ್ನರ್, ಆ ಒತ್ತಡದ ಮಧ್ಯೆಯೂ ಟೂರ್ನಿಯಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸಿದರು. ಹೋದ ವರ್ಷದ ಮಾರ್ಚ್‌ನಲ್ಲಿ ಸಿನ್ನರ್ ಅವರು ನಿಷೇಧಿತ ಮದ್ದು ಕ್ಲೊಸ್ಟೆಬಾಲ್ ಸೇವನೆ ಮಾಡಿದ್ದು ದೃಢಪಟ್ಟಿತ್ತು.
ಇಂಟರ್‌ನ್ಯಾಷನಲ್ ಟೆನಿಸ್ ಇಂಟೆಗ್ರಿಟಿ ಏಜನ್ಸಿ (ಐಟಿಐಎ)ಯು ಸಿನ್ನರ್ ಅವರನ್ನು ದೋಷಮುಕ್ತ ಗೊಳಿಸಿದ ನಂತರ ಇದನ್ನು ಪ್ರಶ್ನಿಸಿ ವಿಶ್ವ ಉದ್ದೀಪನ ಮದ್ದು ಸೇವನೆ ನಿಗ್ರಹ ಘಟಕವು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್) ಮನವಿ ಸಲ್ಲಿಸಿತ್ತು. ಏಪ್ರಿಲ್‌ನಲ್ಲಿ ಪ್ರಕರಣದ ವಿಚಾರಣೆಯನ್ನು ಸಿಎಎಸ್ ನಡೆಸಲಿದೆ.
ಕಳೆದ ವರ್ಷ ಫೈನಲ್‌ನ ಐದು ಸೆಟ್‌ಗಳ ರೋಚಕ ಹಣಾಹಣಿಯಲ್ಲಿ ರಷ್ಯಾದ ಡೇನಿಯಲ್ ಮೆಡ್ವೆಡೇವ್ ಅವರನ್ನು ಸಿನ್ನರ್ ಮಣಿಸಿ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದಿದ್ದರು. ವೃತ್ತಿಜೀವನದ 19ನೇ ಪ್ರಶಸ್ತಿಗೆ ಮುತ್ತಿಕ್ಕಿದ ಅವರು, ಅಜೇಯ ಓಟವನ್ನು 21 ಪಂದ್ಯಗಳಿಗೆ ವಿಸ್ತರಿಸಿಕೊಂಡರು.
‘ಸಿನ್ನರ್ ವಿಶ್ವದ ಅತ್ಯುತ್ತಮ ಆಟಗಾರ. ಈ ಪ್ರಶಸ್ತಿಗೆ ಅವರು ನಿಜವಾಗಲೂ ಅರ್ಹರು’ ಎಂದು ರನ್ನರ್ ಅಪ್ ಜ್ವರೇವ್ ಹೇಳಿದರು.
ಪಂದ್ಯದ ಆರಂಭದಲ್ಲೇ ಹಿಡಿತ ಸಾಧಿಸಿದ ಸಿನ್ನರ್‌ಗೆ ಮೊದಲ ಸೆಟ್‌ನಲ್ಲಿ ಜ್ವರೇವ್ ಅವರಿಂದ ಹೆಚ್ಚಿನ ಪ್ರತಿರೋಧ ಎದುರಾಗಲಿಲ್ಲ. 46ನೇ ನಿಮಿಷ ದಲ್ಲಿ ಮೊದಲ ಸೆಟ್ ಗೆದ್ದ ಇಟಲಿಯ ಆಟಗಾರನಿಗೆ ಎರಡನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ಎದುರಾ ಯಿತು. ರೋಚಕ ಘಟ್ಟ ತಲುಪಿದ ಎರಡನೇ ಸೆಟ್ ಅನ್ನು ಟೈಬ್ರೇಕರ್‌ನಲ್ಲಿ ಸಿನ್ನರ್ ಗೆದ್ದರು. ಕೊನೆಯ ಸೆಟ್‌ನಲ್ಲೂ ಅವರು ನಿರಾಯಾಸವಾಗಿ ಮೇಲುಗೈ ಸಾಧಿಸಿದರು.
₹30,17ಕೋಟಿ
ಯಾನಿಕ್ ಸಿನ್ನರ್ ಗೆದ್ದ ಬಹುಮಾನ
₹16.37ಕೋಟಿ
ಅಲೆಕ್ಸಾಂಡರ್ ಜ್ವರೇವ್ ಪಡೆದ ಬಹುಮಾನ ಮೊತ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.