ADVERTISEMENT

ಕೆಎಸ್‌ಎಲ್‌ಟಿಎ ಕೋರ್ಟ್‌ಗೆ ಕೃಷ್ಣ ಹೆಸರು

ಏರ್‌ಪೋರ್ಟ್‌ ರಸ್ತೆಯಲ್ಲಿ ಮತ್ತೊಂದು ಟೆನಿಸ್‌ ಕ್ರೀಡಾಂಗಣ: ಅಶೋಕ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2025, 0:04 IST
Last Updated 29 ಮಾರ್ಚ್ 2025, 0:04 IST
<div class="paragraphs"><p>ಕಬ್ಬನ್‌ ಪಾರ್ಕ್‌ನಲ್ಲಿರುವ ಕೆಎಸ್‌ಎಲ್‌ಟಿಎ ಕೋರ್ಟ್‌ಗೆ ‌‘ಎಸ್‌.ಎಂ.ಕೃಷ್ಣ ಟೆನಿಸ್‌ ಕ್ರೀಡಾಂಗಣ ಬೆಂಗಳೂರು’ ಎಂದು ಶುಕ್ರವಾರ ನಾಮಕರಣ ಮಾಡಲಾಯಿತು.&nbsp;</p></div>

ಕಬ್ಬನ್‌ ಪಾರ್ಕ್‌ನಲ್ಲಿರುವ ಕೆಎಸ್‌ಎಲ್‌ಟಿಎ ಕೋರ್ಟ್‌ಗೆ ‌‘ಎಸ್‌.ಎಂ.ಕೃಷ್ಣ ಟೆನಿಸ್‌ ಕ್ರೀಡಾಂಗಣ ಬೆಂಗಳೂರು’ ಎಂದು ಶುಕ್ರವಾರ ನಾಮಕರಣ ಮಾಡಲಾಯಿತು. 

   

ಪ್ರಜಾವಾಣಿ ಚಿತ್ರ: ಎಸ್‌.ಕೆ. ದಿನೇಶ್‌

ಬೆಂಗಳೂರು: ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಕ್ರೀಡಾಂಗಣವು ಶುಕ್ರವಾರ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು. ಕಬ್ಬನ್‌ ಪಾರ್ಕ್‌ನಲ್ಲಿರುವ ಸಂಸ್ಥೆಯ ಕೋರ್ಟ್‌ಗೆ ‌ಗಣ್ಯರ ಸಮ್ಮುಖದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್‌.ಎಂ.ಕೃಷ್ಣ ಅವರ ಹೆಸರನ್ನು ಇಡಲಾಯಿತು.

ADVERTISEMENT

ಸಂಸ್ಥೆಯನ್ನು ಎರಡು ದಶಕಗಳ ಕಾಲ ಮುನ್ನಡೆಸಿದ್ದ ಕೃಷ್ಣ ಅವರ ಕೊಡುಗೆಯನ್ನು ಶಾಶ್ವತವಾಗಿ ಸ್ಮರಿಸುವ ಉದ್ದೇಶದಿಂದ ಕೆಎಸ್‌ಎಲ್‌ಟಿಎ ಸರ್ವಾನುಮತ ದಿಂದ ಈ ನಿರ್ಧಾರ ಕೈಗೊಂಡಿದೆ. ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ, ಪುತ್ರಿಯರಾದ ಮಾಳವಿಕಾ ಮತ್ತು ಶಾಂಭವಿ ಅವರ ಸಮ್ಮುಖದಲ್ಲಿ ‘ಎಸ್‌.ಎಂ.ಕೃಷ್ಣ ಟೆನಿಸ್‌ ಕ್ರೀಡಾಂಗಣ ಬೆಂಗಳೂರು’ ಎಂದು ನಾಮಕರಣ ಮಾಡಲಾಯಿತು.

‘ಕೃಷ್ಣ ಅವರ ದೂರದೃಷ್ಟಿಯಿಂದಾಗಿ ರಾಜಧಾನಿಯ ಕೇಂದ್ರಭಾಗದಲ್ಲೇ ಸುಸಜ್ಜಿತ ಟೆನಿಸ್‌ ಕೋರ್ಟ್‌ 26 ವರ್ಷಗಳ ಹಿಂದೆ ನಿರ್ಮಾಣಗೊಂಡಿದೆ. ಅವರು ಈ ಸಂಸ್ಥೆಯ ಅಭಿವೃದ್ಧಿಯ ರೂವಾರಿಯಾಗಿದ್ದು, ಅವರ ಹೆಸರನ್ನು ಯಾವುದೇ ಒತ್ತಡವಿಲ್ಲದೆ, ಮನಪೂರ್ವಕ ವಾಗಿ ಇಡಲಾಗಿದೆ’ ಎಂದು ಕೆಎಸ್‌ಎಲ್‌ಟಿಎ ಅಧ್ಯಕ್ಷ, ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್‌.ಅಶೋಕ ಅಭಿಪ್ರಾಯಪಟ್ಟರು.

‘ಅಧಿಕಾರವಿದ್ದಾಗ ಒಂದು ಸಂಸ್ಥೆಗೆ ಮನಸ್ಫೂರ್ತಿಯಾಗಿ ಕೆಲಸ ಮಾಡಿದರೆ ಏನು ಸಾಧಿಸಬಹುದು ಎಂಬುದಕ್ಕೆ ಕೃಷ್ಣ ಅವರು ಇಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಉತ್ತಮ ಉದಾಹರಣೆ. ಅವರ ಮಾತಿನಲ್ಲಿ ತೂಕ, ಹಿಡಿತವಿತ್ತು. ಆದರೆ, ಇಂದಿನ ರಾಜಕಾರಣಿಗಳ ಮಾತಿನಲ್ಲಿ ಹಿಡಿತಕ್ಕಿಂತ
ಹೊಡೆತಗಳೇ ಹೆಚ್ಚು ಇರುತ್ತವೆ’ ಎಂದು ಹೇಳಿದರು.

‘ಬೆಂಗಳೂರಿನಲ್ಲಿ ಮತ್ತೊಂದು ಅಂತರರಾಷ್ಟ್ರೀಯ ದರ್ಜೆಯ ಟೆನಿಸ್ ಕೋರ್ಟ್‌ ನಿರ್ಮಿಸುವ ಗುರಿಯನ್ನು ಕೆಎಸ್‌ಎಲ್‌ಟಿಎ ಸಂಸ್ಥೆ ಹೊಂದಿದೆ. ಇದಕ್ಕಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಏಳು ಎಕರೆ ಜಾಗ ಮಂಜೂರಾಗಿದೆ. ಅಲ್ಲದೆ, ಈ ವರ್ಷದಿಂದ ಎಸ್‌.ಎಂ.ಕೃಷ್ಣ ಅವರ ಹೆಸರಿನಲ್ಲಿ ಕ್ರೀಡಾಪಟುಗಳಿಗೆ ವಿದ್ಯಾರ್ಥಿವೇತನ ನೀಡಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

‘ಕೃಷ್ಣ ಅವರು ರಾಜಕಾರಣದಷ್ಟೇ ಮಹತ್ವವನ್ನು ಟೆನಿಸ್‌ ಮತ್ತು ಸಂಗೀತಕ್ಕೆ ನೀಡಿದ್ದರು. ರಾಜಕೀಯದ ಮಧ್ಯೆ ಬಿಡುವು ಮಾಡಿಕೊಂಡು ಟೆನಿಸ್‌ ಮತ್ತು ಸಂಗೀತದಲ್ಲಿ ಮಗ್ನರಾಗುತ್ತಿದ್ದರು. ಪಾರ್ಲಿಮೆಂಟ್‌ ಚುನಾವಣೆ ಫಲಿತಾಂಶದ ದಿನ ಅವರಿದ್ದ ಪಕ್ಷವು ಸೋಲುತ್ತಿದ್ದಂತೆ ಟೆನಿಸ್‌ ಆಡಲು
ಹೊರಟು ನಿಂತಿದ್ದರು. ಟೆನಿಸ್‌ ಅವರ ಮೇಲೆ ಅಷ್ಟೊಂದು ಗಾಢ ಪ್ರಭಾವ ಬೀರಿತ್ತು’ ಎಂದು ಪ್ರೇಮಾ ಕೃಷ್ಣ ಸ್ಮರಿಸಿದರು.

ಟ್ರೋಫಿ ಅನಾವರಣ:

ಎಸ್‌.ಎಂ.ಕೃಷ್ಣ ಅವರ ಸ್ಮರಣಾರ್ಥ ಐಟಿಎಫ್‌ ವಿಶ್ವ ಟೆನಿಸ್‌ ಟೂರ್‌ ಪುರುಷರ ಎಂ25 ಟೂರ್ನಿ ಇದೇ 31ರಿಂದ ಏ.6ರವರೆಗೆ ನಡೆಯಲಿದ್ದು, ಇದರ ಟ್ರೋಫಿಯನ್ನು ಆರ್‌.ಅಶೋಕ ಅನಾವರಣ ಮಾಡಿದರು. ಟೂರ್ನಿಯು ಒಟ್ಟು ₹25.67 ಲಕ್ಷ ಬಹುಮಾನ ಮೊತ್ತವನ್ನು ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.