ADVERTISEMENT

ಟೆನಿಸ್ | ಬೆಂಗಳೂರು ಓಪನ್: ಋಷಿ, ಪ್ರಜ್ವಲ್‌ ದೇವ್‌ಗೆ ವೈಲ್ಡ್ ಕಾರ್ಡ್‌ ಗೌರವ

ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್‌ ಟೂರ್ನಿ: ಅರ್ಹತಾ ಸುತ್ತಿನಲ್ಲಿ 24 ಮಂದಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 13:00 IST
Last Updated 4 ಫೆಬ್ರುವರಿ 2022, 13:00 IST
ಋಷಿ ರೆಡ್ಡಿ –ಪ್ರಜಾವಾಣಿ ಚಿತ್ರ
ಋಷಿ ರೆಡ್ಡಿ –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯದ ಯುವ ಆಟಗಾರರಾದ ಋಷಿ ರೆಡ್ಡಿ ಮತ್ತು ಎಸ್‌.ಡಿ ಪ್ರಜ್ವಲ್‌ ದೇವ್ ಅವರಿಗೆ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಗೆ ವೈಲ್ಡ್ ಕಾರ್ಡ್ ಪ್ರವೇಶ ನೀಡಲಾಗಿದೆ.

ಒಟ್ಟು ಮೂರು ವೈಲ್ಡ್ ಕಾರ್ಡ್‌ಗಳ ಪೈಕಿ ಮೊದಲನೆಯದು ಸಾಕೇತ್ ಮೈನೇನಿ ಅವರ ಪಾಲಾಗಿತ್ತು. ಉಳಿದೆರಡರ ಕುರಿತು ಶುಕ್ರವಾರ ಆಯೋಜಕರು ಮಾಹಿತಿ ನೀಡಿದ್ದಾರೆ. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಂಗಣದಲ್ಲಿ ಸೋಮವಾರದಿಂದ ಟೂರ್ನಿ ನಡೆಯಲಿದೆ.

ಕೆಲವು ತಿಂಗಳ ಹಿಂದೆ ಇದೇ ಅಂಗಣದಲ್ಲಿ ನಡೆದ ಕರ್ನಾಟಕ ಓಪನ್ ಟೂರ್ನಿಯ ₹ 1 ಲಕ್ಷ ಬಹುಮಾನ ಮೊತ್ತವನ್ನು ತಮ್ಮದಾಗಿಸಿಕೊಂಡಿರುವ ಋಷಿ ಡಿಸೆಂಬರ್‌ನಲ್ಲಿ ಕೊನೆಯದಾಗಿ ಅಂತರರಾಷ್ಟ್ರೀಯ ಪಂದ್ಯದಲ್ಲಿ ಕಣಕ್ಕೆಇಳಿದಿದ್ದರು. ಐಟಿಎಫ್‌ ಎಂ–15 ದೋಹಾ ಟೂರ್ನಿಯಲ್ಲಿ ಅವರು ಆಡಿದ್ದರು.

ADVERTISEMENT

ಮೈಸೂರಿನವರಾದ ಪ್ರಜ್ವಲ್ ಅವರು ರೋಹನ್ ಬೋಪಣ್ಣ ಟೆನಿಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. 25 ವರ್ಷದ ಆಟಗಾರ 2019ರಲ್ಲಿ ಹರಾರೆಯಲ್ಲಿ ನಡೆದ ಐಟಿಎಫ್‌ ಟೂರ್ನಿಯ ಡಬಲ್ಸ್‌ ಪ್ರಶಸ್ತಿ ಗಳಿಸಿದ್ದರು. ಆ ಟೂರ್ನಿಯಲ್ಲಿ ಋಷಿ, ಅವರ ಜೊತೆಗಾರ ಆಗಿದ್ದರು.

ನಿಕ್ಕಿ ಪೂಣಚ್ಚ, ಕರಣ್‌ ಸಿಂಗ್‌, ಆದಿಲ್‌ ಕಲ್ಯಾಣಪುರ್‌ ಮತ್ತು ಅರ್ಜುನ್ ಖಾಡೆ ಅವರಿಗೆ ಅರ್ಹತಾ ಸುತ್ತಿನಲ್ಲಿ ಆಡಲು ವೈಲ್ಡ್ ಕಾರ್ಡ್ ಪ್ರವೇಶ ನೀಡಲಾಗಿದೆ. ಅರ್ಹತಾ ಸುತ್ತಿನ ಪಂದ್ಯಗಳು ಭಾನುವಾರ ಆರಂಭವಾಗಲಿವೆ. ಒಟ್ಟು 24 ಆಟಗಾರರು ಈ ಸುತ್ತಿನಲ್ಲಿ ಆಡಲಿದ್ದು ಆರು ಮಂದಿ ಮುಖ್ಯ ಸುತ್ತಿಗೆ ಲಗ್ಗೆ ಇರಲಿಸಲಿದ್ದಾರೆ.

‘ವೈಲ್ಡ್ ಕಾರ್ಡ್ ಪ್ರವೇಶ ಪಡೆದಿರುವುದು ರೋಮಾಂಚನವುಂಟುಮಾಡಿದೆ. ಆಯೋಜಕರು ನನ್ನ ಮೇಲೆ ಭರವಸೆ ಇರಿಸಿದ್ದಾರೆ. ಅದಕ್ಕೆ ತಕ್ಕಂತೆ ಟೂರ್ನಿಯಲ್ಲಿ ಸಾಮರ್ಥ್ಯ ಪ್ರದರ್ಶಿಸಲು ಪ್ರಯತ್ನಿಸುವೆ. ಆಟದ ಮೇಲೆ ಹೆಚ್ಚು ಗಮನ ನೀಡುತ್ತಿದ್ದು ಲೋಪಗಳನ್ನು ಸರಿಪಡಿಸಿಕೊಳ್ಳುತ್ತಿದ್ದೇನೆ. ಇದಕ್ಕೆ ತಕ್ಕ ಪ್ರತಿಫಲ ಸಿಗುತ್ತಿದೆ’ ಎಂದು ಬಿಬಿಎ ವಿದ್ಯಾರ್ಥಿಯಾಗಿರುವ 23 ವರ್ಷದ ಋಷಿ ಹೇಳಿದರು.

‘ಕೆಲವು ಆಟಗಾರರನ್ನು ಟಿವಿ ಪರದೆಯಲ್ಲಿ ಮಾತ್ರ ನೋಡಿದ್ದೇನೆ. ಇದೀಗ ಅವರನ್ನು ಹತ್ತಿರದಿಂದ ಕಾಣಲು ಮತ್ತು ಅವರ ವಿರುದ್ಧ ಸೆಣಸಾಡಲು ಅವಕಾಶ ಲಭಿಸಿದೆ. ಈ ಅವಕಾಶಕ್ಕಾಗಿ ಆಯೋಜಕರಿಗೆ ಹೃದಯಾಂತರಾಳದಿಂದ ಕೃತಜ್ಞತೆ ಸಲ್ಲಿಸುತ್ತಿದ್ದೇನೆ’ ಎಂದು ಅವರು ನುಡಿದರು.

ವೈಲ್ಡ್ ಕಾರ್ಡ್ ಪ್ರವೇಶ ಪಡೆದಿರುವುದಕ್ಕೆ ಪ್ರಜ್ವಲ್ ಕೂಡ ಖುಷಿ ವ್ಯಕ್ತಪಡಿಸಿದ್ದಾರೆ ‘ಇಂಥ ಟೂರ್ನಿಯೊಂದರಲ್ಲಿ ಆಡಲು ಅವಕಾಶ ಲಭಿಸಿರುವುದು ಅತ್ಯಂತ ಸಂತಸದ ವಿಷಯ. ನನ್ನ ಸಾಮರ್ಥ್ಯದ ಮೇಲೆ ಭರವಸೆ ಇರಿಸಿಕೊಂಡಿರುವುದಕ್ಕೆ ಆಯೋಜಕರಿಗೆ ಧನ್ಯವಾದ ಹೇಳಲೇಬೇಕು. ನಾನು ಫಿಟ್‌ನೆಸ್ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದೇನೆ. ಬೆಂಗಳೂರು ಓಪನ್‌ನಲ್ಲಿ ಪ್ರಬಲ ಪೈಪೋಟಿ ಎದುರಾಗಲಿದೆ. ಆದರೂ ನನ್ನ ಸಹಜ ಶೈಲಿಯಲ್ಲಿ ಆಡಿ ಯಶಸ್ವಿಯಾಗಲು ಪ್ರಯತ್ನಿಸುವೆ’ ಎಂದು ತಿಳಿಸಿದ್ದಾರೆ.

*

ಋಷಿ ಮತ್ತು ಪ್ರಜ್ವಲ್, ಕರ್ನಾಟಕದ ಅತ್ಯುತ್ತಮ ಆಟಗಾರರು. ಅವರ ಸಾಮರ್ಥ್ಯವನ್ನು ಪರಿಗಣಿಸಲು ಖುಷಿಯಾಗುತ್ತಿದೆ.
-ಸುನಿಲ್ ಯಜಮಾನ್‌ ಟೂರ್ನಿಯ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.