ADVERTISEMENT

ರಫೆಲ್ ನಡಾಲ್ ಶುಭಾರಂಭ

ಅಮೆರಿಕ ಓಪನ್ ಟೆನಿಸ್ ಟೂರ್ನಿ: ಥೀಮ್‌, ತಿಸಿಪಸ್‌, ಕಚನೊವ್‌, ಬೌಟಿಸ್ಟಾಗೆ ನಿರಾಸೆ

ಏಜೆನ್ಸೀಸ್
Published 28 ಆಗಸ್ಟ್ 2019, 19:45 IST
Last Updated 28 ಆಗಸ್ಟ್ 2019, 19:45 IST
ಜಾನ್ ಮಿಲ್ಮ್ಯಾನ್ ಎದುರಿನ ಪಂದ್ಯದಲ್ಲಿ ಚೆಂಡು ರಿಟರ್ನ್ ಮಾಡಿದ ಸ್ಪೇನ್‌ನ ರಫೆಲ್ ನಡಾಲ್ –ಎಎಫ್‌ಪಿ ಚಿತ್ರ
ಜಾನ್ ಮಿಲ್ಮ್ಯಾನ್ ಎದುರಿನ ಪಂದ್ಯದಲ್ಲಿ ಚೆಂಡು ರಿಟರ್ನ್ ಮಾಡಿದ ಸ್ಪೇನ್‌ನ ರಫೆಲ್ ನಡಾಲ್ –ಎಎಫ್‌ಪಿ ಚಿತ್ರ   

ನ್ಯೂಯಾರ್ಕ್‌: ನಾಲ್ಕನೇ ಪ್ರಶಸ್ತಿ ಮೇಲೆ ಕಣ್ಣಿಟ್ಟು ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಕಣಕ್ಕೆ ಇಳಿದಿರುವ ಸ್ಪೇನ್‌ನ ರಫೆಲ್ ನಡಾಲ್ ಅವರು ‌ಶುಭಾರಂಭ ಮಾಡಿದ್ದಾರೆ. ಆರ್ಥರ್ ಆ್ಯಶೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ನಡಾಲ್6-3, 6-2, 6-2ರಲ್ಲಿ ಆಸ್ಟ್ರೇಲಿಯಾದಜಾನ್ ಮಿಲ್ಮ್ಯಾನ್ ಅವರನ್ನು ಮಣಿಸಿದರು.

2010, 2013 ಮತ್ತು 2017ರಲ್ಲಿ ಪ್ರಶಸ್ತಿ ಗೆದ್ದಿದ್ದ ನಡಾಲ್‌ ಈ ಬಾರಿ ದ್ವಿತೀಯ ಶ್ರೇಯಾಂಕದ ಆಟಗಾರ. ವಿಶ್ವ ಕ್ರಮಾಂಕದಲ್ಲಿ 60ನೇ ಸ್ಥಾನದಲ್ಲಿರುವ ಮಿಲ್ಮ್ಯಾನ್ ಕಳೆದ ಬಾರಿ ರೋಜರ್ ಫೆಡರರ್‌ ಅವರನ್ನು ಮಣಿಸಿ ಗಮನ ಸೆಳೆದಿದ್ದರು. ಹೀಗಾಗಿ ಬುಧವಾರದ ಪಂದ್ಯದ ಬಗ್ಗೆ ಕುತೂಹಲ ಕೆರಳಿತ್ತು. ಆದರೆ 2 ತಾಸು ನಡೆದ ಹಣಾಹಣಿಯಲ್ಲಿ ನಡಾಲ್‌ಗೆ ಸಾಟಿಯಾಗಲು ಅವರಿಗೆ ಸಾಧ್ಯವಾಗಲಿಲ್ಲ.

‘ಮಿಲ್ಮ್ಯಾನ್ ಕಳೆದ ಬಾರಿ ತಮ್ಮ ಸಾಮರ್ಥ್ಯ ಏನೆಂದು ತೋರಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಎಚ್ಚರಿಕೆಯಿಂದಲೇ ಕಣಕ್ಕೆ ಇಳಿದಿದ್ದೆ. ಇಲ್ಲಿ ಹತ್ತಾರು ಪಂದ್ಯಗಳನ್ನು ಆಡಿದ್ದೇನೆ. ಆದರೂ ಮೊದಲ ಪಂದ್ಯದ ಆತಂಕ ಇದ್ದೇ ಇತ್ತು. ಆದರೆ ಚೆನ್ನಾಗಿಯೇ ಆಡಲು ಸಾಧ್ಯವಾದದ್ದು ಖುಷಿ ನೀಡಿದೆ’ ಎಂದು ನಡಾಲ್ ಹೇಳಿದರು.

ADVERTISEMENT

ಥೀಮ್‌, ತಿಸಿಪಸ್‌ಗೆ ನಿರಾಸೆ: ವಿಶ್ವದ ಅಗ್ರ 10ರಲ್ಲಿರುವ ನಾಲ್ವರು ಆಟಗಾರರಾದ ಡೊಮಿನಿಕ್ ಥೀಮ್‌, ಸ್ಟಿಫನೊಸ್‌ ತಿತಿಪಸ್‌, ಕರೇನ್ ಕಚನೊವ್‌ ಮತ್ತು ರಾಬರ್ಟ್‌ ಬೌಟಿಸ್ಟಾ ಆಗುಟ್ ಬುಧವಾರ ಸೋಲು ಕಂಡು ಹೊರಬಿದ್ದರು.

‌ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಎರಡು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಥೀಮ್‌ಗೆ ಇಟಲಿಯ ಥಾಮಸ್ ಫ್ಯಾಬಿಯಾನೊ ನಿರಾಸೆ ಮೂಡಿಸಿದರು. ಅವರು 6–4, 3–6, 6–3, 6–2ರಲ್ಲಿ ಗೆಲುವು ಸಾಧಿಸಿದರು. ಆಸ್ಟ್ರಿಯಾದ ಥೀಮ್ ವಿಂಬಲ್ಡನ್ ಟೂರ್ನಿಯಲ್ಲೂ ಮೊದಲ ಸುತ್ತಿನಲ್ಲಿ ಸೋತಿದ್ದರು.

8ನೇ ಶ್ರೇಯಾಂಕದ ಗ್ರೀಕ್‌ ಆಟಗಾರ ತಿತಿಪಸ್ ರೋಚಕ ಪಂದ್ಯದಲ್ಲಿ ಯುವ ಆಟಗಾರ ಆ್ಯಂಡ್ರೆ ರುಬ್ಲೆಗೆ ಮಣಿದರು. 4 ತಾಸು ನಡೆದ ಹಣಾಹಣಿಯಲ್ಲಿ 4–6, 7–6 (7/5), 7–6 (7/9) ಮತ್ತು 7–5ರಲ್ಲಿ ರುಬ್ಲೆ ಗೆಲುವು ಸಾಧಿಸಿದರು.

4ನೇ ಶ್ರೇಯಾಂಕದ ಆಟಗಾರ ರಷ್ಯಾದ ಕಚನೊವ್‌ ಕೆನಡಾದ ವಾಸೆಕ್ ಪೊಪಿಸಿಲ್‌ಗೆ 6–4, 5–7, 5–7, 6–4, 3–6ರಲ್ಲಿ ಮಣಿದರು. 6ನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವೆರೆವ್ 6–1, 6–3, 3–6, 4–6, 6–2ರಲ್ಲಿ ಮಾಲ್ಡೊವ್‌ನ ರಾಡು ಅಲ್ಬೋಟ್ ಅವರ ವಿರುದ್ಧ ಜಯ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.