ADVERTISEMENT

ವಿಂಬಲ್ಡನ್: ನೊವಾಕ್ ಜೊಕೊವಿಚ್‌ಗೆ ಏಳನೇ ಕಿರೀಟ

ಏಜೆನ್ಸೀಸ್
Published 10 ಜುಲೈ 2022, 18:11 IST
Last Updated 10 ಜುಲೈ 2022, 18:11 IST
ಸರ್ಬಿಯಾದ ನೊವಾಕ್ ಜೊಕೊವಿಚ್
ಸರ್ಬಿಯಾದ ನೊವಾಕ್ ಜೊಕೊವಿಚ್   

ಲಂಡನ್: ಸರ್ಬಿಯಾದ ನೊವಾಕ್ ಜೊಕೊವಿಚ್ ಭಾನುವಾರ ತಮ್ಮ ಎದುರಾಳಿ ನಿಕ್ ಕಿರ್ಗಿಯೊಸ್ ಏಕಾಗ್ರತೆ ಕಳೆದುಕೊಳ್ಳುವುದನ್ನು ಕಾದರು. ಅವರ ತಾಳ್ಮೆಗೆ ಕೊನೆಗೂ ಅದರ ಫಲ ಸಿಕ್ಕಿತು.

ಸೆಂಟರ್‌ಕೋರ್ಟ್‌ನಲ್ಲಿ ನಡೆದ ರೋಚಕ ಫೈನಲ್‌ನಲ್ಲಿ ನೊವಾಕ್ 4-6, 6-3, 6-4, 7-6 ರಿಂದ ಟೈಬ್ರೇಕರ್‌ನಲ್ಲಿ ಆಸ್ಟ್ರೇಲಿಯಾದ ನಿಕ್ ಕಿರ್ಗಿಯೊಸ್ ವಿರುದ್ಧ ಜಯಿಸಿದರು. ಸತತ ನಾಲ್ಕನೇ ವರ್ಷ ಹಾಗೂ ಒಟ್ಟಾರೆ ಏಳನೇ ಬಾರಿ ವಿಂಬಲ್ಡನ್‌ ಟ್ರೋಫಿಗೆ ಮುತ್ತಿಕ್ಕಿದರು.ಅದರೊಂದಿಗೆ 21ನೇ ಗ್ರ್ಯಾನ್‌ಸ್ಲಾಂ ಕಿರೀಟ ಧರಿಸಿದರು. ರೋಜರ್ ಫೆಡರರ್ ದಾಖಲೆಯನ್ನು ಸರಿಗಟ್ಟಿದರು. ರಫೆಲ್ ನಡಾಲ್ 22 ಪ್ರಶಸ್ತಿ ಜಯಿಸಿದ ದಾಖಲೆ ಹೊಂದಿದ್ದಾರೆ. ಆದರೆ ವಿಂಬಲ್ಡನ್‌ ಪ್ರಶಸ್ತಿಯನ್ನು ರೋಜರ್ ಎಂಟು ಸಲ ಗೆದ್ದಿದ್ದು, ನೊವಾಕ್‌ ಎರಡನೇ ಸ್ಥಾನದಲ್ಲಿದ್ಧಾರೆ.

ಅಗ್ರಶ್ರೇಯಾಂಕದ ಆಟಗಾರ ನೊವಾಕ್ ಹುಲ್ಲಿನಂಕಣದಲ್ಲಿ ಸತತ 28ನೇ ಪಂದ್ಯದಲ್ಲಿ ಅಜೇಯ ಓಟ ದಾಖಲಿಸಿದರು.

ADVERTISEMENT

ಮಧ್ಯಾಹ್ನದ ಚುರುಕು ಬಿಸಿಲಿನಲ್ಲಿ ಆರಂಭವಾದ ಪಂದ್ಯದ ಮೊದಲ ಸೆಟ್‌ನಲ್ಲಿ ನಿಕ್ ಮೇಲುಗೈ ಸಾಧಿಸಿದರು. ಆದರೆ ಈ ಹಿನ್ನಡೆಯನ್ನೇ ತಮ್ಮ ಗೆಲುವಿಗೆ ಮೆಟ್ಟಿಲಾಗಿಸಿಕೊಂಡ ಅನುಭವಿ ನೊವಾಕ್, ಕೌಶಲಭರಿತ ಆಟದೊಂದಿಗೆ ಕಿರ್ಗಿಯೊಸ್‌ ಬಸವಳಿಯುವಂತೆ ಮಾಡಿದರು.

35 ವರ್ಷದ ನೊವಾಕ್ ಎರಡು ಮತ್ತು ಮೂರನೇ ಸೆಟ್‌ಗಳಲ್ಲಿ ತಮ್ಮ ಚುರುಕಾದ ಆಟದ ಮೂಲಕ ಎದುರಾಳಿಯನ್ನು ಹಣಿದರು. ಬ್ಯಾಕ್‌ಹ್ಯಾಂಡ್ ಮತ್ತು ಫೋರ್‌ಹ್ಯಾಂಡ್ ಹೊಡೆತಗಳ ರಸದೌತಣ ನೀಡಿದರು.

ಕ್ವಾರ್ಟರ್‌ಫೈನ್‌ನಲ್ಲಿಯೂ ನೊವಾಕ್ ಅವರು ಜೆನಿಕ್ ಸಿನ್ನರ್ ಎದುರು ಎರಡು ಸೆಟ್‌ಗಳ ಹಿನ್ನಡೆ ಅನುಭವಿಸಿ ನಂತರ ತಿರುಗೇಟು ನೀಡಿದ್ದರು. ಸೆಮಿಫೈನಲ್‌ನಲ್ಲಿಯೂ ಕ್ಯಾಮ್ ನೊರಿ ವಿರುದ್ಧ ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ್ದರು.

ಹೋದ ವರ್ಷದ ಟೂರ್ನಿಯ ಫೈನಲ್‌ನಲ್ಲಿಯೂ ಜೊಕೊವಿಚ್ ಆರಂಭಿಕ ಸೆಟ್‌ನಲ್ಲಿ ಸೋತು ನಂತರ ತಿರುಗೇಟು ನೀಡಿದ್ದರು. 2019ರ ಫೈನಲ್‌ನಲ್ಲಿ ಫೆಡರರ್ ವಿರುದ್ಧ ರೋಚಕ ಜಯ ಸಾಧಿಸಿದ್ದರು.

ಆದರೆ ಇಲ್ಲಿ ಕೊನೆಯ ಸೆಟ್‌ನಲ್ಲಿ ನಿಕ್ ಕಠಿಣ ಪೈಪೋಟಿಯೊಡ್ಡಿದರು. 6–6ರವರೆಗೂ ಸೆಟ್‌ ತುರುಸಿನಿಂದ ಕೂಡಿತ್ತು. ಕೊನೆಯ ಸೆಟ್‌ ಟೈಬ್ರೇಕರ್‌ನಲ್ಲಿ ನಿಕ್ ಮಾಡಿದ ತಪ್ಪುಗಳು ದುಬಾರಿಯಾದವು. ನೊವಾಕ್ ಇದರ ಲಾಭ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.