ಪ್ರಶಸ್ತಿಯೊಂದಿಗೆ ಬ್ರಿಟನ್‌ನ ಒಲಿವರ್ ಕ್ರಾಫರ್ಡ್
–ಪ್ರಜಾವಾಣಿ ಚಿತ್ರ
ಬೆಂಗಳೂರು: ಎರಡನೇ ಶ್ರೇಯಾಂಕದ ಒಲಿವರ್ ಕ್ರಾಫರ್ಡ್ ಅವರು ಎಸ್.ಎಂ.ಕೃಷ್ಣ ಸ್ಮರಣಾರ್ಥ ಓಪನ್ ಐಟಿಎಫ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಕಿರೀಟ ಮುಡಿಗೇರಿಸಿಕೊಂಡರು.
ಕಬ್ಬನ್ ಪಾರ್ಕ್‌ನಲ್ಲಿರುವ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಎಸ್.ಎಂ.ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಐಟಿಎಫ್ ಎಂ25 ಟ್ರೋಫಿ ಟೂರ್ನಿಯ ಫೈನಲ್‌ನಲ್ಲಿ ಬ್ರಿಟನ್‌ನ 25 ವರ್ಷ ವಯಸ್ಸಿನ ಕ್ರಾಫರ್ಡ್ 5-2 ಗೇಮ್‌ಗಳ ಮುನ್ನಡೆಯಲ್ಲಿದ್ದಾಗ ಅಗ್ರಶ್ರೇಯಾಂಕದ ಜೇ ಕ್ಲಾರ್ಕ್ ಗಾಯಾಳಾಗಿ ಸ್ಪರ್ಧೆಯಿಂದ ಹಿಂದೆ ಸರಿದರು.
ಒಟ್ಟು ₹25.67 ಲಕ್ಷ ಬಹುಮಾನ ಮೊತ್ತವನ್ನು ಒಳಗೊಂಡಿದ್ದ ಟೂರ್ನಿಯಲ್ಲಿ ಪ್ರಶಸ್ತಿ ವಿಜೇತ ಕ್ರಾಫರ್ಡ್ ₹3.94 ಲಕ್ಷ ಬಹುಮಾನದೊಂದಿಗೆ 25 ಎಟಿಪಿ ಪಾಯಿಂಟ್ಸ್
ಗಳನ್ನು ತನ್ನದಾಗಿಸಿಕೊಂಡರು. ಕ್ರಾಫರ್ಡ್‌ಗೆ ಇದು ಸತತ ಮೂರನೇ ಐಟಿಎಫ್ ಎಂ25 ಟ್ರೋಫಿ ಮತ್ತು ಋತುವಿನ ಒಟ್ಟಾರೆ ನಾಲ್ಕನೇ ಪ್ರಶಸ್ತಿಯಾಗಿದೆ.
26 ವರ್ಷ ವಯಸ್ಸಿನ ಕ್ಲಾರ್ಕ್ ಕಳೆದ ಎಂಟು ವಾರಗಳಿಂದ ಭಾರತ ಪ್ರವಾಸದಲ್ಲಿದ್ದು, ಈ ವೇಳೆ ಸತತ ನಾಲ್ಕು ಟೂರ್ನಿಗಳಲ್ಲಿ ಫೈನಲ್ ತಲುಪಿದ್ದರು. ಮಾನಸಿಕವಾಗಿ ಮತ್ತು ದೈಹಿಕವಾಗಿ ದಣಿದ್ದಿದ್ದ ಅವರು, ಬಲಗಾಲಿನ ನೋವಿನೊಂದಿಗೆ ಪ್ರಶಸ್ತಿ ಸುತ್ತಿನಲ್ಲಿ ಕಣಕ್ಕೆ ಇಳಿದಿದ್ದರು.
ಇದು ಬ್ರಿಟನ್ ಆಟಗಾರರ ಸೆಣಸಾಟವಾಗಿತ್ತು. ವಿಶ್ವ ರ‍್ಯಾಂಕಿಂಗ್‌ನಲ್ಲಿ 277 ಸ್ಥಾನ ಹೊಂದಿದ್ದ ಕ್ಲಾರ್ಕ್‌ನ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದರು. ಆದರೆ, 293ನೇ ಕ್ರಮಾಂಕದ ಕ್ರಾಫರ್ಡ್ ಅವರ ಚುರುಕಿನ ಆಟದ ಎದುರು ಕ್ಲಾರ್ಕ್ ನಿರುತ್ತರರಾದರು. ಮೊದಲ ಸೆಟ್‌ನಲ್ಲಿ 2-5
ಹಿನ್ನಡೆಯಲ್ಲಿದ್ದಾಗ ಕ್ಲಾರ್ಕ್ ನಿವೃತ್ತಿ ಪಡೆದರು.
ವೃತ್ತಿಜೀವನದಲ್ಲಿ ಕ್ಲಾರ್ಕ್ ಮತ್ತು ಕ್ರಾಫರ್ಡ್ ಅವರಿಗೆ ಇದು ಎರಡನೇ ಮುಖಾಮುಖಿ. ಇದಕ್ಕೂ ಮೊದಲು 2023ರ ಮೇ ತಿಂಗಳಲ್ಲಿ ವರ್ನಮೊ ಐಟಿಎಫ್ ಎಂ25 ಟೂರ್ನಿಯ ಸೆಮಿಫೈನಲ್‌ನ ರೋಚಕ ಹಣಾಹಣಿಯಲ್ಲಿ ಕ್ರಾಫರ್ಡ್ 5-7, 7-6(2), 7-6(6)ರ ಮೂರು ಸೆಟ್‌ಗಳಿಂದ ಕ್ಲಾರ್ಕ್ ಅವರನ್ನು ಮಣಿಸಿದ್ದರು. ಹೀಗಾಗಿ, ಭಾನುವಾರದ ಪಂದ್ಯದಲ್ಲಿ ನಿಕಟ ಪೈಪೋಟಿ ನಿರೀಕ್ಷಿಸಲಾಗಿತ್ತು.
‘ಇದು ನಿರಾಶಾದಾಯಕ ಅಂತ್ಯ. ಆದರೆ, ಸ್ಪರ್ಧೆಯಿಂದ ಹಿಂದೆ ಸರಿಯುವ ಮೂಲಕ ಕ್ಲಾರ್ಕ್ ಅವರು ತಮ್ಮ ದೇಹಕ್ಕೆ ಆಗಬಹುದಾದ ಇನ್ನಷ್ಟು ಹಾನಿಯನ್ನು ತಪ್ಪಿಸಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು, ಈ ಋತುವಿನಲ್ಲಿ ಭಾರತದ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ’ ಎಂದು ಕ್ರಾಫರ್ಡ್ ಪ್ರತಿಕ್ರಿಯಿಸಿದರು.
‘ಸತತ ನಾಲ್ಕು ವಾರಗಳಲ್ಲಿ ಹಾರ್ಡ್ ಕೋರ್ಟ್‌ನಲ್ಲಿ 20 ಪಂದ್ಯಗಳನ್ನು ಆಡಿದ್ದೆ. ವಿಶೇಷವಾಗಿ ಸರ್ವ್ ಮಾಡುವಾಗ ತೀವ್ರವಾಗಿ ಕಾಲುನೋವು ಕಾಡಿತು. ಆಟ ಮುಂದುವರಿಸಿದರೆ ನೋವು ಇನ್ನಷ್ಟು ಜಾಸ್ತಿಯಾಗುವ ಅಪಾಯವಿತ್ತು’ ಎಂದು ರನ್ನರ್ ಅಪ್ ಕ್ಲಾರ್ಕ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.