ADVERTISEMENT

ಪ್ರೆಂಚ್ ಓಪನ್ ಟೆನಿಸ್ ಟೂರ್ನಿ: ಗೆದ್ದ ಒಸಾಕ; ಬಿದ್ದ ಕರ್ಬರ್‌

ಪೆಟ್ರಾ ಕ್ವಿಟೋವಾ, ಫಾಬಿಯೊ ಫಾಗ್ನಿನಿಗೆ ಗೆಲುವು

ರಾಯಿಟರ್ಸ್
Published 30 ಮೇ 2021, 14:58 IST
Last Updated 30 ಮೇ 2021, 14:58 IST
ಚೆಂಡು ರಿಟರ್ನ್ ಮಾಡಲು ಮುಂದಾದ ನವೊಮಿ ಒಸಾಕ –ರಾಯಿಟರ್ಸ್ ಚಿತ್ರ
ಚೆಂಡು ರಿಟರ್ನ್ ಮಾಡಲು ಮುಂದಾದ ನವೊಮಿ ಒಸಾಕ –ರಾಯಿಟರ್ಸ್ ಚಿತ್ರ   

ಪ್ಯಾರಿಸ್: ಎದುರಾಳಿಯನ್ನು ನೇರ ಸೆಟ್‌ಗಳಿಂದ ಮಣಿಸಿದ ಜಪಾನ್‌ನ ನವೊಮಿ ಒಸಾಕ ಅವರು ಫ್ರೆಂಚ್ ಓಪನ್ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಮೊದಲ ದಿನವಾರ ಭಾನುವಾರ ನಡೆದ ಹಣಾಹಣಿಯಲ್ಲಿ ಒಸಾಕ ರೊಮೇನಿಯಾದ ಪ್ಯಾಟ್ರಿಸಿಯಾ ಮರಿಯಾ ಟಿಗ್ ವಿರುದ್ಧ 6-4, 7-6(4)ರಲ್ಲಿ ಜಯ ಗಳಿಸಿದರು.

ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ 23 ವರ್ಷದ ಒಸಾಕ ಸುಡುಬಿಸಲಿನ ಫಿಲಿಪ್ ಚಾಟ್ರಿಯರ್ ಕೋರ್ಟ್‌ನಲ್ಲಿ ಅಮೋಘ ಆಟದ ಮೂಲಕ ಮಿಂಚಿದರು. 63ನೇ ಕ್ರಮಾಂಕದ ಟಿಗ್‌ ವಿರುದ್ಧ ಮೊದಲ ಸೆಟ್‌ನಲ್ಲಿ 5–2ರ ಮುನ್ನಡೆ ಸಾಧಿಸಿದರು. ಕೊನೆಯಲ್ಲಿ ರೊಮೇನಿಯಾ ಆಟಗಾರ್ತಿ ತಿರುಗೇಟು ನೀಡಿದರೂ ಜಯ ಗಳಿಸಲು ಸಾಧ್ಯವಾಗಲಿಲ್ಲ.

ಎರಡನೇ ಸೆಟ್‌ನಲ್ಲಿ ಟಿಗ್ ಪ್ರಬಲ ಪೈಪೋಟಿ ನೀಡಿದರು. ಒಸಾಕ ಗೆಲುವಿನ ಹೊಸ್ತಿಲಿನಲ್ಲಿದ್ದಾಗ ಬ್ರೇಕ್ ಪಾಯಿಂಟ್ ಮತ್ತು ಮ್ಯಾಚ್ ಪಾಯಿಂಟ್‌ ಉಳಿಸಿಕೊಂಡ ಟಿಗ್ ಸೆಟ್‌ ಅನ್ನು ಟೈಬ್ರೇಕರ್‌ನತ್ತ ಕೊಂಡೊಯ್ದರು. ಆದರೆ ಕೊನೆಯಲ್ಲಿ ಒಸಾಕ ಗೆಲುವು ತಮ್ಮದಾಗಿಸಿಕೊಂಡರು.

ADVERTISEMENT

ಮತ್ತೊಂದು ಪಂದ್ಯದಲ್ಲಿ ರೊಮೇನಿಯಾದ ಅನಾ ಬೊಗ್ದಾನ್ 6-1, 6-3ರಲ್ಲಿ ಇಟಲಿಯ ಎಲಿಜಬೆತಾ ಕೊಸಿಯಾರೆಟೊ ವಿರುದ್ಧ ಜಯ ಗಳಿಸಿದರು.

ಏಂಜೆಲಿಕ್ ಕರ್ಬರ್‌ಗೆ ನಿರಾಸೆ

ಈ ಹಿಂದೆ ವಿಶ್ವ ಕ್ರಮಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದ ಜರ್ಮನಿಯ ಏಂಜಲಿಕ್ ಕರ್ಬರ್ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು. ಅರ್ಹತಾ ಸುತ್ತಿನಲ್ಲಿ ಆಡಿ ಬಂದಿದ್ದ ಉಕ್ರೇನ್‌ನ ಅನ್ಹೆಲಿನಾ ಕಲಿನಿನಾ 6-2, 6-4ರಲ್ಲಿ ಕರ್ಬರ್ ವಿರುದ್ಧ ಜಯ ಗಳಿಸಿದರು.

ಕರ್ಬರ್ ಮೂರು ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಆದರೆ ಫ್ರೆಂಚ್ ಓಪನ್‌ನಲ್ಲಿ ಒಮ್ಮೆಯೂ ಕ್ವಾರ್ಟರ್ ಫೈನಲ್ ಪ್ರವೇಶಿಸುವುದಕ್ಕೂ ಸಾಧ್ಯವಾಗಲಿಲ್ಲ. ಈ ಹಿಂದೆ ಆರು ಬಾರಿ ಟೂರ್ನಿಯಲ್ಲಿ ಆಡಿದ್ದು ಐದು ಬಾರಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.

ಇತರ ಪಂದ್ಯಗಳ ಫಲಿತಾಂಶಗಳು

ಇಟಲಿಯ ಫಾಬಿಯೊ ಫಾಗ್ನಿನಿಗೆ ಫ್ರಾನ್ಸ್‌ನ ಗ್ರೆಗರಿ ಬರೆರೆ ವಿರುದ್ಧ 6–4, 6–1, 6–4ರಲ್ಲಿ ಜಯ; ಸ್ಪೇನ್‌ನ ಬೌಟಿಸ್ಟಾ ಅಗುಟ್‌ಗೆ ತಮ್ಮದೇ ದೇಶದ ವಿಲೇಲ ಮಾರ್ಟಿನೆಜ್ ಎದುರು 6–4,6–4,6–2ರಲ್ಲಿ ಗೆಲುವು; ಜೆಕ್ ರಿಪಬ್ಲಿಕ್‌ನ ಪೆಟ್ರಾ ಕ್ವಿಟೋವಾಗೆ ಬೆಲ್ಜಿಯಂನ ಗ್ರೀಟ್ ಮಿನೆನ್ ಎದುರು 6–7 (3/7), 7–6(7/5), 6–1ರಲ್ಲಿ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.