ADVERTISEMENT

ಟೆನಿಸ್‌: ಪ್ರಜ್ಞೇಶ್‌ ಶುಭಾರಂಭ

ಪಿಟಿಐ
Published 6 ಜನವರಿ 2020, 14:56 IST
Last Updated 6 ಜನವರಿ 2020, 14:56 IST
ಪ್ರಜ್ಞೇಶ್‌ ಗುಣೇಶ್ವರನ್‌
ಪ್ರಜ್ಞೇಶ್‌ ಗುಣೇಶ್ವರನ್‌   

ಬೆಂಡಿಗೊ, ಆಸ್ಟ್ರೇಲಿಯಾ: ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಅವರು ಕ್ಯಾನ್‌ಬೆರಾ ಇಂಟರ್‌ನ್ಯಾಷನಲ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಸೋಮವಾರ ನಡೆದ ‍ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಪ್ರಜ್ಞೇಶ್‌ 7–5, 6–3 ನೇರ ಸೆಟ್‌ಗಳಿಂದ ಆಸ್ಟ್ರೇಲಿಯಾದ ಜೇಸನ್‌ ಕುಬ್ಲರ್‌ ಎದುರು ಗೆದ್ದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 122ನೇ ಸ್ಥಾನದಲ್ಲಿರುವ ಭಾರತದ ಆಟಗಾರ, ವಿಶ್ವ ರ‍್ಯಾಂಕಿಂಗ್‌ನಲ್ಲಿ 257ನೇ ಸ್ಥಾನ ಹೊಂದಿರುವ ಕುಬ್ಲರ್‌ ಅವರನ್ನು ಮಣಿಸಲು 1 ಗಂಟೆ 28 ನಿಮಿಷ ತೆಗೆದುಕೊಂಡರು.

ADVERTISEMENT

ಈ ಪಂದ್ಯದಲ್ಲಿ ಒಟ್ಟು ನಾಲ್ಕು ಬಾರಿ ಎದುರಾಳಿಯ ಸರ್ವ್‌ ಮುರಿದ ಪ್ರಜ್ಞೇಶ್‌, ಎರಡು ಸಲ ಸರ್ವ್‌ ಕಳೆದುಕೊಂಡರು.

ಮುಂದಿನ ಸುತ್ತಿನಲ್ಲಿ ಪ್ರಜ್ಞೇಶ್‌ಗೆ ಜಪಾನ್‌ನ ಆಟಗಾರ, ಟೂರ್ನಿಯಲ್ಲಿ 13ನೇ ಶ್ರೇಯಾಂಕ ಹೊಂದಿರುವ ಟಾರೊ ಡೇನಿಯಲ್‌ ಸವಾಲು ಎದುರಾಗಲಿದೆ. ಟಾರೊ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ 106ನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಭಾರತದ ಆಟಗಾರನ ಗೆಲುವಿನ ಹಾದಿ ಕಠಿಣ ಎನಿಸಿದೆ.

ಮೊದಲ ಸುತ್ತಿನ ಮತ್ತೊಂದು ಪಂದ್ಯದಲ್ಲಿ ರಾಮಕುಮಾರ್ ರಾಮನಾಥನ್‌ 6–3, 2–6, 3–6ರಲ್ಲಿ ಎಮಿಲ್‌ ರುಸುವೊರಿ ಎದುರು ಸೋತರು. ಈ ಹಣಾಹಣಿ 1 ಗಂಟೆ 27 ನಿಮಿಷ ನಡೆಯಿತು.

ಮೊದಲ ಸೆಟ್‌ನಲ್ಲಿ ಮಿಂಚಿದ ರಾಮಕುಮಾರ್‌, ನಂತರದ ಎರಡು ಸೆಟ್‌ಗಳಲ್ಲಿ ಮಂಕಾದರು. ಎದುರಾಳಿಯ ಸರ್ವ್‌ ಮುರಿಯುವ ನಾಲ್ಕು ಅವಕಾಶಗಳನ್ನು ಅವರು ಕೈಚೆಲ್ಲಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.