ADVERTISEMENT

ಟೆನಿಸ್‌ ಚಾಂಪಿಯನ್‌ಷಿಪ್‌: ಸೆಮಿಫೈನಲ್‌ಗೆ ಪ್ರಜ್ಞೇಶ್‌ ಗುಣೇಶ್ವರನ್‌

ಅಟ್ಲಾಂಟಿಕ್‌ ಟೈರ್‌ ಟೆನಿಸ್‌ ಚಾಂಪಿಯನ್‌ಷಿಪ್‌

ಪಿಟಿಐ
Published 14 ನವೆಂಬರ್ 2020, 10:33 IST
Last Updated 14 ನವೆಂಬರ್ 2020, 10:33 IST
ಪ್ರಜ್ಞೇಶ್‌ ಗುಣೇಶ್ವರನ್‌-ಪಿಟಿಐ ಚಿತ್ರ
ಪ್ರಜ್ಞೇಶ್‌ ಗುಣೇಶ್ವರನ್‌-ಪಿಟಿಐ ಚಿತ್ರ   

ಕ್ಯಾರಿ, ಅಮೆರಿಕ: ತೀವ್ರ ಪೈಪೋಟಿ ಕಂಡುಬಂದ ಮತ್ತೊಂದು ಪಂದ್ಯದಲ್ಲಿ ಗೆಲುವು ಸಾಧಿಸಿದ ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌, ಅಟ್ಲಾಂಟಿಕ್‌ ಟೈರ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಶನಿವಾರ ನಡೆದ ಎಂಟರಘಟ್ಟದ ಹಣಾಹಣಿಯಲ್ಲಿ ಅವರು 3–6, 7–5, 7–6ರಿಂದ ಬ್ರೆಜಿಲ್‌ನ ಥಾಮಸ್‌ ಬೆಲ್ಲುಚಿ ಅವರನ್ನು ಮಣಿಸಿದರು.

ಮೊದಲ ಸೆಟ್‌ನಲ್ಲಿ ಹಿನ್ನಡೆ ಕಂಡ ಪ್ರಜ್ಞೇಶ್, ಆ ಬಳಿಕ ತಿರುಗೇಟು ನೀಡಿದರು.

ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಟೆನಿಸ್ ಚಟುವಟಿಕೆಗಳು ಸ್ಥಗಿತಗೊಂಡು ಪುನರಾರಂಭವಾದ ಬಳಿಕ ಪ್ರಜ್ಞೇಶ್‌ ಅವರು ಎರಡನೇ ಟೂರ್ನಿಯಲ್ಲಿ ನಾಲ್ಕರ ಘಟ್ಟ ತಲುಪಿದರು.

ADVERTISEMENT

ಹೋದ ತಿಂಗಳು ಜರ್ಮನಿಯಲ್ಲಿ ನಡೆದಿದ್ದ ಇಸಾಮ್ನಿಂಗ್‌ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಕಾಲಿಟ್ಟಿದ್ದರು.

146ನೇ ರ‍್ಯಾಂಕಿನ ಭಾರತದ ಆಟಗಾರ, ಟೂರ್ನಿಯ ಪ್ರಶಸ್ತಿ ಸುತ್ತು ತಲುಪಲು ಡೆನ್ಮಾರ್ಕ್‌ನ ಮೈಕಲ್‌ ಥೋರ್ಪ್‌ಗಾರ್ಡ್‌ ಅವರ ಸವಾಲು ಎದುರಿಸಬೇಕಿದೆ. ಮೈಕೆಲ್‌ ಅವರು ವಿಶ್ವ ಕ್ರಮಾಂಕದಲ್ಲಿ 198ನೇ ಸ್ಥಾನದಲ್ಲಿದ್ದಾರೆ.

ಪ್ರಜ್ಞೇಶ್‌ ಅವರು ತಾವಾಡಿದ ಆರು ಚಾಲೆಂಜರ್‌ ಟೂರ್ನಿಗಳ ಫೈನಲ್‌ಗಳ ಪೈಕಿ ಎರಡು ಬಾರಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. 2018ರ ಏಪ್ರಿಲ್‌ನಲ್ಲಿ ಚೀನಾದ ಆ್ಯನಿಂಗ್‌ ಹಾಗೂ ಅದೇ ವರ್ಷದ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಅವರಿಗೆ ಪ್ರಶಸ್ತಿ ಒಲಿದಿವೆ.

ಪ್ರೀಕ್ವಾರ್ಟರ್ ಫೈನಲ್‌ನಲ್ಲಿ ಪ್ರಜ್ಞೇಶ್‌ ಅವರು ಅಮೆರಿಕದ ಜಾಕ್‌ ಸ್ಯಾಕ್‌ ಅವರ ಸವಾಲು ಮೀರಿದ್ದರು. ಇದು ಒಟ್ಟು ₹ 38 ಲಕ್ಷ ಬಹುಮಾನ ಮೊತ್ತದ ಟೂರ್ನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.