ADVERTISEMENT

ಒರ್ಲ್ಯಾಂಡೊ ಓಪನ್‌ ಟೆನಿಸ್‌ ಟೂರ್ನಿ: ಸೆಮಿಫೈನಲ್‌ಗೆ ಪ್ರಜ್ಞೇಶ್‌ ಗುಣೇಶ್ವರನ್‌

ಒರ್ಲ್ಯಾಂಡೊ ಓಪನ್‌ ಟೆನಿಸ್‌ ಟೂರ್ನಿ

ಪಿಟಿಐ
Published 21 ನವೆಂಬರ್ 2020, 12:05 IST
Last Updated 21 ನವೆಂಬರ್ 2020, 12:05 IST
ಪ್ರಜ್ಞೇಶ್‌ ಗುಣೇಶ್ವರನ್‌–ಎಎಫ್‌ಪಿ ಚಿತ್ರ
ಪ್ರಜ್ಞೇಶ್‌ ಗುಣೇಶ್ವರನ್‌–ಎಎಫ್‌ಪಿ ಚಿತ್ರ   

ಒರ್ಲ್ಯಾಂಡೊ, ಅಮೆರಿಕ: ಅಮೋಘ ಆಟವಾಡಿದ ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಅವರು ಒರ್ಲ್ಯಾಂಡೊ ಓಪನ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಇದರೊಂದಿಗೆ ಭಾರತದ ಆಟಗಾರರ ಕ್ರಮಾಂಕದಲ್ಲಿ ಅಗ್ರಸ್ಥಾನವನ್ನು ಮರಳಿ ಗಳಿಸಲಿದ್ದಾರೆ. ಶುಕ್ರವಾರ ರಾತ್ರಿ ನಡೆದ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಅವರು ಕಜಕಸ್ತಾನದ ಡಿಮಿಟ್ರಿ ಪಾಪ್ಕೊ ಸವಾಲು ಮೀರಿದರು.

ಇಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿದ್ದ ಭಾರತದ ಆಟಗಾರ 6–0, 6–3ರಿಂದ ಡಿಮಿಟ್ರಿ ಅವರಿಗೆ ಸೋಲುಣಿಸಿದರು. ಡಿಮಿಟ್ರಿ ಆರನೇ ಶ್ರೇಯಾಂಕ ಪಡೆದಿದ್ದರು.

ಎಟಿಪಿ ರ‍್ಯಾಂಕಿಂಗ್‌ನಲ್ಲಿ ಈ ವಾರ 137ನೇ ಸ್ಥಾನದಲ್ಲಿರುವ ಪ್ರಜ್ಞೇಶ್‌ ಅವರು, ಟೂರ್ನಿಯಲ್ಲಿ ಒಂದು ವೇಳೆ ಫೈನಲ್‌ ಪ್ರವೇಶಿಸದಿದ್ದರೂ ಕನಿಷ್ಠ 133ನೇ ಸ್ಥಾನಕ್ಕೆ ಜಿಗಿಯಲಿದ್ದಾರೆ. ಸದ್ಯ ಭಾರತದ ಸುಮಿತ್‌ ನಗಾಲ್‌ 136ನೇ ಕ್ರಮಾಂಕದಲ್ಲಿದ್ದು, ಅವರನ್ನು ಪ್ರಜ್ಞೇಶ್‌ ಹಿಂದಿಕ್ಕಲಿದ್ದಾರೆ. ಕಳೆದ ಎರಡು ವಾರಗಳಿಂದ ಸುಮಿತ್‌ ಅವರು ಯಾವುದೇ ಟೂರ್ನಿಯಲ್ಲಿ ಆಡಿಲ್ಲ.

ADVERTISEMENT

ಕಳೆದ ವಾರ ಕ್ಯಾರಿ ಚಾಲೆಂಜರ್‌ ಟೂರ್ನಿಯಲ್ಲಿ ಫೈನಲ್‌ ತಲುಪಿದ್ದ ಪ್ರಜ್ಞೇಶ್ ಅವರು ಅದೇ ಲಯವನ್ನು ಇಲ್ಲಿಯೂ ಮುಂದುವರಿಸಿದರು.

ಎದುರಾಳಿ ಪಾಪ್ಕೊ ಅವರ ಸರ್ವ್‌ಗಳಲ್ಲಿನ ಲೋಪಗಳು ಹಾಗೂ ನೆಲಮಟ್ಟದ ಹೊಡೆತಗಳ ಲಾಭವನ್ನು ಪ್ರಜ್ಞೇಶ್‌ ಚೆನ್ನಾಗಿ ಬಳಸಿಕೊಂಡರು.

ಭಾರತದ ರಾಮಕುಮಾರ್ ರಾಮನಾಥನ್‌ ಅವರು ಸ್ಥಳೀಯ ಆಟಗಾರ ನಿಕ್‌ ಚಾಪೆಲ್‌ ಎದುರು 3–6, 4–6ರಿಂದ ಸೋಲುವ ಮೂಲಕ ಮೊದಲ ಸುತ್ತಿನಲ್ಲೇ ನಿರ್ಗಮಿಸಿದರು. ಎಕೆಂಟಲ್ ಚಾಲೆಂಜರ್‌ನಲ್ಲಿ ರನ್ನರ್‌ಅಪ್‌ ಆದ ಬಳಿಕ ಸತತ ಎರಡನೇ ಟೂರ್ನಿಯಲ್ಲಿ ಅವರು ಮೊದಲ ಸುತ್ತಿನಲ್ಲಿ ಸೋಲು ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.