ADVERTISEMENT

ಫ್ರೆಂಚ್‌ ಓಪನ್‌ಗೆ ನಡಾಲ್‌ ಮತ್ತೊಮ್ಮೆ ‘ದೊರೆ’

ವಿಶ್ವದ ಅಗ್ರ ಕ್ರಮಾಂಕದ ಆಟಗಾರ ನೊವಾಕ್‌ ಜೊಕೊವಿಚ್‌ ಕನಸು ಭಗ್ನ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 6:08 IST
Last Updated 12 ಅಕ್ಟೋಬರ್ 2020, 6:08 IST
ಪ್ರಶಸ್ತಿಯೊಂದಿಗೆ ಸಂಭ್ರಮಿಸಿದ ರಫೆಲ್‌ ನಡಾಲ್‌–ಎಎಫ್‌ಪಿ ಚಿತ್ರ
ಪ್ರಶಸ್ತಿಯೊಂದಿಗೆ ಸಂಭ್ರಮಿಸಿದ ರಫೆಲ್‌ ನಡಾಲ್‌–ಎಎಫ್‌ಪಿ ಚಿತ್ರ   

ಪ್ಯಾರಿಸ್: ಸ್ಪೇನ್‌ನ ರಫೆಲ್‌ ನಡಾಲ್‌ 13ನೇ ಬಾರಿ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಅವರು 6–0, 6–2, 7–5ರಿಂದ ವಿಶ್ವದ ಅಗ್ರ ಕ್ರಮಾಂಕದ ಆಟಗಾರ ನೊವಾಕ್ ಜೊಕೊವಿಚ್‌ ಅವರಿಗೆ ಸೋಲುಣಿಸಿದರು.

ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ನಡಾಲ್‌ ಅವರುಈ ಗೆಲುವಿನೊಂದಿಗೆ ಸ್ವಿಟ್ಜರ್ಲೆಂಡ್‌ನ ದಿಗ್ಗಜ ರೋಜರ್‌ ಫೆಡರರ್‌ ಅವರ 20 ಗ್ರ್ಯಾನ್‌ಸ್ಲಾಂ ಜಯದ ದಾಖಲೆಯನ್ನು ಸರಿಗಟ್ಟಿದರು. 34 ವರ್ಷದ ನಡಾಲ್‌ ಅವರಿಗೆ ಇದು ಫ್ರೆಂಚ್‌ ಓಪನ್‌ನಲ್ಲಿ ಅವರ ನೂರನೇ ಗೆಲುವು ಆಗಿದ್ದು ಮತ್ತೊಂದು ವಿಶೇಷ.

2005ರಿಂದ ಅವರು ಇಲ್ಲಿ ಎರಡು ಪಂದ್ಯಗಳನ್ನು ಮಾತ್ರ ಸೋತಿದ್ದಾರೆ. ಟೂರ್ನಿಯಲ್ಲಿ ಒಂದೂ ಸೆಟ್‌ ಕಳೆದುಕೊಳ್ಳದೆ ನಡಾಲ್‌ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ADVERTISEMENT

18ನೇ ಗ್ರ್ಯಾನ್‌ಸ್ಲಾಮ್ ಜಯದ ಕನಸು ಹೊತ್ತಿದ್ದ ಜೊಕೊವಿಚ್‌ ವಿರುದ್ಧ ನಡಾಲ್‌ ಪಂದ್ಯದ ಆರಂಭದಿಂದಲೇ ಸಂಪೂರ್ಣ ಪಾರಮ್ಯ ಮೆರೆದರು. ಹಣಾಹಣಿ ಸಂಪೂರ್ಣ ಏಕಪಕ್ಷೀಯವಾದಂತೆ ಕಂಡುಬಂದಿತು.

ಇಬ್ಬರು ಶ್ರೇಷ್ಠ ಆಟಗಾರರ ನಡುವಿನ 56ನೇ ಪಂದ್ಯ ಇದಾಗಿತ್ತು. ಫಿಲಿಪ್‌ ಚಾಟ್ರಿಯರ್‌ ಅಂಗಣದಲ್ಲಿ ನಡೆದ ಪಂದ್ಯದ ಮೊದಲ ಸೆಟ್‌ 45 ನಿಮಿಷಗಳಲ್ಲಿ ನಡಾಲ್‌ ಕೈವಶವಾಯಿತು.

ಎರಡನೇ ಸೆಟ್‌ನ ಆರಂಭದಲ್ಲೇ ಜೊಕೊವಿಚ್‌ ಪಾಯಿಂಟ್‌ ಗಳಿಸುವಲ್ಲಿ ಯಶಸ್ವಿಯಾದರು. ಆದರೆ ನಡಾಲ್‌ ಸುಲಭವಾಗಿ ಬಿಟ್ಟುಕೊಡಲಿಲ್ಲ.

ಮೂರನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಸರ್ಬಿಯಾ ಆಟಗಾರ ಸ್ವಲ್ಪ ಪ್ರತಿರೋಧ ಒಡ್ಡಿದರು. ಸೆಟ್‌ನ ಆರಂಭದಲ್ಲಿ ನಡಾಲ್‌ ಅವರಿಗೆ 3–2 ಗೇಮ್‌ಗಳ ಮುನ್ನಡೆ ಸಿಕ್ಕಿತು. ಆದರೆ ಜೊಕೊವಿಚ್‌ ಪಾಯಿಂಟ್ಸ್ 3–3ಕ್ಕೆ ತಂದರು. ಆದರೆ ಪವಾಡವೇನೂ ಘಟಿಸಲಿಲ್ಲ. ಜೊಕೊವಿಚ್‌ ಎಸಗಿದ ಡಬಲ್‌ ಫಾಲ್ಟ್‌ ನೆರವಿನಿಂದ ನಡಾಲ್‌ 6–5ರ ಮುನ್ನಡೆ ಗಳಿಸಿದರು. ಕೊನೆಯಲ್ಲಿ ಏಸ್‌ವೊಂದನ್ನು ಸಿಡಿಸುವುದರೊಂದಿಗೆ ಪ್ರಶಸ್ತಿಗೆ ವಾರಸುದಾರರಾದರು.

‘ಮತ್ತೊಂದು ಮಹತ್ವದ ಟೂರ್ನಿ ಆಡಿದ ನೊವಾಕ್‌ಗೆ ಅಭಿನಂದನೆಗಳು. ಇಂದಿನ ಪಂದ್ಯದ ಕುರಿತು ಕ್ಷಮೆ ಇರಲಿ. ನಾವಿಬ್ಬರೂ ಬಹಳಷ್ಟು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದೇವೆ. ಒಂದು ಬಾರಿ ನೀವು, ಮತ್ತೊಂದು ಬಾರಿ ನಾನು ಗೆಲುವು ಕಂಡಿದ್ದೇವೆ’ ಎಂದು ಪಂದ್ಯದ ಬಳಿಕ ನಡಾಲ್‌ ಪ್ರತಿಕ್ರಿಯಿಸಿದರು.

‘ಈ ವರ್ಷ ನನಗೆ ಕಷ್ಟಕರವಾಗಿತ್ತು. ಫೆಡರರ್‌ ಅವರ ದಾಖಲೆ ಸರಿಗಟ್ಟಿದ್ದು ಮುಖ್ಯವಲ್ಲ. ಇದು ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಮತ್ತೊಂದು ಜಯವಷ್ಟೇ‘ ಎಂದು ನಡಾಲ್‌ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.