ADVERTISEMENT

ಸೆಮಿಫೈನಲ್‌ಗೆ ರೇತಿನ್ ಪ್ರಣವ್‌

ಎಐಟಿಎ 18 ವರ್ಷದೊಳಗಿನವರ ರಾಷ್ಟ್ರೀಯ ರ‍್ಯಾಂಕಿಂಗ್ ಟೆನಿಸ್ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 12:36 IST
Last Updated 10 ಮಾರ್ಚ್ 2021, 12:36 IST
ರೇತಿನ್ ಪ್ರಣವ್ ಆಟದ ವೈಖರಿ
ರೇತಿನ್ ಪ್ರಣವ್ ಆಟದ ವೈಖರಿ   

ಬೆಂಗಳೂರು: ಎರಡನೇ ಶ್ರೇಯಾಂಕದ ಅರ್ಜುನ್ ಪ್ರೇಮ್‌ಕುಮಾರ್‌ಗೆ ಆಘಾತ ನೀಡಿದ ತಮಿಳುನಾಡಿನ ರೇತಿನ್ ಪ್ರಣವ್‌, ಎಐಟಿಎ 18 ವರ್ಷದೊಳಗಿನವರ ರಾಷ್ಟ್ರೀಯ ರ‍್ಯಾಂಕಿಂಗ್ ಟೆನಿಸ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ಪ್ರವೇಶಿಸಿದರು. ಇಲ್ಲಿಯ ಟಾಪ್‌ಸ್ಪಿನ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಟೂರ್ನಿಯ ಬಾಲಕರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಅವರು 5–7, 6–4, 6–2ರಿಂದ ಗೆಲುವು ಸಾಧಿಸಿದರು.

ಬುಧವಾರ ನಡೆದ ಪಂದ್ಯದಲ್ಲಿ ಮೊದಲ ಸೆಟ್‌ಅನ್ನು 5–7ರಿಂದ ಕಳೆದುಕೊಂಡ ಪ್ರಣವ್‌, ಎರಡನೇ ಸೆಟ್‌ನ ಆರಂಭದಲ್ಲೂ 2–3ರ ಹಿನ್ನಡೆಯಲ್ಲಿದ್ದರು. ಬಳಿಕ ತಿರುಗೇಟು ನೀಡಿ 6–4ರಿಂದ ಸೆಟ್ ಗೆದ್ದುಕೊಂಡರು. ಅದೇ ಲಯದಲ್ಲಿ ಮುಂದುವರಿದು ಮೂರನೇ ಹಾಗೂ ನಿರ್ಣಾಯಕ ಸೆಟ್ ವಶಪಡಿಸಿಕೊಂಡು ಜಯಭೇರಿ ಮೊಳಗಿಸಿದರು.

ಎಂಟರಘಟ್ಟದ ಮತ್ತೊಂದು ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಸ್ಕಂದ ಪ್ರಸನ್ನರಾವ್ 6-3, 6-0ರಿಂದ ರಿಷಿವರ್ಧನ್ ಎದುರು ಗೆದ್ದರು. ಬಾಲಕರ ವಿಭಾಗದ ಕ್ವಾರ್ಟರ್‌ಫೈನಲ್‌ ಇತರ ಪಂದ್ಯಗಳಲ್ಲಿ ಅದಿತ್ ಅಮರನಾಥ್ 6-4, 6-4ರಿಂದ ಗೋವಿನ್ ಸೆಹ್ವಾಗ್ ಎದುರು, ಆಕರ್ಷ್ ಗಾಂವಕರ್ 6-2, 6-4ರಿಂದ ವಿವಾನ್ ಗುಪ್ತಾ ವಿರುದ್ಧ ಜಯಿಸಿ ನಾಲ್ಕರ ಘಟ್ಟ ತಲುಪಿದರು.

ADVERTISEMENT

ಸೌಮ್ಯಾ ರೌನಡೆ ಮುನ್ನಡೆ: ಅರ್ಹತಾ ಸುತ್ತಿನಿಂದ ಗೆದ್ದುಬಂದ ಆಟಗಾರ್ತಿ ಸೌಮ್ಯಾ ರೋನಡೆ ಅವರು ಕನಸಿನ ಓಟ ಮುಂದುವರಿಯಿತು. ಬಾಲಕಿಯರ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೌಮ್ಯಾ 6-1, 6-0ರಿಂದ ಕಶೀಶ್‌ ಕಾಂತ್ ಅವರನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದರು.

ಬಾಲಕಿಯರ ವಿಭಾಗದ ಎಂಟರಘಟ್ಟದ ಇತರ ಹಣಾಹಣಿಗಳಲ್ಲಿ ಸಾನಿಯಾ ಮಸಂದ್ 6-2, 7-5ರಿಂದ ಅಮೋದಿನಿ ವಿಜಯ್ ನಾಯಕ್ ಎದುರು, ಆತ್ಮಿಕಾ ಚೈತನ್ಯ ಶ್ರೀನಿವಾಸ್ 4-6, 7-5, 6-3ರಿಂದ ನಿಧಿ ಬಿ. ಶ್ರೀನಿವಾಸ್ ವಿರುದ್ಧ, ಸಮೀಕ್ಷಾ ದಾಬಸ್‌ 7-5, 6-7, 6-2ರಿಂದ ಭಾರತೀಯಾನ ಬಾಬು ರೆಡ್ಡಿ ಎದುರು ಜಯ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.