ADVERTISEMENT

Wimbledon 2021: ರೋಜರ್ ಫೆಡರರ್‌ ವಿಂಬಲ್ಡನ್ ಪ್ರಶಸ್ತಿ ಕನಸು ಭಗ್ನ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 2:16 IST
Last Updated 8 ಜುಲೈ 2021, 2:16 IST
ಹುಬರ್ತ್‌ ಹುರ್ಕಾಜ್ ಹಾಗೂ ರೋಜರ್ ಫೆಡರರ್
ಹುಬರ್ತ್‌ ಹುರ್ಕಾಜ್ ಹಾಗೂ ರೋಜರ್ ಫೆಡರರ್   

ಲಂಡನ್: ಎಂಟು ಬಾರಿಯ ವಿಂಬಲ್ಡನ್ ಚಾಂಪಿಯನ್‌, ದಿಗ್ಗಜ ಆಟಗಾರ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್‌ ಅವರ ಮತ್ತೊಂದು ಪ್ರಶಸ್ತಿಯ ಕನಸು ನನಸಾಗಲಿಲ್ಲ.

ಸೆಂಟರ್ ಕೋರ್ಟ್‌ನಲ್ಲಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಫೆಡರರ್, 3–6, 6–7,0–6ರ ಅಂತರದಿಂದ 14ನೇ ಶ್ರೇಯಾಂಕಿತ ಪೋಲೆಂಡ್‌ನ ಹುಬರ್ತ್‌ ಹುರ್ಕಾಜ್ ಎದುರು ಎಡವಿದರು.

ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಈ ವರೆಗೆ ಹುಬರ್ತ್ ಮೂರನೇ ಸುತ್ತು ದಾಟಿರಲಿಲ್ಲ. ಆದರೆ 20 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಫೆಡರರ್ ಅವರನ್ನು ನೇರ ಸೆಟ್‌ಗಳಲ್ಲಿ ಮಣಿಸಿ ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮೆರೆದಿದ್ದಾರೆ.

ಇದು 39 ವರ್ಷದ ಫೆಡರರ್ ಅವರ ಕೊನೆಯ ವಿಂಬಲ್ಡನ್ ಪಂದ್ಯಾವಳಿ ಎಂದೇ ಅಂದಾಜಿಸಲಾಗಿದೆ. ಆದರೆ ಈ ಕುರಿತು ಫೆಡರರ್ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

'ಮುಂದಿನ ವರ್ಷ ಆಡುವುದರ ಬಗ್ಗೆ ನನಗೇನು ಖಚಿತತೆಯಿಲ್ಲ. ಈ ಹಂತದ ವರೆಗೂ ತಲುಪಿರುವುದು ಖುಷಿ ತಂದಿದೆ. ಖಂಡಿತವಾಗಿಯೂ ಮತ್ತೆ ಆಡಲು ಬಯಸುತ್ತೇನೆ. ಆದರೆ ನನ್ನ ವಯಸ್ಸು? ಯಾವುದರ ಬಗ್ಗೆ ಖಚಿತತೆಯಿಲ್ಲ' ಎಂದು ಹೇಳಿದ್ದಾರೆ.

ಮೊದಲ ಸೆಮಿಫೈನಲ್ ಮುಖಾಮುಖಿಯಲ್ಲಿ ವಿಶ್ವದ ಅಗ್ರ ರ‍್ಯಾಂಕಿನ ಆಟಗಾರ ನೊವಾಕ್ ಜೊಕೊವಿಚ್ ಕೆನಡಾದ ಡೆನಿಸ್ ಶಪೊವಲೊವ್ ಸವಾಲನ್ನು ಎದುರಿಸಲಿದ್ದಾರೆ. ದ್ವಿತೀಯ ಸೆಮಿಫೈನಲ್‌ನಲ್ಲಿ ಹುಬರ್ತ್‌ ಹುರ್ಕಾಜ್ ಅವರಿಗೆ ಇಟಲಿಯ ಮ್ಯಾಟಿಯೊ ಬೆರೆಟ್ಟಿನಿ ಸವಾಲು ಎದುರಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.