ADVERTISEMENT

2020ರ ಋತುವಿನಲ್ಲಿ ಕಣಕ್ಕಿಳಿಯುವುದಿಲ್ಲ: ಫೆಡರರ್‌

ಏಜೆನ್ಸೀಸ್
Published 10 ಜೂನ್ 2020, 9:01 IST
Last Updated 10 ಜೂನ್ 2020, 9:01 IST
ರೋಜರ್‌ ಫೆಡರರ್‌– ಎಎಫ್‌ಪಿ ಚಿತ್ರ
ರೋಜರ್‌ ಫೆಡರರ್‌– ಎಎಫ್‌ಪಿ ಚಿತ್ರ   

ಲಂಡನ್‌: ಈ ವರ್ಷ ಸ್ಪರ್ಧಾತ್ಮಕ ಟೆನಿಸ್‌ ಕಣಕ್ಕಿಳಿಯುವುದಿಲ್ಲ ಎಂದು ಸ್ವಿಟ್ಜರ್ಲೆಂಡ್‌ ಆಟಗಾರ ರೋಜರ್‌ ಫೆಡರರ್‌ ಹೇಳಿದ್ದಾರೆ. ಮೊಣಕಾಲು ನೋವಿನಿಂದ ಸಂಪೂರ್ಣ ಗುಣಮುಖವಾಗದ ಕಾರಣ ಅವರು ಈ ನಿರ್ಧಾರ ತಳೆದಿದ್ದಾರೆ.

2020ರ ಋತುವಿನಲ್ಲಿ ಆಡುವುದಿಲ್ಲ ಎಂದು 20 ಗ್ರ್ಯಾನ್‌ಸ್ಲಾಮ್‌ ವಿಜೇತ ಫೆಡರರ್‌ ಅವರು ಬುಧವಾರ ಟ್ವಿಟರ್‌ ಪೋಸ್ಟ್‌ ಮೂಲಕ ಖಚಿತಪಡಿಸಿದ್ದಾರೆ.

38 ವರ್ಷದ ಆಟಗಾರ ಈ ವರ್ಷದ ಫೆಬ್ರುವರಿಯಲ್ಲಿ ಮೊಣಕಾಲು ನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ನಾಲ್ಕು ತಿಂಗಳುಗಳ ಕಾಲ ಟೆನಿಸ್‌ನಿಂದ ದೂರವಿರಬೇಕೆಂದು ಅವರು ಯೋಜಿಸಿದ್ದರು. ಆದರೆ ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಪ್ರಮುಖ ಟೂರ್ನಿಗಳು ರದ್ದಾಗಿದ್ದವು.

ADVERTISEMENT

‘ಪ್ರಿಯ ಅಭಿಮಾನಿಗಳೇ, ಗಾಯದಿಂದ ಪುನಶ್ಚೇತನಗೊಳ್ಳುವುದರಲ್ಲಿ ಹಿನ್ನಡೆಯಾಗಿದೆ ಎಂಬುದನ್ನು ಎರಡು ವಾರಗಳ ಹಿಂದೆ ನಾನು ಕಂಡುಕೊಂಡೆ. ಮೊಣಕಾಲು ನೋವಿಗೆ ಶೀಘ್ರ ಹೆಚ್ಚುವರಿ ಆರ್ಥೊಸ್ಕೋಪಿಕ್‌ ಪ್ರಕ್ರಿಯೆ ನಡೆಯಬೇಕಿದೆ. ಶ್ರೇಷ್ಠ ಮಟ್ಟದಲ್ಲಿ ಆಡಲು ಸಾಧ್ಯವಾಗುವಂತೆ ಸಿದ್ಧಗೊಳ್ಳಲು ಅಗತ್ಯ ಸಮಯ ತೆಗೆದುಕೊಳ್ಳಬೇಕಿದೆ. 2021ರ ಋತುವಿನ ಆರಂಭದಲ್ಲಿ ನಿಮ್ಮೆಲ್ಲರನ್ನೂ ನೋಡಲು ಕಾತರನಾಗಿದ್ದೇನೆ’ ಎಂದು ಫೆಡರರ್ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.