ADVERTISEMENT

ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ: ಫೈನಲ್‌ಗೆ ‌ಬೋಪಣ್ಣ–ಎಬ್ಡೆನ್

ರಾಯಿಟರ್ಸ್‌
ಪಿಟಿಐ
Published 7 ಸೆಪ್ಟೆಂಬರ್ 2023, 21:02 IST
Last Updated 7 ಸೆಪ್ಟೆಂಬರ್ 2023, 21:02 IST

ನ್ಯೂಯಾರ್ಕ್: ಗೆಲುವಿನ ಓಟ ಮುಂದುವರಿಸಿದ ಭಾರತದ ರೋಹನ್‌ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೋಡಿ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ ಪ್ರವೇಶಿಸಿತು.

ಗುರುವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಬೋಪಣ್ಣ– ಎಬ್ಡೆನ್‌ 7–6, 6–2 ರಿಂದ ಫ್ರಾನ್ಸ್‌ನ ಪಿಯರ್‌ ಹ್ಯೂಸ್‌ ಹರ್ಬರ್ಟ್‌ ಮತ್ತು ನಿಕೊಲಸ್‌ ಮಾಹುಟ್‌ ಅವರನ್ನು ಮಣಿಸಿದರು.

ಕರ್ನಾಟಕದ ಆಟಗಾರ ಈ ಮೂಲಕ ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದ ಅತಿಹಿರಿಯ (43 ವರ್ಷ 6 ತಿಂಗಳು) ಆಟಗಾರ ಎನಿಸಿಕೊಂಡರು. ಕೆನಡಾದ ಡೇನಿಯರ್‌ ನೆಸ್ಟರ್ (43 ವರ್ಷ 4 ತಿಂಗಳು) ಅವರ ದಾಖಲೆಯನ್ನು ಮುರಿದರು.

ADVERTISEMENT

ಬೋಪಣ್ಣ 2ನೇ ಬಾರಿ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ. 2010 ರಲ್ಲಿ ಇದೇ ಟೂರ್ನಿಯಲ್ಲಿ ಪಾಕಿಸ್ತಾನದ ಐಸಾಮ್‌ ಉಲ್‌ ಹಕ್‌ ಖುರೇಷಿ ಜತೆ ಫೈನಲ್‌ ಪ್ರವೇಶಿಸಿ ‘ರನ್ನರ್‌ ಅಪ್‌’ ಆಗಿದ್ದರು.

ಸೆಮಿಗೆ ಅಲ್ಕರಾಜ್: ಅಗ್ರ ಶ್ರೇಯಾಂಕದ ಕಾರ್ಲೋಸ್‌ ಅಲ್ಕರಾಜ್ ಅವರು ಸುಸ್ತಾಗಿದ್ದ ಅಲೆಕ್ಸಾಂಡರ್‌ ಜ್ವರೇವ್ ಅವರನ್ನು ಬುಧವಾರ 6–3, 6–2, 6–4ರಲ್ಲಿ ನೇರ ಸೇಟ್‌ಗಳಿಂದ ಸೋಲಿಸಿ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್ ತಲುಪಿದರು. ಆ ಮೂಲಕ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟವಾದ ಹೆಜ್ಜೆಯಿಟ್ಟರು.

ಹಾಲಿ ಚಾಂಪಿಯನ್ ಆಗಿರುವ ಅಲ್ಕರಾಜ್ ಸೆಮಿಫೈನಲ್‌ನಲ್ಲಿ 2021ರ ಚಾಂಪಿಯನ್ ಡೇನಿಯಲ್ ಮೆಡ್ವೆಡೇವ್ ಅವರನ್ನು ಎದುರಿಸಲಿದ್ದಾರೆ. 2004 ರಿಂದ 08ರವರೆಗೆ ಸ್ವಿಸ್‌ ದಂತಕಥೆ ರೋಜರ್‌ ಫೆಡರರ್‌ ಸತತವಾಗಿ ಇಲ್ಲಿ ಚಾಂಪಿಯನ್ ಆಗಿದ್ದರು. ನಂತರ ಬೆನ್ನುಬೆನ್ನಿಗೆ ಎರಡು ವರ್ಷ ಯಾರೂ ಚಾಂಪಿಯನ್ ಆಗಿಲ್ಲ. ಈಗ ಈ ಅವಕಾಶವನ್ನು ಅಲ್ಕರಾಜ್ ಹೊಂದಿದ್ದಾರೆ.

ಸೋಮವಾರ ಟೂರ್ನಿಯ ಅತಿ ದೀರ್ಘ ಪಂದ್ಯವಾಡಿ ಬಳಲಿದ್ದ 12ನೇ ಶ್ರೇಯಾಂಕದ ಜ್ವರೇವ್ ಅವರು ಅಲ್ಕರಾಜ್ ಅವರನ್ನು ಎದುರಿಸಲು ಎಷ್ಟರ ಮಟ್ಟಿಗೆ ಸಜ್ಜಾಗಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಜರ್ಮನಿಯ ಜ್ವರೇವ್, ಅಸಹನೀಯ ಸೆಕೆಯ ವಾತಾವರಣದಲ್ಲಿ 5 ಗಂಟೆಗಳ ಮ್ಯಾರಥಾನ್‌ ಪಂದ್ಯವಾಡಿ ಯಾನಿಕ್ ಸಿನ್ನರ್ ಅವರನ್ನು ಸೋಲಿಸಿ ಎಂಟರ ಘಟ್ಟ ತಲುಪಿದ್ದರು.

ಆದರೆ ಆರ್ಥರ್‌ ಆ್ಯಷ್‌ ಕ್ರೀಡಾಂಗಣದಲ್ಲಿ ಅಲ್ಕರಾಜ್ ಅವರಿಗೆ ಹೆಚ್ಚು ಹೋರಾಟ ಎದುರಾಗಲಿಲ್ಲ. ಮೊದಲ ಸೆಟ್‌ 3–3 ಆಗಿದ್ದಾಗ ಜ್ವರೇವ್ ಉತ್ತಮ ಬ್ರೇಕ್ ಅವಕಾಶ ಪಡೆದಿದ್ದರು. ಆದರೆ ಅದನ್ನು ಉಳಿಸಿಕೊಂಡ ಅಲ್ಕರಾಜ್, ಎದುರಾಳಿಯ ಮುಂದಿನ ಸರ್ವ್‌ನಲ್ಲೇ ಬ್ರೇಕ್‌ ಪಡೆದು ಸುಲಭವಾಗಿ ಸೆಟ್‌ ಪಡೆದರು. ಎರಡನೇ ಸೆಟ್‌ನಲ್ಲಿ ಜ್ವರೇವ್ ಅವರ ಪ್ರತಿರೋಧದ ಪ್ರಮಾಣವೂ ಕಡಿಮೆಯಾಗಿ ಸ್ಪೇನ್‌ನ ಆಟಗಾರ ಹೆಚ್ಚಿನ ಪ್ರಯಾಸವಿಲ್ಲದೇ ತಮ್ಮದಾಗಿಸಿಕೊಂಡರು. ಆದರೆ ತೊಡೆಗೆ ಪಟ್ಟಿ ಕಟ್ಟಿಕೊಂಡು ಮೂರನೆ ಸೆಟ್‌ ಆಡಲು ಇಳಿದ ಜ್ವರೇವ್ ಹೋರಾಟ ತೋರಿದರು. ಆದರೆ ಸೆಟ್‌ನ ಕೊನೆಯಲ್ಲಿ ಪಡೆದ ಬ್ರೇಕ್‌ನಿಂದ ಅಲ್ಕರಾಜ್ ಪಂದ್ಯವನ್ನೂ ಗೆದ್ದರು.

ಮೆಡ್ವೆಡೇವ್‌ಗೆ ಜಯ: ಇನ್ನೊಂದು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಡೇನಿಯಲ್ ಮೆಡ್ವೆಡೇವ್ 6–4, 6–3, 6–4 ರಿಂದ ಆ್ಯಂಡ್ರಿ ರುಬ್ಲೇವ್ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.