ADVERTISEMENT

ಬಿಲ್ಲಿ ಜೀನ್ ಕಿಂಗ್ ಕಪ್‌: ಭಾರತ ತಂಡದಲ್ಲಿ ಸಾನಿಯಾ, ಅಂಕಿತಾ

ಬಿಲ್ಲಿ ಜೀನ್ ಕಿಂಗ್ ಕಪ್ ವಿಶ್ವ ಗುಂಪು ಪ್ಲೇ ಆಫ್ಸ್ ಟೆನಿಸ್

ಪಿಟಿಐ
Published 16 ಮಾರ್ಚ್ 2021, 12:31 IST
Last Updated 16 ಮಾರ್ಚ್ 2021, 12:31 IST
ಸಾನಿಯಾ ಮಿರ್ಜಾ– ಪಿಟಿಐ ಚಿತ್ರ
ಸಾನಿಯಾ ಮಿರ್ಜಾ– ಪಿಟಿಐ ಚಿತ್ರ   

ನವದೆಹಲಿ: ಸಾನಿಯಾ ಮಿರ್ಜಾ ಹಾಗೂ ಅಂಕಿತಾ ರೈನಾ ಅವರು ಬಿಲ್ಲಿ ಜೀನ್ ಕಿಂಗ್ ಕಪ್ ವಿಶ್ವ ಗುಂಪುಟೆನಿಸ್ ಪ್ಲೇ ಆಫ್ಸ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಲಾಟ್ವಿಯಾ ಎದುರು ಮುಂದಿನ ತಿಂಗಳು ನಡೆಯುವ ಈ ಪಂದ್ಯಕ್ಕೆ ಐದು ಮಂದಿಯ ತಂಡವನ್ನು ಅಖಿಲ ಭಾರತ ಟೆನಿಸ್ ಸಂಸ್ಥೆಯು ಮಂಗಳವಾರ ಪ್ರಕಟಿಸಿದೆ.

ಕರ್ಮಾನ್ ಕೌರ್ ಥಂಡಿ, ಯುವ ಪ್ರತಿಭೆ ಜೀಲ್ ದೇಸಾಯಿ ಹಾಗೂ ಋತುಜಾ ಭೋಸ್ಲೆ ತಂಡದಲ್ಲಿರುವ ಇನ್ನುಳಿದ ಆಟಗಾರ್ತಿಯರು. ಮಂಗಳವಾರ ನಡೆದ ಅಖಿಲ ಭಾರತ ಟೆನಿಸ್ ಸಂಸ್ಥೆಯ (ಎಐಟಿಎ) ಆಯ್ಕೆ ಸಮಿತಿಯ ವರ್ಚುವಲ್ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ವಿಶಾಲ್ ಉಪ್ಪಳ ಅವರು ತಂಡದ ನಾಯಕರಾಗಿದ್ದಾರೆ. ಹೋದ ವರ್ಷ ತಂಡದಲ್ಲಿದ್ದ ರಿಯಾ ಭಾಟಿಯಾ ಅವರನ್ನು ಕಾಯ್ದಿರಿಸಿದ ಆಟಗಾರ್ತಿಯಾಗಿ ಆಯ್ಕೆ ಮಾಡಲಾಗಿದೆ. ಎರಡು ದಿನಗಳ ಪಂದ್ಯವು ಏಪ್ರಿಲ್ 16ರಿಂದ ಲಾಟ್ವಿಯಾದ ಜುರ್ಮಾಲಾದಲ್ಲಿ ನಿಗದಿಯಾಗಿದೆ.

ADVERTISEMENT

ದುಬೈನಲ್ಲಿ 2020ರ ಮಾರ್ಚ್‌ನಲ್ಲಿ ನಡೆದ ಏಷ್ಯಾ–ಓಸೀನಿಯಾ ಗುಂಪು–1ರ ಪಂದ್ಯದಲ್ಲಿ ಎರಡನೇ ಸ್ಥಾನ ಗಳಿಸುವ ಮೂಲಕ ಭಾರತ ತಂಡ ಮೊದಲ ಬಾರಿ ವಿಶ್ವ ಗುಂಪು ಪ್ಲೇ ಆಫ್ಸ್‌ನಲ್ಲಿ ಸ್ಥಾನ ಗಳಿಸಿತ್ತು. ಆಗ ಲಾಟ್ವಿಯಾ, ಅಮೆರಿಕ ಎದುರು ಸೋತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.