ADVERTISEMENT

ಲಭ್ಯತೆ ಖಚಿತಪಡಿಸಿದ ಸುಮಿತ್‌ ನಗಾಲ್‌

ಪಾಕಿಸ್ತಾನ ವಿರುದ್ಧದ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯ: ಭಾರತ ತಂಡದಲ್ಲಿ ರಾಮಕುಮಾರ್‌

ಪಿಟಿಐ
Published 8 ನವೆಂಬರ್ 2019, 19:32 IST
Last Updated 8 ನವೆಂಬರ್ 2019, 19:32 IST
ಸುಮಿತ್‌ ನಗಾಲ್‌–ಎಎಫ್‌ಪಿ ಚಿತ್ರ
ಸುಮಿತ್‌ ನಗಾಲ್‌–ಎಎಫ್‌ಪಿ ಚಿತ್ರ   

ನವದೆಹಲಿ: ಭಾರತದಟೆನಿಸ್‌ ಸಿಂಗಲ್ಸ್ ಪ್ರಮುಖ ಆಟಗಾರರಾದ ಸುಮಿತ್‌ ನಗಾಲ್‌ ಹಾಗೂ ರಾಮಕುಮಾರ್‌ ರಾಮನಾಥನ್‌ ಪಾಕಿಸ್ತಾನ ವಿರುದ್ಧದ ಡೇವಿಸ್‌ ಕಪ್‌ ಪಂದ್ಯಕ್ಕೆ ಲಭ್ಯವಿರುವುದಾಗಿ ಖಚಿತಪಡಿಸಿದ್ದಾರೆ.

ನವೆಂಬರ್‌ 29 ಹಾಗೂ 30ರಂದು ತಟಸ್ಥ ಸ್ಥಳದಲ್ಲಿ ಟೂರ್ನಿ ನಡೆಯಲಿದ್ದು, ಶುಕ್ರವಾರ ಭಾರತ ತಂಡದಲ್ಲಿ ಇವರಿಬ್ಬರ ಹೆಸರು ಸೇರಿಸಲಾಗಿದೆ.

‘ಭಾರತ ತಂಡದ ನೂತನ ನಾಯಕ ರೋಹಿತ್‌ ರಾಜ್‌ಪಾಲ್‌ ಅವರೊಂದಿಗೆ ಚರ್ಚಿಸಿದ ಬಳಿಕ ನಗಾಲ್‌ ಅವರು ಗುರುವಾರ ರಾತ್ರಿ ತಾವು ಪಂದ್ಯಕ್ಕೆ ಲಭ್ಯವಿರುವುದನ್ನು ಇ–ಮೇಲ್‌ ಮೂಲಕಖಚಿತಪಡಿಸಿದ್ದಾರೆ’ ಎಂದುಅಖಿಲ ಭಾರತ ಟೆನಿಸ್‌ ಸಂಸ್ಥೆಯ(ಎಐಟಿಎ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಮಕುಮಾರ್‌ ರಾಮನಾಥನ್‌ ಅವರು ಕೆಲವು ದಿನಗಳ ಹಿಂದೆಯಷ್ಟೇ ತಾವು ಆಡುವುದಾಗಿ ಹೇಳಿದ್ದರು.

ADVERTISEMENT

ಭಾರತದ ಅಗ್ರ ರ‍್ಯಾಂಕಿನ ಆಟಗಾರ ಪ್ರಜ್ಞೇಶ್‌ ಗುಣೇಶ್ವರನ್‌ ಪಂದ್ಯಕ್ಕೆ ಲಭ್ಯವಿರುವುದಿಲ್ಲ. ಪಂದ್ಯದ ಮೊದಲ ದಿನವೇ ಅವರು ವಿವಾಹವಾಗಲಿದ್ದಾರೆ.

ಡಬಲ್ಸ್‌ನಲ್ಲಿ ಲಿಯಾಂಡರ್‌ ಪೇಸ್‌ ಆಡಲಿದ್ದಾರೆ. ಚೀನಾ ವಿರುದ್ಧದ ಪಂದ್ಯದಲ್ಲಿ ರೋಹನ್‌ ಬೋಪಣ್ಣ ಜೊತೆಗೂಡಿ ದಾಖಲೆಯ ಪಂದ್ಯವೊಂದನ್ನು ಗೆದ್ದ ಬಳಿಕ ಮೊದಲ ಬಾರಿ ಪೇಸ್‌ ಇಲ್ಲಿ ಆಡಲಿದ್ದಾರೆ. 46 ವರ್ಷದ ಪೇಸ್‌, 43ನೇ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಡೇವಿಸ್‌ ಕಪ್‌ನಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದ ಸಾಧನೆಗೆ ಭಾಜನರಾಗಿದ್ದರು.

ರೋಹನ್‌ ಬೋಪಣ್ಣ ಅವರು ಮಹೇಶ್‌ ಭೂಪತಿ ಅವರನ್ನು ನಾಯಕತ್ವದಿಂದ ತೆಗೆದುಹಾಕಿದ್ದಕ್ಕೆ ಎಐಟಿಎ ಅನ್ನು ತರಾಟೆಗೆ ತೆಗೆದುಕೊಂಡಿದ್ದರು. ಪಾಕಿಸ್ತಾನ ವಿರುದ್ಧದ ಟೂರ್ನಿಗೆ ಅವರು ಲಭ್ಯವಿರುತ್ತಾರೊ ಇಲ್ಲವೊ ಎಂಬುದು ಈಗ ಕುತೂಹಲ ಕೆರಳಿಸಿದೆ.

‘ಶ್ರೇಷ್ಠ ತಂಡವನ್ನು ಕಣಕ್ಕಿಳಿಸಲು ಉತ್ಸಾಹ ಹೊಂದಿರುವ ರೋಹಿತ್‌ ರಾಜ್‌ಪಾಲ್‌ ಅವರಿಗೆ, ಬೋಪಣ್ಣ ಅವರನ್ನು ಸೇರಿಸಿಕೊಳ್ಳುವ ಒಲವು ಇದೆ. ಆದರೆ ಬೋಪಣ್ಣ ಅವರು ಪೇಸ್‌ ಜೊತೆ ಆಡಲು ಒಪ್ಪಬೇಕಷ್ಟೇ’ ಎಂದು ಹೆಸರು ಹೇಳಲಿಚ್ಛಿಸಿದ ಎಐಟಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.