ADVERTISEMENT

ಮಾಂಟೆ ಕಾರ್ಲೊ ಮಾಸ್ಟರ್ಸ್‌ ಟೆನಿಸ್‌ ಟೂರ್ನಿ: ಮ್ಯಾಟಿಯೊಗೆ ಸುಮಿತ್‌ ನಗಾಲ್‌ ಆಘಾತ

ವಿಶ್ವದ 38ನೇ ರ‍್ಯಾಂಕ್‌ನ ಆಟಗಾರನಿಗೆ ಆಘಾತ ನೀಡಿದ ಭಾರತೀಯ

ಪಿಟಿಐ
Published 8 ಏಪ್ರಿಲ್ 2024, 23:30 IST
Last Updated 8 ಏಪ್ರಿಲ್ 2024, 23:30 IST
<div class="paragraphs"><p>ಸುಮಿತ್‌ ನಗಾಲ್‌</p></div>

ಸುಮಿತ್‌ ನಗಾಲ್‌

   

ಮಾಂಟೆ ಕಾರ್ಲೊ: ಭಾರತದ ಅಗ್ರಗಣ್ಯ ಸಿಂಗಲ್ಸ್‌ ಆಟಗಾರ ಸುಮಿತ್‌ ನಗಾಲ್‌ ಇಲ್ಲಿ ನಡೆಯುತ್ತಿರುವ ಮಾಂಟೆ ಕಾರ್ಲೊ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯ ಮುಖ್ಯಸುತ್ತಿನಲ್ಲಿ ವಿಶ್ವದ 38ನೇ ಕ್ರಮಾಂಕದ ಮ್ಯಾಟಿಯೊ ಅರ್ನಾಲ್ಡಿ ಅವರಿಗೆ ಆಘಾತ ನೀಡಿದರು.

ಕ್ವಾಲಿಫೈಯರ್‌ ಪಂದ್ಯಗಳನ್ನು ಗೆದ್ದು ಎಟಿಪಿ ಮಾಸ್ಟರ್‌ 1000 ಹಂತದ ಟೂರ್ನಿಯಲ್ಲಿ ಪ್ರಧಾನ ಸುತ್ತು ಪ್ರವೇಶಿಸಿದ್ದ 26 ವರ್ಷದ ನಗಾಲ್‌ ಸೋಮವಾರ 64ರ ಘಟ್ಟದ ಪಂದ್ಯದಲ್ಲಿ 5-7, 6-2, 6-4ರಿಂದ ಮ್ಯಾಟಿಯೊ ಅವರನ್ನು ಹಿಮ್ಮೆಟ್ಟಿಸಿದರು. 

ADVERTISEMENT

ಇಟಲಿಯ ಆಟಗಾರನ ವಿರುದ್ಧ ಮೂರು ಸೆಟ್‌ಗಳ ಹೋರಾಟದಲ್ಲಿ ಮೇಲುಗೈ ಸಾಧಿಸಿದ ವಿಶ್ವದ 95ನೇ ಕ್ರಮಾಂಕದ ನಗಾಲ್‌, ಮುಂದಿನ ಸುತ್ತಿನಲ್ಲಿ ವಿಶ್ವದ ಏಳನೇ ಶ್ರೇಯಾಂಕದ ಹೋಲ್ಗರ್ ರೂನ್ (ಡೆನ್ಮಾರ್ಕ್‌) ಅವರನ್ನು ಎದುರಿಸಲಿದ್ದಾರೆ.‌

ನಗಾಲ್‌ ಅವರಿಗೆ ವಿಶ್ವ ರ‍್ಯಾಂಕಿಂಗ್‌ನ ಟಾಪ್ 50 ಆಟಗಾರರ ವಿರುದ್ಧ ಇದು ಮೂರನೇ ಗೆಲುವು.
ಪ್ರಸಕ್ತ ಋತುವಿನಲ್ಲಿ ಎರಡನೇ ಗೆಲುವು. ಈ ಋತುವಿನ ಆರಂಭದಲ್ಲಿ ನಡೆದ ಆಸ್ಟ್ರೇಲಿಯಾ ಓಪನ್‌ನಲ್ಲಿ ನಗಾಲ್‌ ಅವರು 27ನೇ ಕ್ರಮಾಂಕದ ಅಲೆಕ್ಸಾಂಡರ್ ಬುಬ್ಲಿಕ್ ಅವರಿಗೆ ಆಘಾತ ನೀಡಿದ್ದರು. 2021ರಲ್ಲಿ ಅರ್ಜೆಂಟೀನಾ ಓಪನ್‌ನಲ್ಲಿ ಆಗಿನ ವಿಶ್ವದ 22ನೇ ಕ್ರಮಾಂಕದ ಕ್ರಿಸ್ಟಿಯನ್ ಗ್ಯಾರಿನ್ (ಚಿಲಿ) ಅವರನ್ನು ಮಣಿಸಿದ್ದರು.

ಮೊದಲ ಪಂದ್ಯದಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ 63ನೇ ಸ್ಥಾನದಲ್ಲಿರುವ ಫ್ಲಾವಿಯೊ ಕೊಬೊಲ್ಲಿ (ಇಟಲಿ) ವಿರುದ್ಧ, ಎರಡನೇ ಪಂದ್ಯದಲ್ಲಿ 55ನೇ ರ‍್ಯಾಂಕ್‌ನ ಫಕುಂಡೊ ಡಯಾಜ್ ಅಕೋಸ್ಟಾ (ಅರ್ಜೆಂಟೀನಾ) ವಿರುದ್ಧ ಗೆಲುವು ಸಾಧಿಸಿ ನಗಾಲ್ ಮುಖ್ಯ ಸುತ್ತು ಪ್ರವೇಶಿಸಿದ್ದರು.

ಈ ಗೆಲುವಿನೊಂದಿಗೆ ವೃತ್ತಿಜೀವನದ ಅತ್ಯುನ್ನತ 80ನೇ ರ‍್ಯಾಂಕ್‌ ಅನ್ನು ಖಚಿತಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.