ADVERTISEMENT

ಫ್ರೆಂಚ್‌‌ ಓಪನ್‌: ಐಗಾ ಸ್ವಾಟೆಕ್, ಮಾರ್ಟಿನಾ ಜಯಭೇರಿ

ಅಗ್ರ ಶ್ರೇಯಾಂಕಿತೆ ಸಿಮೋನಾ ಹಲೆಪ್, ಡೆನ್ಮಾರ್ಕ್‌ನ ಕಿಕಿ ಬರ್ಟನ್ಸ್‌ಗೆ ನಿರಾಸೆ

ಏಜೆನ್ಸೀಸ್
Published 4 ಅಕ್ಟೋಬರ್ 2020, 13:46 IST
Last Updated 4 ಅಕ್ಟೋಬರ್ 2020, 13:46 IST
ಸಿಮೋನಾ ಹಲೆಪ್ ಎದುರಿನ ಪಂದ್ಯದಲ್ಲಿ ಚೆಂಡನ್ನು ರಿಟರ್ನ್ ಮಾಡಿದ ಐಗಾ ಸ್ವಾಟೆಕ್ –ಎಎಫ್‌ಪಿ ಚಿತ್ರ
ಸಿಮೋನಾ ಹಲೆಪ್ ಎದುರಿನ ಪಂದ್ಯದಲ್ಲಿ ಚೆಂಡನ್ನು ರಿಟರ್ನ್ ಮಾಡಿದ ಐಗಾ ಸ್ವಾಟೆಕ್ –ಎಎಫ್‌ಪಿ ಚಿತ್ರ   

ಪ್ಯಾರಿಸ್: ಮಾಜಿ ಚಾಂಪಿಯನ್, ರೊಮೇನಿಯಾದ ಸಿಮೋನಾ ಹಲೆಪ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ ಪೋಲೆಂಡ್‌ನ ಯುವ ಆಟಗಾರ್ತಿ ಐಗಾ ಸ್ವಾಟೆಕ್ ಅವರು ಫ್ರೆಂಚ್‌ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಭಾನುವಾರ ನಡೆದ ಪಂದ್ಯದಲ್ಲಿ ಸ್ವಾಟೆಕ್ 6–1, 6–2ರಲ್ಲಿ ಗೆಲುವು ಸಾಧಿಸಿ ಮೊದಲ ಬಾರಿ ಗ್ರ್ಯಾನ್‌ ಸ್ಲಾಂ ಟೂರ್ನಿಯೊಂದರ ಎಂಟರ ಘಟ್ಟ ಪ್ರವೇಶಿಸಿದ ಸಾಧನೆ ಮಾಡಿದರು. 2018ರ ಚಾಂಪಿಯನ್‌ ಹಲೆಪ್ ಇದೇ ಅಂಗಣದಲ್ಲಿ ಕಳೆದ ಬಾರಿ ಕೇವಲ 45 ನಿಮಿಷಗಳಲ್ಲಿ ಸ್ವಾಟೆಕ್ ಅವರನ್ನು ಸೋಲಿಸಿದ್ದರು.

ಈ ಬಾರಿ ಸ್ವಾಟೆಕ್ ಬಲವಾದ ತಿರುಗೇಟು ನೀಡಿದರು. ಬೇಸ್‌ಲೈನ್‌ನಲ್ಲಿ ನಿಂತು ಪ್ರಬಲ ಶಾಟ್‌ಗಳನ್ನು ಹೊಡೆದ ಅವರು ನೆಟ್‌ ಬಳಿ ಮೋಹಕ ಡ್ರಾಪ್‌ಗಳನ್ನು ಹಾಕಿ ಹಲೆಪ್ ಅವರನ್ನು ಕಂಗೆಡಿಸಿದರು. ಈ ಮೂಲಕ ಹಲೆಪ್ ಅವರ ಸತತ 17ನೇ ಗೆಲುವಿನ ಕನಸನ್ನು ನುಚ್ಚುನೂರು ಮಾಡಿದರು.

ADVERTISEMENT

26 ನಿಮಿಷಗಳಲ್ಲಿ ಮೊದಲ ಸೆಟ್ ಕಳೆದುಕೊಂಡ ಹಲೆಪ್ ಎರಡನೇ ಸೆಟ್‌ನ ಆರಂಭದಲ್ಲೇ ಸರ್ವ್ ಕಳೆದುಕೊಂಡರು. ಚೇತರಿಸಿಕೊಂಡು ಪಂದ್ಯದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದರು. ಮೂರನೇ ಗೇಮ್‌ನಲ್ಲಿ ನಾಲ್ಕು ಬ್ರೇಕ್ ಪಾಯಿಂಟ್‌ಗಳನ್ನು ಉಳಿಸಿಕೊಂಡ ಅವರು ಐದನೇ ಗೇಮ್‌ನಲ್ಲಿ ಸರ್ವ್ ಕಳೆದುಕೊಂಡರು. ಹೀಗಾಗಿ ಗೆಲುವಿನ ಆಸೆ ಕಮರಿತು.

ಬರ್ಟನ್ಸ್‌ಗೆ ಆಘಾತ

ನೆದರ್ಲೆಂಡ್ಸ್‌ನ್ ಐದನೇ ಶ್ರೇಯಾಂಕಿತೆ ಕಿಕಿ ಬರ್ಟನ್ಸ್ ಅವರನ್ನು ಅರ್ಹತಾ ಸುತ್ತಿನಲ್ಲಿ ಅಡಿ ಬಂದ ಇಟಲಿಯ ಮಾರ್ಟಿನಾ ಟ್ವೆವಿಸನ್ 6–4, 6–4ರಲ್ಲಿ ಮಣಿಸಿದರು. ಈ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

26 ವರ್ಷದ ಟ್ರೆವಿಸನ್ ಈ ಟೂರ್ನಿಗಿಂತ ಮೊದಲು ಯಾವುದೇ ಗ್ರ್ಯಾನ್‌ಸ್ಲಾಂ ಟೂರ್ನಿಯ ಮುಖ್ಯ ಸುತ್ತಿನ ಒಂದು ಪಂದ್ಯದಲ್ಲೂ ಗೆಲುವು ಸಾಧಿಸಿಲ್ಲ. ಮುಂದಿನ ಪಂದ್ಯದಲ್ಲಿ ಐಗಾ ಸ್ವಾಟೆಕ್ ಮತ್ತುಟ್ರೆವಿಸನ್ ಸೆಣಸುವರು.

ಎಂಟರ ಘಟ್ಟಕ್ಕೆ ನಡಾಲ್

ಅರ್ಹತಾ ಸುತ್ತಿನಲ್ಲಿ ಆಡಿ ಮುಖ್ಯ ಸುತ್ತು ಪ್ರವೇಶಿಸಿದ್ದ ಅಮೆರಿಕದ ಸೆಬಾಸ್ಟಿಯನ್ ಕೋರ್ಡಾ ಎದುರು 6–1, 6–1, 6–2ರಲ್ಲಿ ಗೆಲುವು ಸಾಧಿಸಿದ ಸ್ಪೇನ್‌ನ ರಫೆಲ್ ನಡಾಲ್ ಪುರುಷರ ವಿಭಾಗದ ಎಂಟರ ಘಟ್ಟ ಪ್ರವೇಶಿಸಿದರು.

ಜೂನಿಯರ್ ಆಟಗಾರ್ತಿಯರಿಗೆ ಕೋವಿಡ್

ಬಾಲಕಿಯರ ಜೂನಿಯರ್ ವಿಭಾಗದ ಟೂರ್ನಿಯಲ್ಲಿ ಸ್ಪರ್ಧಿಸುತ್ತಿರುವ ಇಬ್ಬರು ಆಟಗಾರ್ತಿಯರಲ್ಲಿ ಕೋವಿಡ್–19 ಸೋಂಕು ದೃಢಪಟ್ಟಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಜೂನಿಯರ್ ವಿಭಾಗದ ಪಂದ್ಯಗಳು ಭಾನುವಾರವಷ್ಟೇ ಆರಂಭಗೊಂಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.