ಮೆಲ್ಬರ್ನ್: ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಶನಿವಾರ ಅಚ್ಚರಿಯ ಫಲಿತಾಂಶ ಹೊರಬಿದ್ದಿತು.
ಮೆಲ್ಬರ್ನ್ ಪಾರ್ಕ್‌ನಲ್ಲಿ ಮನಮೋಹಕ ಆಟ ಆಡಿದ ಸೋಫಿಯಾ ಕೆನಿನ್, ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದರು.
ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ 21 ವರ್ಷ ವಯಸ್ಸಿನ ಸೋಫಿಯಾ 4–6, 6–2, 6–2ರಲ್ಲಿ ಸ್ಪೇನ್‌ನ ಅನುಭವಿ ಆಟಗಾರ್ತಿ ಗಾರ್ಬೈನ್ ಮುಗುರುಜಾಗೆ ಆಘಾತ ನೀಡಿದರು. ಈ ಹೋರಾಟ ಎರಡು ಗಂಟೆ ಮೂರು ನಿಮಿಷ ನಡೆಯಿತು.
ಅಮೆರಿಕದ ಸೋಫಿಯಾ ಅವರು ಗ್ರ್ಯಾನ್‌ಸ್ಲಾಮ್‌ನಲ್ಲಿ ಮೊದಲ ಸಲ ಫೈನಲ್ ಪ್ರವೇಶಿಸಿದ್ದರು. ಆದರೆ ಮುಗುರುಜಾ, ಫ್ರೆಂಚ್ ಓಪನ್ (2016) ಮತ್ತು ವಿಂಬಲ್ಡನ್‌ನಲ್ಲಿ (2017) ಕಿರೀಟ ಮುಡಿಗೇರಿಸಿಕೊಂಡಿದ್ದರು. ಆಸ್ಟ್ರೇಲಿಯಾ ಓಪನ್‌ನಲ್ಲಿ ಪ್ರಶಸ್ತಿ ಜಯಿಸುವ ಸ್ಪೇನ್ ಆಟಗಾರ್ತಿಯ ಕನಸು ಈ ಬಾರಿಯೂ ಕೈಗೂಡಲಿಲ್ಲ.
ಸೋಫಿಯಾಗೆ ಅವರ ತಂದೆ ಅಲೆಕ್ಸಾಂಡರ್ ಕೆನಿನ್ ಅವರೇ ಗುರು. ಅಪ್ಪನ ಮಾರ್ಗದರ್ಶನದಲ್ಲಿ ಟೆನಿಸ್ ಪಾಠಗಳನ್ನು ಕಲಿತಿದ್ದ ಸೋಫಿಯಾ ಶನಿವಾರ ಪಂದ್ಯ ಗೆದ್ದ ನಂತರ ಭಾವುಕರಾದರು. ಖುಷಿಯಿಂದ ಅವರ ಕಣ್ಣುಗಳು ತುಂಬಿ ಬಂದವು. ಗ್ಯಾಲರಿಯತ್ತ ಓಡೋಡಿ ಹೋಗಿ ಅಲ್ಲಿ ಕುಳಿತಿದ್ದ ಅಪ್ಪನಿಗೆ ಹಸ್ತಲಾಘವ ನೀಡಿ ಸಂಭ್ರಮಿಸಿದರು.
ಸೆಮಿಫೈನಲ್‌ನಲ್ಲಿ ವಿಶ್ವದ ಅಗ್ರ ಕ್ರಮಾಂಕದ ಆಟಗಾರ್ತಿ ಆ್ಯಷ್ಲೆ ಬಾರ್ಟಿಗೆ ಆಘಾತ ನೀಡಿದ್ದ ಸೋಫಿಯಾ, ಮೊದಲ ಸೆಟ್‌ನಲ್ಲಿ ಮುಗ್ಗರಿಸಿದರು. 52 ನಿಮಿಷಗಳ ಕಾಲ ನಡೆದ ಸೆಟ್‌ನಲ್ಲಿ ಮೇಲುಗೈ ಸಾಧಿಸಿದಮುಗುರುಜಾ 1–0 ಮುನ್ನಡೆ ಪಡೆದರು.
ಆರಂಭಿಕ ನಿರಾಸೆಯಿಂದ ಸೋಫಿಯಾ ಎದೆಗುಂದಲಿಲ್ಲ. 32 ನಿಮಿಷ ನಡೆದ ಎರಡನೇ ಸೆಟ್‌ನಲ್ಲಿ ಅವರು ಆಕ್ರಮಣಕಾರಿಯಾಗಿ ಆಡಿದರು. ನಾಲ್ಕನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್ ಮುರಿದು 4–1 ಮುನ್ನಡೆ ಗಳಿಸಿದರು. ನಂತರವೂ ಅಮೋಘ ಸಾಮರ್ಥ್ಯ ತೋರಿ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು.
ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್‌ನಲ್ಲಿ ಮೂರು ಗೇಮ್ ಪಾಯಿಂಟ್ಸ್‌ಗಳನ್ನು ಉಳಿಸಿಕೊಂಡ ಸೋಫಿಯಾ, ಬಳಿಕ ಛಲದಿಂದ ಹೋರಾಡಿ ಗೆಲುವಿನ ತೋರಣ ಕಟ್ಟಿದರು. 26 ವರ್ಷ ವಯಸ್ಸಿನ ಮುಗುರುಜಾ ಈ ಪಂದ್ಯದಲ್ಲಿ ಒಟ್ಟು ಎಂಟು ‘ಡಬಲ್ ಫಾಲ್ಟ್’ಗಳನ್ನು ಮಾಡಿ ಕೈಸುಟ್ಟುಕೊಂಡರು.
‘ನಾನು ಕಂಡ ಕನಸು ಈಗ ಕೈಗೂಡಿದೆ. ನನಗಾಗುತ್ತಿರುವ ಸಂತಸ ಪದಗಳಿಗೆ ನಿಲುಕದ್ದು’ ಎಂದು ಸೋಫಿಯಾ ಖುಷಿ ವ್ಯಕ್ತಪಡಿಸಿದ್ದಾರೆ.
ಜೊಕೊಗೆ ಥೀಮ್ ಸವಾಲು: ಭಾನುವಾರ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯ ನಡೆಯಲಿದೆ. ಸರ್ಬಿಯಾದ ನೊವಾಕ್ ಜೊಕೊವಿಚ್ ಮತ್ತು ಆಸ್ಟ್ರಿಯಾದ ಡಾಮಿನಿಕ್ ಥೀಮ್ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.