ADVERTISEMENT

ಅಮೆರಿಕ ಓಪನ್ ಟೆನಿಸ್: ಅಲ್ಕರಾಜ್, ಜೊಕೊವಿಚ್ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2025, 19:39 IST
Last Updated 28 ಆಗಸ್ಟ್ 2025, 19:39 IST
<div class="paragraphs"><p> ಜೊಕೊವಿಚ್</p></div>

ಜೊಕೊವಿಚ್

   

ನ್ಯೂಯಾರ್ಕ್ (ಎಎಫ್‌ಪಿ):  ಕಾರ್ಲೋಸ್ ಅಲ್ಕರಾಜ್ ಅವರು ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಮೂರನೇ ಸುತ್ತಿಗೆ ಲಗ್ಗೆ ಇಟ್ಟರು. ಇನ್ನೊಂದೆಡೆ ಕಠಿಣ ಸವಾಲು ಎದುರಿಸಿದ ಸರ್ಬಿಯಾದ  ಆಟಗಾರ ನೊವಾಕ್ ಜೊಕೊವಿಚ್ ಕೂಡ ಗೆದ್ದರು.  ಈ ಯುವ ಮತ್ತು ಅನುಭವಿ ಆಟಗಾರರಿಬ್ಬರೂ ಈ ಟೂರ್ನಿಯ ಸೆಮಿಫೈನಲ್ ಪ್ರವೇಶಿಸುವ ನಿರೀಕ್ಷೆ ಮೂಡಿದೆ. 

ಆರ್ಥರ್‌ ಆ್ಯಷ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಅಲ್ಕರಾಜ್ ಅವರು 6–1, 6–0, 6–3ರಿಂದ ಇಟಲಿಯ ಮ್ಯಾಟಿಯಾ ಬೆಲ್ಲುಚಿ  ವಿರುದ್ಧ ಪಾರಮ್ಯ ಮೆರೆದರು. ಸ್ಪೇನ್‌ನ 22 ವರ್ಷದ ಅಲಕ್ರಾಜ್ ಅವರು ನೇರ ಸೆಟ್‌ಗಳಲ್ಲಿಯೂ ಮೇಲುಗೈ ಸಾಧಿಸಿದರು. ಯಾವುದೇ ಹಂತದಲ್ಲಿಯೂ ಇಟಲಿಯ ಆಟಗಾರನಿಂದ  ದೊಡ್ಡಮಟ್ಟದ ಪ್ರತಿರೋಧ ಎದುರಿಸಲಿಲ್ಲ. 65ನೇ ರ‍್ಯಾಂಕ್‌ನ ಬೆಲ್ಲುಚಿ ಅವರು ಈಚೆಗೆ ವಿಂಬಲ್ಡನ್‌ನಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದು. ಗ್ರ್ಯಾನ್‌
ಸ್ಲ್ಯಾಮ್ ಟೂರ್ನಿಗಳಲ್ಲಿ ಅದು ಅವರ ಶ್ರೇಷ್ಠ ಸಾಧನೆಯಾಗಿದೆ. 

ADVERTISEMENT

ಇಲ್ಲಿ ಅಲ್ಕರಾಜ್ ಅವರು 32 ವಿನ್ನರ್‌ಗಳನ್ನು ದಾಖಲಿಸುವ ಮೂಲಕ ಇಟಲಿ ಆಟಗಾರನಿಗೆ ಚೇತರಿಸಿಕೊಳ್ಳುವ ಅವಕಾಶವನ್ನೇ ನೀಡಲಿಲ್ಲ. 

‘ಪಂದ್ಯದ ಆರಂಭದಿಂದ ಕೊನೆಯ ಹೊಡೆತದವರೆಗೂ ಚೆನ್ನಾಗಿ ಆಡಿದೆ’ ಎಂದು ಅಲ್ಕರಾಜ್ ಅವರು  ವಿಜಯದ ನಂತರ ಹೇಳಿದರು. ಮುಂದಿನ ಸುತ್ತಿನಲ್ಲಿ ಅವರು ಇಟಲಿಯ ಮತ್ತೊಬ್ಬ ಆಟಗಾರ 32ನೇ ಶ್ರೇಯಾಂಕದ ಲೂಸಿಯಾನೊ ದರ್ದೇರಿ ಅವರನ್ನು ಎದುರಿಸಲಿದ್ದಾರೆ. 

‘ಕೋರ್ಟ್‌ನಲ್ಲಿ ಕಡಿಮೆ ಸಮಯ ವ್ಯಯಿಸಿದಷ್ಟು ನನಗೇ ಒಳ್ಳೆಯದು. ಅದರಿಂದಾಗಿ ನಾನು ಬೇಗನೆ ಮಲಗಲು ಹೋಗಬಹುದು’ ಎಂದೂ ಅಲ್ಕರಾಜ್ ಹೇಳಿದರು. 

ಬುಧವಾರ ನಡೆದ ಇನ್ನೊಂದು ಪಂದ್ಯದಲ್ಲಿ ಟೆನಿಸ್ ದಂತಕತೆ ಜೊಕೊವಿಚ್ ಅವರು  6-7 (5/7), 6-3, 6-3, 6-1ರಿಂದ ಅಮೆರಿಕದ ಝಚಾರಿ ಸವಾಜ್ದಾ  ವಿರುದ್ಧ ಗೆದ್ದರು. ಆದರೆ ಈ ಗೆಲುವು ಅವರಿಗೆ ಸುಲಭವಾಗಲಿ ಒಲಿಯಲಿಲ್ಲ. 

25ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಜಯಿಸಿ ದಾಖಲೆ ಬರೆಯುವ ಹುಮ್ಮಸ್ಸಿನಲ್ಲಿರುವ ಜೋಕೊವಿಚ್ ಅವರಿಗೆ ಈ ಪಂದ್ಯದ ಮೊದಲ ಸೆಟ್‌ನಲ್ಲಿಯೇ ಇಟಾಲಿಯನ್ ಆಟಗಾರ ಆಘಾತ ನೀಡಿದ್ದರು. ಟೈಬ್ರೇಕರ್‌ಗೆ ಸಾಗಿದ ಈ ಸೆಟ್‌ ಕಳೆದುಕೊಂಡ ಜೊಕೊ ನಂತರದ ಸೆಟ್‌ಗಳಲ್ಲಿ ವೀರಾವೇಷದ ಆಟವಾಡಿದರು. ಎದುರಾಳಿಗೆ ಯಾವುದೇ ಹಂತದಲ್ಲಿಯೂ ಅವಕಾಶ ನೀಡದೇ ಗೆಲುವಿನ ದಾರಿ ತುಳಿದರು.  ಅದರೊಂದಿಗೆ ಅಮೆರಿಕ ಓಪನ್‌ ಟೆನಿಸ್ ಟೂರ್ನಿಯಲ್ಲಿ 19ನೇ ಬಾರಿಗೆ ಮೂರನೇ ಸುತ್ತು ಪ್ರವೇಶಿಸಿ ದಾಖಲೆ ಬರೆದರು. 

ಮುಂದಿನ ಸುತ್ತಿನಲ್ಲಿ ಅವರು ಬ್ರಿಟನ್‌ನ ಕ್ಯಾಮೆರಾನ್ ನೊರಿ ಅವರನ್ನು ಎದುರಿಸುವರು. ಕ್ಯಾಮೆರಾನ್ ಅವರು ಎರಡನೇ ಸುತ್ತಿನಲ್ಲಿ   7-6 (7/5), 6-3, 6-7 (0/7), 7-6 (7/4) ರಿಂದ ಅರ್ಜೆಂಟಿನಾದ ಫ್ರಾನ್ಸಿಸ್ಕೊ ಕಾಮೆಸಾನಾ ವಿರುದ್ಧ ಜಯಿಸಿದರು. 

ಮಹಿಳೆಯರ ಸಿಂಗಲ್ಸ್‌ನಲ್ಲಿ ವಿಶ್ವದ ಅಗ್ರಶ್ರೇಯಾಂಕದ ಆಟಗಾರ್ತಿ ಅರೀನಾ ಸಬಲೆಂಕಾ 7–6, 6–2ರಿಂದ ರಷ್ಯಾದ ಪೊಲಿನಾ ಕುದೆರ್ಮೆಟೊವಾ ವಿರುದ್ಧ ಗೆದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.