ಮೈಕೆಲ್ ವೀನಸ್, ಯೂಕಿ ಭಾಂಬ್ರಿ
(ಚಿತ್ರ ಕೃಪೆ: X/@StarSportsIndia)
ನ್ಯೂಯಾರ್ಕ್: ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಯೂಕಿ ಭಾಂಬ್ರಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಆ ಮೂಲಕ ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ.
ನ್ಯೂಜಿಲೆಂಡ್‌ನ ಮೈಕೆಲ್ ವೀನಸ್ ಅವರೊಂದಿಗೆ ಜೊತೆಗೂಡಿ ಪ್ರತಿಷ್ಠಿತ ಟೂರ್ನಿಯಲ್ಲಿ ಕಣಕ್ಕಿಳಿದಿರುವ ಯೂಕಿ ಭಾಂಬ್ರಿ, ನಾಲ್ಕನೇ ಶ್ರೇಯಾಂಕಿತ ಜರ್ಮನಿಯ ಕೆವಿನ್ ಕ್ರಾವಿಯೆಜ್ಜ್ ಹಾಗೂ ಟಿಮ್ ಪುಯೆಟ್ಜ್ ವಿರುದ್ಧ 6-4, 6-4ರ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಟೂರ್ನಿಯಲ್ಲಿ 14ನೇ ಶ್ರೇಯಾಂಕಿತ ಯೂಕಿ-ಮೈಕಲ್ ಜೋಡಿ, ಒಂದು ತಾಸು 23 ನಿಮಿಷಗಳ ಹೋರಾಟದ ಅಂತಿಮದಲ್ಲಿ ಗೆಲುವು ದಾಖಲಿಸಿತು.
ಭಾರತ-ನ್ಯೂಜಿಲೆಂಡ್ ಜೋಡಿಗೆ ಕ್ವಾರ್ಟರ್ ಫೈನಲ್‌ನಲ್ಲಿ 11ನೇ ಶ್ರೇಯಾಂಕಿತ ಕ್ರೊವೇಶಿಯಾದ ನಿಕೋಲಾ ಮೆಕ್ಟಿಕ್ ಹಾಗೂ ಅಮೆರಿಕದ ರಾಜೀವ್ ರಾಮ್ ಸವಾಲು ಎದುರಾಗಲಿದೆ.
33 ವರ್ಷದ ಭಾಂಬ್ರಿ, ಪ್ರಸಕ್ತ ಸಾಲಿನಲ್ಲೇ ನಡೆದ ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.