ADVERTISEMENT

ಐಟಿಎಫ್‌ ಮಹಿಳಾ ಟೆನಿಸ್‌: ಎಂಟರ ಘಟ್ಟಕ್ಕೆ ವೈಷ್ಣವಿ ಅಡ್ಕರ್ ಲಗ್ಗೆ

ಶ್ರೀವಲ್ಲಿ, ಸಹಜಾ ಯಮಲಪಲ್ಲಿ ನಿರ್ಗಮನ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 0:58 IST
Last Updated 20 ಫೆಬ್ರುವರಿ 2026, 0:58 IST
<div class="paragraphs"><p>ಭಾರತದ ವೈಷ್ಣವಿ ಅಡ್ಕರ್‌ &nbsp;ಚಿತ್ರ: ಜನಾರ್ದನ ಬಿ.ಕೆ.</p></div>

ಭಾರತದ ವೈಷ್ಣವಿ ಅಡ್ಕರ್‌  ಚಿತ್ರ: ಜನಾರ್ದನ ಬಿ.ಕೆ.

   

ಬೆಂಗಳೂರು: ವೈಷ್ಣವಿ ಅಡ್ಕರ್‌ ಅವರು ಕೆಪಿಬಿ ಟ್ರಸ್ಟ್‌ ಐಟಿಎಫ್‌ ಮಹಿಳಾ ಓಪನ್ ಟೆನಿಸ್ ಟೂರ್ನಿಯಲ್ಲಿ ಗುರುವಾರ ಎಂಟರ ಘಟ್ಟ ತಲುಪುವ ಮೂಲಕ ಭಾರತದ ಸವಾಲನ್ನು ಜೀವಂತವಾಗಿರಿಸಿದ್ದಾರೆ. ಆದರೆ ಶ್ರೀವಲ್ಲಿ ರಶ್ಮಿಕಾ ಭಮಿಡಿಪಾಟಿ ಮತ್ತು ಸಹಜಾ ಯಮಲಪಲ್ಲಿ ಅವರು ತಮಗಿಂತ ಮೇಲಿನ ಕ್ರಮಾಂಕದ ಆಟಗಾರ್ತಿಯರೆದುರು ಸೋಲನುಭವಿಸಿದರು.

ಎಸ್‌.ಎಂ.ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಸಹಜಾ ಹೋರಾಟ ತೋರದೇ ಅಗ್ರ ಶ್ರೇಯಾಂಕದ ತಾಲಿಯಾ ಗಿಬ್ಸನ್ ಅವರಿಗೆ ಶರಣಾದರು.  16ರ ಸುತ್ತಿನ ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರ್ತಿ 6–0, 6–0 ಯಿಂದ 58 ನಿಮಿಷಗಳಲ್ಲಿ ಗೆಲುವು ದಾಖಲಿಸಿದರು. ಗಿಬ್ಸನ್ ವಿಶ್ವ ಕ್ರಮಾಂಕದಲ್ಲಿ 111ನೇ ಸ್ಥಾನದಲ್ಲಿದ್ದಾರೆ.

ADVERTISEMENT

543ನೇ ಕ್ರಮಾಂಕದ ಶ್ರೀವಲ್ಲಿ ರಶ್ಮಿಕಾ ಇನ್ನೊಂದು ಸೆಣಸಾಟದಲ್ಲಿ ಮೂರನೇ ಶ್ರೇಯಾಂಕದ ಹ್ಯಾನೆ ವಂಡೆವಿಂಕಿಲ್ ಅವರ ಎದುರು ಹೋರಾಟ ತೋರಿದರು. ಆದರೆ ಅವರ ಚೇತರಿಕೆ ಅಲ್ಪಕಾಲದ್ದಾಯಿತು. 124ನೇ ಕ್ರಮಾಂಕ ಹೊಂದಿರುವ ಬೆಲ್ಜಿಯಂನ ಹ್ಯಾನೆ 6–2, 6–7 (7), 6–1 ರಿಂದ ಭಾರತದ ಆಟಗಾರ್ತಿಯ ಹೋರಾಟವನ್ನು ಮೆಟ್ಟಿನಿಂತರು.

ಈ ನಿರಾಸೆಯ ನಡುವೆ, 21 ವರ್ಷ ವಯಸ್ಸಿನ ವೈಷ್ಣವಿ ಅಡ್ಕರ್ ಆತಿಥೇಯ ತಂಡದ ಭರವಸೆಯಾಗಿ ಉಳಿದರು. ಅವರು ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಹಿನ್ನಡೆಯಿಂದ ಚೇತರಿಸಿಕೊಂಡು ಎಂಟನೇ ಶ್ರೇಯಾಂಕದ ಮಾಯಿ ಹೊಟಾಮ (ಜಪಾನ್) ಅವರನ್ನು 2–6, 6–4, 7–6 ರಿಂದ ಸೋಲಿಸಿ ಅರ್ಹ ಜಯಗಳಿಸಿದರು.

ವಿಶ್ವ ಕ್ರಮಾಂಕದಲ್ಲಿ 690ನೇ ಸ್ಥಾನದಲ್ಲಿರುವ ವೈಷ್ಣವಿ ಅವರು ವೈಲ್ಡ್‌ ಕಾರ್ಡ್ ಮೂಲಕ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಹೊಟಾಮ ಕ್ರಮಾಂಕಪಟ್ಟಿಯಲ್ಲಿ 220ನೇ
ಸ್ಥಾನದಲ್ಲಿದ್ದಾರೆ.

ಐದನೇ ಶ್ರೇಯಾಂಕದ ಪೊಲಿನಾ ಇಯಾಟ್ಸೆಂಕೊ ಅವರು 6–7 (6), 6–3, 6–2 ರಿಂದ ರುಮೇನಿಯಾದ ಅರಿನಾ ಗೇಬ್ರಿಯೆಲಾ ವಾಸಿಲೆಸ್ಕ್ಯು ಅವರನ್ನು ಪರಾಭವಗೊಳಿಸಿದರು.

ಏಳನೇ ಶ್ರೇಯಾಂಕದ ಎಲಿನಾ ಪ್ರಿಡಾನ್ಕಿನಾ 6–0, 6–1 ರಿಂದ ನೆದರ್ಲೆಂಡ್ಸ್‌ನ ಜಾಸ್ಮಿನ್ ಗಿಂಬ್ರೆರೆ ವಿರುದ್ಧ ಜಯಪಡೆದರು. ಎರಡನೇ ಶ್ರೇಯಾಂಕದ ಲನ್ಲನಾ ತರಾರುಡೀ 6–4, 6–4 ರಿಂದ ಮೀ ಯಮಾಗುಚಿ ಅವರನ್ನು ಸೋಲಿಸಿ ಎಂಟರ ಘಟ್ಟಕ್ಕೆ ಮುನ್ನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.