ವೀನಸ್ ವಿಲಿಯಮ್ಸ್
(ಚಿತ್ರ ಕೃಪೆ: X/@Venuseswilliams)
ಮೆಲ್ಬರ್ನ್: ಅಮೆರಿಕದ ಜನಪ್ರಿಯ ಆಟಗಾರ್ತಿ, ಏಳು ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ವೀನಸ್ ವಿಲಿಯಮ್ಸ್ ಮತ್ತೆ ಟೆನಿಸ್ ಅಂಗಳಕ್ಕಿಳಿಯಲಿದ್ದಾರೆ.
45ರ ಹರೆಯದ ವೀನಸ್, ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ 'ವೈಲ್ಡ್ ಕಾರ್ಡ್' ಪಡೆದಿದ್ದಾರೆ.
ಆ ಮೂಲಕ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಆಡಲಿರುವ ಅತಿ ಹಿರಿಯ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.
ಐದು ಬಾರಿಯ ವಿಂಬಲ್ಡನ್ ಹಾಗೂ ಎರಡು ಬಾರಿಯ ಅಮೆರಿಕ ಓಪನ್ ಚಾಂಪಿಯನ್ ಆಗಿರುವ ವೀನಸ್, ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಸಿಂಗಲ್ಸ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.
ವೀನಸ್ ವಿಲಿಯಮ್ಸ್ 2003 ಹಾಗೂ 2017ರಲ್ಲಿ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಸೋತು ರನ್ನರ್-ಅಪ್ ಪ್ರಶಸ್ತಿ ಜಯಸಿದ್ದರು.
2021ರಲ್ಲಿ ಮೆಲ್ಬರ್ನ್ ಪಾರ್ಕ್‌ನಲ್ಲಿ ವೀನಸ್ ಕೊನೆಯದಾಗಿ ಆಡಿದ್ದರು. ನಾಲ್ಕು ವರ್ಷಗಳ ಬಳಿಕವೀಗ ಮತ್ತೆ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.
'ಆಸ್ಟೇಲಿಯನ್ ಓಪನ್‌ನಲ್ಲಿ ಪಾಲ್ಗೊಳ್ಳಲು ತುಂಬಾ ಉತ್ಸಾಹಿತನಾಗಿದ್ದೇನೆ. ಇಲ್ಲಿ ನನಗೆ ಅದ್ಭುತ ನೆನಪುಗಳಿವೆ. ಈ ಅವಕಾಶಕ್ಕಾಗಿ ಕೃತಜ್ಞನಾಗಿದ್ದೇನೆ' ಎಂದು ವೀನಸ್ ಪ್ರತಿಕ್ರಿಯಿಸಿದ್ದಾರೆ.
ಮಾಜಿ ನಂ.1 ಆಟಗಾರ್ತಿ ವೀನಸ್, 2000ನೇ ವರ್ಷದಲ್ಲಿ ಮೊದಲ ಬಾರಿ ಮತ್ತು 2008ರಲ್ಲಿ ಕೊನೆಯದಾಗಿ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದರು.
ನಾಲ್ಕು ಪ್ರತಿಷ್ಠಿತ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ವೀನಸ್ ವಿಲಿಯಮ್ಸ್ ಸಾಧನೆ ಇಂತಿದೆ:
ವಿಂಬಲ್ಡನ್: ಚಾಂಪಿಯನ್ (2000, 2001, 2005, 2007, 2008)
ಅಮೆರಿಕ ಓಪನ್: ಚಾಂಪಿಯನ್ (2000, 2001)
ಆಸ್ಟ್ರೇಲಿಯನ್ ಓಪನ್: ರನ್ನರ್ ಅಪ್ (2003, 2017)
ಫ್ರೆಂಚ್ ಓಪನ್: ರನ್ನರ್ ಅಪ್ (2002)
ಅಂದ ಹಾಗೆ ವೀನಸ್ ವಿಲಿಯಮ್ಸ್, ಡಬಲ್ಸ್ ವಿಭಾಗದಲ್ಲಿ ನಾಲ್ಕು ಸಲ ಆಸ್ಟ್ರೇಲಿಯನ್ ಓಪನ್ ಸೇರಿದಂತೆ ಒಟ್ಟು 14 ಸಲ ಡಬಲ್ಸ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.