ADVERTISEMENT

ಭಾರತದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ವಿಶ್ವ ಟೆನಿಸ್‌ ಲೀಗ್

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 23:36 IST
Last Updated 16 ಡಿಸೆಂಬರ್ 2025, 23:36 IST
<div class="paragraphs"><p>ಟೆನಿಸ್</p></div>

ಟೆನಿಸ್

   

ಬೆಂಗಳೂರು: ಅಮೆರಿಕ ಓಪನ್ ಮಾಜಿ ಚಾಂಪಿಯನ್ ಡೇನಿಯಲ್ ಮೆಡ್ವೆಡೇವ್ ಸೇರಿ ವಿಶ್ವದ ಕೆಲವು ಪ್ರಮುಖ ಟೆನಿಸ್‌ ತಾರೆಗಳ ಆಟವನ್ನು ಕಣ್ತುಂಬಿಕೊಳ್ಳಲು ಉದ್ಯಾನಗರಿಯ ಪ್ರೇಕ್ಷಕರಿಗೆ ಸುವರ್ಣಾವಕಾಶ ಒದಗಿದೆ. ನಾಲ್ಕನೇ ವಿಶ್ವ ಟೆನಿಸ್‌ ಲೀಗ್ ಬುಧವಾರ ಇಲ್ಲಿನ ಎಸ್‌.ಎಂ.ಕೃಷ್ಣ ಟೆನಿಸ್‌ ಕ್ರೀಡಾಂಗಣ
ದಲ್ಲಿ ಆರಂಭವಾಗಲಿದ್ದು, ನಾಲ್ಕು ದಿನ ನಡೆಯಲಿದೆ.

ಭಾರತದಲ್ಲಿ ಮೊದಲ ಬಾರಿ ಈ ಲೀಗ್ ನಡೆಯುತ್ತಿದೆ. ಭಾರತದ ಅನುಭವಿ ಟೆನಿಸಿಗರೂ ಕಣದಲ್ಲಿದ್ದಾರೆ. ಸುಮಿತ್ ನಗಾಲ್‌, ದಕ್ಷಿಣೇಶ್ವರ ಸುರೇಶ್‌, ಅಂಕಿತಾ ರೈನಾ, ಸಹಜಾ ಯಮಲಪಲ್ಲಿ ಇವರಲ್ಲಿ ಪ್ರಮುಖರಾಗಿದ್ದು, ಇತರ ದೇಶಗಳ ತಾರೆಗಳ ಜೊತೆ ಆಡಲಿದ್ದಾರೆ. ಉದಯೋನ್ಮುಖ ಆಟಗಾರ್ತಿ
ಯರಾದ ಶ್ರೀವಲ್ಲಿ ಭಮಿಡಿಪಾಟಿ, ಮಾಯಾ ರಾಜೇಶ್ವರನ್ ರೇವತಿ ಅವರೂ ಹೊಸ ಋತುವಿಗೆ ಪೂರ್ವಭಾವಿಯಾಗಿ ತಮ್ಮ ಆಟ ಹುರಿಗೊಳಿಸಲು ಪ್ರಯತ್ನಿಸಲಿದ್ದಾರೆ.

ADVERTISEMENT

ವಿಶ್ವ ರ‍್ಯಾಂಕಿಂಗ್‌ನಲ್ಲಿ ಪ್ರಸ್ತುತ 13ನೇ ಕ್ರಮಾಂಕ ಪಡೆದಿರುವ ಮೆಡ್ವೆಡೇವ್ ಜೊತೆ, 23ನೇ ರ್‍ಯಾಂಕಿನ ಡೆನಿಸ್‌ ಶಪೊವಲೋವ್‌, 67ನೇ ಕ್ರಮಾಂಕದ ಗೇಲ್ ಮಾನ್ಫಿಲ್ಸ್‌, ಮುಂಗೋಪಕ್ಕೆ ಹೆಸರಾದ ಆಸ್ಟ್ರೇಲಿಯಾ ನಿಕ್‌ ಕಿರ್ಗಿಯೋಸ್‌ ಸಹ ಲೀಗ್‌ನಲ್ಲಿ ಆಡಲಿದ್ದಾರೆ. ಕಿರ್ಗಿಯೋಸ್‌ ಸದ್ಯ 652ನೇ ಸ್ಥಾನದಲ್ಲಿದ್ದಾರೆ. ಗಾಯದ ಕಾರಣ ಅವರು 2023 ಮತ್ತು 2024ರಲ್ಲಿ ಬಹುತೇಕ ಟೂರ್ನಿಗಳಲ್ಲಿ ಆಡಿರಲಿಲ್ಲ.

ಮುಂದಿನ ತಿಂಗಳು ನಡೆಯಲಿರುವ ಆಸ್ಟ್ರೇಲಿಯನ್ ಓಪನ್‌ಗೆ ಮೊದಲು ಅವರಿಗೆ ತಮ್ಮ ದೈಹಿಕ ಸಾಮರ್ಥ್ಯ ಪರೀಕ್ಷೆಗೂ ಈ ಲೀಗ್ ನೆರವಾಗಲಿದೆ. ಅವರು ತಮ್ಮ ಪೂರ್ಣ ಲಯಕ್ಕೆ ಮರಳಿದರೆ, ಉತ್ತಮ ಆಟ ವೀಕ್ಷಿಸಲು ಸಿಗಲಿದೆ.

ಮಹಿಳೆಯರ ಪೈಕಿ 14ನೇ ಕ್ರಮಾಂಕದ ಎಲಿನಾ ಸ್ವಿಟೋಲಿನಾ, 25ನೇ ಕ್ರಮಾಂಕದ ಪೌಲಾ ಬಡೋಸಾ ಅವರು ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಈ ವರ್ಷ ಅಮೆರಿಕ ಓಪನ್ ಅಂತಿಮ ನಾಲ್ಕರ ಸುತ್ತಿಗೆ ಮಾರ್ತಾ ತಲುಪಿದ್ದರು.

ಹೇಗಿರಲಿದೆ ಮಾದರಿ: ನಾಲ್ಕು ತಂಡಗಳು– ವಿ.ಬಿ.ರಿಯಾಲ್ಟಿ ಹಾಕ್ಸ್‌, ಗೇಮ್ ಚೇಂಜರ್ಸ್‌ ಫಾಲ್ಕನ್ಸ್‌, ಆಸಿ ಮಾವೆರಿಕ್ಸ್‌ ಕೈಟ್ಸ್ ಮತ್ತು ಎಒಎಸ್‌ ಈಗಲ್ಸ್‌– ಕಣದಲ್ಲಿರಲಿದ್ದು, ಪ್ರತಿ ತಂಡದಲ್ಲಿ ಇಬ್ಬರು ಪುರುಷರ ಮತ್ತು ಇಬ್ಬರು ಮಹಿಳೆಯರು ಇರಲಿದ್ದಾರೆ. ಹಾಕ್ಸ್‌ ಮತ್ತು ಕೈಟ್ಸ್‌ ನಡುವಣ ಪಂದ್ಯದೊಡನೆ ಲೀಗ್ ಆರಂಭವಾಗಲಿದೆ. ನಂತರ ಈಗಲ್ಸ್ ಮತ್ತು ಫಾಲ್ಕನ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಈ ಟೂರ್ನಿಯು ರೌಂಡ್‌ರಾಬಿನ್ ಮಾದರಿಯಲ್ಲಿ ನಡೆಯಲಿದ್ದು, ಪ್ರತಿ ಪಂದ್ಯವು ನಾಲ್ಕು ಸೆಟ್‌ಗಳನ್ನು ಹೊಂದಿದೆ. ತಂಡಗಳು ಪಂದ್ಯದಲ್ಲಿ ಗೆಲ್ಲುವ ಪ್ರತಿಯೊಂದು ಗೇಮ್‌ಗೆ ಒಂದೊಂದು ಅಂಕ ನೀಡಲಾಗುವುದು. ನಾಲ್ಕನೇ ಸೆಟ್‌ ಗೆಲ್ಲುವ ತಂಡ ಹಿಂದೆಬಿದ್ದಲ್ಲಿ, ಪಂದ್ಯ ಮುಂದುವರಿಯಲಿದೆ. ನಾಲ್ಕು ಸೆಟ್‌ಗಳ ನಂತರ ಒಟ್ಟಾರೆ ಸ್ಕೋರ್ ಸಮನಾದಲ್ಲಿ 10 ಸೂಪರ್‌ ಶೂಟ್‌ಔಟ್‌ ಟೈಬ್ರೇಕ್ ಆಡಲಾಗುವುದು.

ಲೀಗ್‌ ಹಂತದಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಶನಿವಾರ ಫೈನಲ್ ಆಡಲಿವೆ.

ಸೋನಿ ಸ್ಪೋರ್ಟ್ಸ್‌ ನೆಟ್‌ವರ್ಕ್‌ ಮತ್ತು ಫ್ಯಾನ್‌ಕೋಡ್‌ ಆ್ಯಪ್‌ನಲ್ಲಿ ಮಧ್ಯಾಹ್ನ 3ರಿಂದ ನೇರ ಪ್ರಸಾರ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.