ADVERTISEMENT

ರಾಮ್‌ಕುಮಾರ್‌, ಯೂಕಿ ಮಿಂಚಿನ ಆಟ: ಭಾರತಕ್ಕೆ ಮುನ್ನಡೆ

ಡೇವಿಸ್ ಕಪ್ ವಿಶ್ವ ಗುಂಪು ಒಂದರ ಪ್ಲೇ ಆಫ್‌ನ ಡೆನ್ಮಾರ್ಕ್ ಎದುರಿನ ಹಣಾಹಣಿಯಲ್ಲಿ ಜಯಭೇರಿ

ಪಿಟಿಐ
Published 4 ಮಾರ್ಚ್ 2022, 13:26 IST
Last Updated 4 ಮಾರ್ಚ್ 2022, 13:26 IST
ಚೆಂಡನ್ನು ರಿಟರ್ನ್ ಮಾಡಲು ಮುಂದಾದ ಭಾರತದ ಯೂಕಿ ಭಾಂಬ್ರಿ –ಪಿಟಿಐ ಚಿತ್ರ
ಚೆಂಡನ್ನು ರಿಟರ್ನ್ ಮಾಡಲು ಮುಂದಾದ ಭಾರತದ ಯೂಕಿ ಭಾಂಬ್ರಿ –ಪಿಟಿಐ ಚಿತ್ರ   

ನವದೆಹಲಿ: ಯೂಕಿ ಭಾಂಬ್ರಿ ಮತ್ತು ರಾಮ್‌ಕುಮಾರ್ ರಾಮನಾಥನ್ ಅವರು ಡೆಲ್ಲಿ ಜಿಮ್ಖಾನಾ ಕ್ರೀಡಾಂಗಣದಲ್ಲಿ ಶುಕ್ರವಾರ ಅಮೋಘ ಆಟದ ಮೂಲಕ ಮಿಂಚಿದರು. ಎದುರಾಳಿಗಳ ವಿರುದ್ಧ ನೇರ ಸೆಟ್‌ಗಳ ಜಯ ಸಾಧಿಸಿದ ಅವರು ಡೇವಿಸ್ ಕಪ್‌ ವಿಶ್ವ ಗುಂಪು ಒಂದರ ಪ್ಲೇ ಆಫ್‌ನಲ್ಲಿ ಡೆನ್ಮಾರ್ಕ್ ಎದುರು ಭಾರತಕ್ಕೆ 2–0ಯಿಂದ ಜಯ ಗಳಿಸಿಕೊಟ್ಟರು. ‌

ಚೆಂಡು ಹೆಚ್ಚು ಪುಟಿದೇಳದ ಹಸಿರು ಅಂಗಣದಲ್ಲಿ ಡೆನ್ಮಾರ್ಕ್ ಆಟಗಾರರು ಪಾಯಿಂಟ್ ಗಳಿಸಲು ಪರದಾಡಿದರು. ಇದರ ಪರಿಪೂರ್ಣ ಲಾಭ ಪಡೆದುಕೊಂಡ ಭಾರತದ ಆಟಗಾರರು ನೇರ ಸೆಟ್‌ಗಳ ಗೆಲುವು ಸಾಧಿಸಿದರು. ರಾಮ್‌ಕುಮಾರ್ ರಾಮನಾಥನ್ 6-3, 6-2ರಲ್ಲಿ ಕ್ರಿಸ್ಟಿಯನ್ ಸಿಗ್ಸ್‌ಗಾರ್ಡ್‌ ಎದುರು ಗೆದ್ದರು. ಯೂಕಿ ಭಾಂಬ್ರಿ 6-4, 6-4ರಲ್ಲಿ ಮಿಕೈಲ್ ಟಾಪೆಗಾರ್ಡ್ ವಿರುದ್ಧ ಜಯ ಗಳಿಸಿದರು. ಯೂಕಿ 2017ರ ನಂತರ ಇದೇ ಮೊದಲು ಡೇವಿಸ್ ಕಪ್‌ನಲ್ಲಿ ಆಡುತ್ತಿದ್ದಾರೆ.

ಡೆನ್ಮಾರ್ಕ್ ಎದುರಿನ ಹಣಾಹಣಿಯನ್ನು ಹಸಿರು ಅಂಗಣದಲ್ಲಿ ಆಯೋಜಿಸಲು ನಿರ್ಧರಿಸಿರುವುದು ಭಾರತಕ್ಕೆ ಅನುಕೂಲವೇ ಆಯಿತು. ಎರಡೂ ಪಂದ್ಯಗಳ ಪ್ರತಿ ಹಂತದಲ್ಲೂ ಡೆನ್ಮಾರ್ಕ್ ಆಟಗಾರರು ನೀರಸ ಆಟವಾಡಿದರು. ಶನಿವಾರ ನಡೆಯಲಿರುವ ಡಬಲ್ಸ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಜೋಡಿ ಫ್ರೆಡೆರಿಕ್ ನೀಲ್ಸನ್–ಜೊಹಾನ್ಸ್ ಇಂಗಿಲ್ಡ್ಸೆನ್ ಅವರನ್ನು ಎದುರಿಸುವರು. ಈ ಪಂದ್ಯದಲ್ಲಿ ಗೆದ್ದರೆ ಭಾರತ ವಿಶ್ವ ಗುಂಪು–1ರಲ್ಲಿ ಆಡಲು ಅರ್ಹತೆ ಗಳಿಸಲಿದೆ. ನಂತರ ನಡೆಯಲಿರುವ ರಿವರ್ಸ್‌ ಸಿಂಗಲ್ಸ್ ಪಂದ್ಯಕ್ಕೆ ಮಹತ್ವ ಇರುವುದಿಲ್ಲ.

ADVERTISEMENT

ಎರಡನೇ ಸೆಟ್‌ನಲ್ಲಿ 4–1ರ ಮುನ್ನಡೆ ಗಳಿಸಿದ್ದ ಯೂಕಿ ಅವರಿಗೆ ಎದುರಾಳಿ ಆಟಗಾರ ತಿರುಗೇಟು ನೀಡಿ ಹಿನ್ನಡೆಯನ್ನು 4–5ಕ್ಕೆ ಕುಗ್ಗಿಸಿದ್ದರು. ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯೂಕಿ ಪಂದ್ಯದಲ್ಲಿ ಗೆಲುವು ನನ್ನದೇ ಎಂಬ ಭರವಸೆ ಇತ್ತು. ಆದ್ದರಿಂದ ಕೆಲವು ಪಾಯಿಂಟ್‌ಗಳನ್ನು ಕಳೆದುಕೊಂಡರೂ ಎದೆಗುಂದಲಿಲ್ಲ ಎಂದರು.

ಚೆನ್ನಾಗಿ ಸರ್ವ್ ಮಾಡಿದೆ. ತಂಡದ ಮತ್ತು ಪ್ರೇಕ್ಷಕರ ಬೆಂಬಲವೂ ನನಗೆ ಅನುಕೂಲವಾಯಿತು. ಕೆಲವು ಪಾಯಿಂಟ್‌ಗಳು ಅನಿರೀಕ್ಷಿತವಾಗಿ ಬಂದಿದ್ದವು. ಅದು ಸಂತೋಷದ ವಿಷಯ.

ರಾಮ್‌ಕುಮಾರ್ ರಾಮನಾಥನ್ ಭಾರತದ ಆಟಗಾರ

***

ಡೇವಿಸ್‌ ಕ‍ಪ್‌ ಪಂದ್ಯಗಳಲ್ಲಿ ಚೆನ್ನಾಗಿ ಅಡುವುದಕ್ಕಿಂತ ಉತ್ತಮ ಪೈಪೋಟಿ ನೀಡುವ ಆಟಗಾರರು ಗೆಲ್ಲುತ್ತಾರೆ. ಇಂದು ನಾನು ಚೆನ್ನಾಗಿ ಕಾದಾಡಿದೆ, ಗೆದ್ದೆ.

ಯೂಕಿ ಭಾಂಬ್ರಿ ಭಾರತದ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.