ADVERTISEMENT

ಯೂಕಿಗೆ ಆಸ್ಟ್ರೇಲಿಯಾದಲ್ಲಿ ಮಿಂಚುವ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 12:21 IST
Last Updated 9 ಜನವರಿ 2022, 12:21 IST
ಯೂಕಿ ಬಾಂಭ್ರಿ
ಯೂಕಿ ಬಾಂಭ್ರಿ   

ಬೆಂಗಳೂರು: ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯು ತಮಗೆ ಅತ್ಯಂತ ಅಚ್ಚುಮೆಚ್ಚಿನದ್ದು. ಗಾಯದಿಂದ ಸುದೀರ್ಘ ವಿಶ್ರಾಂತಿಯ ನಂತರ ಮಹತ್ವದ ಟೂರ್ನಿಗೆ ಮರಳಿದ್ದು ಉತ್ತಮ ಸಾಧನೆ ಮಾಡುವ ವಿಶ್ವಾಸವಿದೆ ಎಂದು ಟೆನಿಸ್ ಆಟಗಾರ ಯೂಕಿ ಬಾಂಭ್ರಿ ಹೇಳಿದರು.

ಇದೇ ವಾರ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್‌ನಲ್ಲಿ ಆಡಲಿರುವ 29 ವರ್ಷದ ಯೂಕಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಇದು ನನ್ನ ಅಚ್ಚುಮೆಚ್ಚಿನ ತಾಣ. ಇಲ್ಲಿ ಬಹಳಷ್ಟು ಸಿಹಿಯಾದ ನೆನಪುಗಳಿವೆ. ಅವುಗಳಿಂದ ನನ್ನ ಆತ್ಮವಿಶ್ವಾಸ ಹೆಚ್ಚಲಿದೆ. ಇದರಿಂದಾಗಿ ಚೆನ್ನಾಗಿ ಆಡಲಿದ್ದೇನೆ‘ ಎಂದು ಯೂಕಿ ಹೇಳಿದರು.

ADVERTISEMENT

ಯೂಕಿ 2009ರಲ್ಲಿ ಮೆಲ್ಬರ್ನ್‌ನಲ್ಲಿ ಜೂನಿಯರ್ ಪ್ರಶಸ್ತಿ ಗೆದ್ದಿದ್ದರು. ಆ ವಿಭಾಗದಲ್ಲಿ ವಿಶ್ವದ ಅಗ್ರಶ್ರೇಯಾಂಕದ ಆಟಗಾರನಾಗಿ ಬಡ್ತಿ ಪಡೆದಿದ್ದರು. 2018ರಲ್ಲಿ ಯೂಕಿ 83ನೇ ರ‍್ಯಾಂಕ್ ಪಡೆದಿದ್ದರು. ಆದರೆ ಮೊಣಕಾಲು ಗಾಯದಿಂದಾಗಿ ಅವರು ಬಹಳಷ್ಟು ಕಾಲ ಅಂಕಣದಿಂದ ದೂರವುಳಿದರು.

ಅವರು ಈ ಬಾರಿ ಆಸ್ಟ್ರೇಲಿಯಾ ಓಪ್‌ನಲ್ಲಿ ನ್ಯೂಜಿಲೆಂಡ್‌ನ ಮೈಕೆಲ್ ವೀನಸ್ ಅವರೊಂದಿಗೆ ಡಬಲ್ಸ್‌ನಲ್ಲಿ ಕಣಕ್ಕಿಳಿಯುವರು.

‘ಈ ಟೂರ್ನಿಯ ನಂತರ ಪುಣೆಯಲ್ಲಿ ನಡೆಯಲಿರುವ ಮಹಾರಾಷ್ಟ್ರ ಓಪನ್ ಮತ್ತು ಬೆಂಗಳೂರಿನಲ್ಲಿ ನಡೆಯಲಿರುವ ಓಪನ್ ಟೂರ್ನಿ ಹಾಗೂ ಡೇವಿಸ್‌ ಕಪ್ ಟೂರ್ನಿಯಲ್ಲಿ ಆಡಲು ಸಿದ್ಧತೆ ಮಾಡುತ್ತಿದ್ದೇನೆ. ಹುಲ್ಲಿನಂಕಣದಲ್ಲಿ ಆಡುವುದು ಉತ್ತಮ ಅನುಭವವಾಗಲಿದೆ’ ಎಂದರು.

ಇದೇ ಮಾರ್ಚ್‌ನಲ್ಲಿ ದೆಹಲಿಯ ಜಿಮ್‌ಖಾನಾ ಕ್ಲಬ್‌ನ ಹುಲ್ಲಿನಂಕಣದಲ್ಲಿ ಬೆಲ್ಜಿಯಂ ವಿರುದ್ಧ ಡೇವಿಸ್ ಕಪ್ ಟೂರ್ನಿ ನಡೆಯಲಿದೆ.

‘ಅಡಿಲೇಡ್ ಇಂಟರ್‌ನ್ಯಾಷನಲ್ ನಲ್ಲಿ ಪ್ರಶಸ್ತಿ ಜಯಿಸಿರುವ ರೋಹನ್ ಬೋಪಣ್ಣ ಮತ್ತು ರಾಮಕುಮಾರ್ ರಾಮನಾಥನ್ ಅವರ ಸಾಧನೆ ಅಮೋಘವಾದದ್ದು. ಭಾರತದ ಟೆನಿಸ್ ಬೆಳವಣಿಗೆಗೆ ಇದು ಸ್ಪೂರ್ತಿ ತುಂಬಲಿದೆ’ ಎಂದು ಯೂಕಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.