ADVERTISEMENT

ಟೆನಿಸ್‌ಗೆ ವಿದಾಯ; ವಿಶ್ವಕಪ್‌ ಗೆದ್ದ ಸಂಭ್ರಮ

ಆಸ್ಟ್ರೇಲಿಯಾ ತಂಡದ ಜೊತೆ ದಕ್ಷಿಣ ಕನ್ನಡದ ಕಿನ್ನಿಗೋಳಿ ದಂಪತಿ ಪುತ್ರಿ ಊರ್ಮಿಳಾ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2023, 23:05 IST
Last Updated 22 ನವೆಂಬರ್ 2023, 23:05 IST
ಊರ್ಮಿಳಾ ರೊಜಾರಿಯೊ
ಊರ್ಮಿಳಾ ರೊಜಾರಿಯೊ   

ಮಂಗಳೂರು: ಇಷ್ಟದ ಕ್ರೀಡೆ ಟೆನಿಸ್‌ನಿಂದ ವೈಯಕ್ತಿಕ ಕಾರಣಗಳಿಂದ ದೂರ ಉಳಿಯಬೇಕಾಗಿ ಬಂದ ಊರ್ಮಿಳಾ ರೊಜಾರಿಯೊ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾ ತಂಡದ ಜೊತೆ ಸಂಭ್ರಮಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಕಿನ್ನಿಗೋಳಿ ಮೂಲದ ಐವಿ ರೊಜಾರಿಯೊ ಮತ್ತು ವೆಲೆಂಟೈನ್ ಅವರ ಪುತ್ರಿ ಊರ್ಮಿಳಾ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿರುವ ಅವರು ಈ ಬಾರಿ ವಿಶ್ವಕಪ್‌ ಗೆದ್ದ ತಂಡದ ಜೊತೆ ಭಾರತದಲ್ಲಿದ್ದರು. ಬುಧವಾರ ಬೆಂಗಳೂರಿನಿಂದ ಆಸ್ಟ್ರೇಲಿಯಾಗೆ ತೆರಳಿದ್ದು ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡದ ಜೊತೆ ಭಾರತಕ್ಕೆ ಬರಲಿದ್ದಾರೆ.

ಉದ್ಯಮಿ ಐವಿ ಮತ್ತು ಶಿಕ್ಷಕಿ ವೆಲೆಂಟೈನ್‌ ಅವರು 40 ವರ್ಷ ದೋಹಾದಲ್ಲಿ ನೆಲೆಸಿದ್ದರು. ಊರ್ಮಿಳಾ ಜನಿಸಿದ್ದು ಮತ್ತು ಬೆಳೆದದ್ದು ಅಲ್ಲೇ. ಟೆನಿಸ್‌ ಪಟು ಆಗಿದ್ದ ಅವರು ಏಕಾಏಕಿ ಕ್ರೀಡಾ ವ್ಯವಸ್ಥಾಪನೆಯ ಕಡೆಗೆ ಸಾಗಿದರು. ಆಸ್ಟ್ರೇಲಿಯಾಗೆ ತೆರಳಿ ಅಡಿಲೇಡ್ ಕ್ರಿಕೆಟ್ ತಂಡದ ವ್ಯವಸ್ಥಾಪಕಿ ಆಗಿ ಕಾರ್ಯನಿರ್ವಹಿಸಿದರು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದ ವ್ಯವಸ್ಥಾಪಕಿಯಾಗಿ ನೇಮಕಗೊಂಡಿದ್ದರು.

ADVERTISEMENT

ದೋಹಾದಿಂದ ಮರಳಿದ ಐವಿ ಮತ್ತು ಶಿಕ್ಷಕಿ ವೆಲೆಂಟೈನ್‌ ದಂಪತಿ ಈಗ ಸಕಲೇಶಪುರದ ತೋಟದ ಮನೆಯಲ್ಲಿ ನೆಲೆಸಿದ್ದಾರೆ. ಪುತ್ರಿ ಇದ್ದ ತಂಡ ವಿಶ್ವಕಪ್ ಗೆದ್ದ ನಂತರ ಅವರೂ ಖುಷಿಯ ಅಲೆಯಲ್ಲಿದ್ದಾರೆ. ಬೆಂಗಳೂರಿನಲ್ಲಿದ್ದ ಊರ್ಮಿಳಾ ಅವರನ್ನು ಬುಧವಾರ ಆಸ್ಟ್ರೇಲಿಯಾಗೆ ಕಳುಹಿಸಿದ್ದಾರೆ. ‘ಪ್ರಜಾವಾಣಿ’ ಜೊತೆ ದೂರವಾಣಿ ಮೂಲಕ ಮಾತನಾಡಿದ ವೆಲೆಂಟೈನ್‌ ‘ನಮಗೆ ನಾಲ್ವರು ಮಕ್ಕಳು. ಎಲ್ಲರೂ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶ್ವಕಪ್ ಗೆದ್ದ ತಂಡದಲ್ಲಿ ಊರ್ಮಿಳಾ ಇದ್ದದ್ದು ಖುಷಿಯ ಸಂಗತಿ’ ಎಂದರು. 

ಐಸಿಸಿ ಮಹಿಳಾ ಚಾಂಪಿಯನ್‌ಷಿಪ್‌ ಅಂಗವಾಗಿ ಡಿಸೆಂಬರ್ 28ರಿಂದ ಭಾರತದಲ್ಲಿ ನಡೆಯಲಿರುವ ಭಾರತ–ಆಸ್ಟ್ರೇಲಿಯಾ ಮಹಿಳೆಯರ ಏಕದಿನ ಸರಣಿಯ ವೇಳೆ ಮಹಿಳಾ ತಂಡದ ವ್ಯವಸ್ಥಾಪಕಿಯಾಗಿ ಊರ್ಮಿಳಾ ಭಾರತಕ್ಕೆ ಬರುವ ನಿರೀಕ್ಷೆಯಲ್ಲಿದ್ದಾರೆ ಕುಟುಂಬದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.