ADVERTISEMENT

ಟಿ20 ವಿಶ್ವಕಪ್: ಭಾರತ–ಬಾಂಗ್ಲಾ ಅಭ್ಯಾಸ ಪಂದ್ಯ ಇಂದು

ಪಿಟಿಐ
Published 1 ಜೂನ್ 2024, 0:40 IST
Last Updated 1 ಜೂನ್ 2024, 0:40 IST
   

ನ್ಯೂಯಾರ್ಕ್: ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಶನಿವಾರ ಇಲ್ಲಿ ಬಾಂಗ್ಲಾದೇಶ ತಂಡದ ಎದುರು ಅಭ್ಯಾಸ ಪಂದ್ಯ ಆಡಲಿದೆ. 

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತವು ತನ್ನ ಮೊದಲ ಪಂದ್ಯವನ್ನು ಜೂನ್ 5ರಂದು ಆಡಲಿದೆ. ರೋಹಿತ್ ಜೊತೆಗೆ ಇನಿಂಗ್ಸ್ ಆರಂಭಿಸಲಿರುವ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರಿಗೆ ತಮ್ಮ ಲಯಕ್ಕೆ ಮರಳಲು ಇದು ಉತ್ತಮ ಅವಕಾಶವಾಗಿದೆ. 

ತಂಡದಲ್ಲಿರುವ  15 ಆಟಗಾರರೂ ಇತ್ತೀಚೆಗೆ ಮುಗಿದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಆಡಿದ್ದಾರೆ.  ಇದರಿಂದಾಗಿ ಟಿ20 ಮಾದರಿಯಲ್ಲಿ ಉತ್ತಮ ಪೂರ್ವಾಭ್ಯಾಸ ಅವರಿಗಾಗಿದೆ. ಎಲ್ಲರೂ ಪ್ರತಿಭಾನ್ವಿತರಾಗಿದ್ದು, 11 ಆಟಗಾರರ ಸಂಯೋಜನೆಯನ್ನು ಮಾಡಿ ಕಣಕ್ಕಿಳಿಸುವುದು ತಂಡದ ಮ್ಯಾನೇಜ್‌ಮೆಂಟ್ ಮುಂದೆ  ಇರುವ ಸವಾಲು. 

ADVERTISEMENT

ಕಳೆದ 13 ವರ್ಷಗಳಿಂದ ಯಾವುದೇ ಮಾದರಿಯಲ್ಲಿಯೂ ಐಸಿಸಿ ಟ್ರೋಫಿಯನ್ನು ಭಾರತ ತಂಡ ಜಯಿಸಿಲ್ಲ. ಈ ಬಾರಿ ಟ್ರೋಫಿ ಗೆದ್ದು ಪ್ರಶಸ್ತಿ ಬರ ನೀಗಿಸುವ ಕನಸು ಕಾಣುತ್ತಿದೆ. 

ಅಮೆರಿಕದ ತಾಣಗಳಲ್ಲಿ ಇದೇ ಮೊದಲ ಸಲ ವಿಶ್ವಕಪ್ ಟೂರ್ನಿ ನಡೆಯು ತ್ತಿದೆ. ಹೊಸ ಪಿಚ್‌ಗಳು ‘ಆಟ’ ತೋರಿ ಸಲು ಕಾಯುತ್ತಿವೆ. ಆದ್ದರಿಂದ ಇಲ್ಲಿಯ ವಾತಾವರಣ ಹಾಗೂ ಪಿಚ್‌ಗಳಿಗೆ ಹೊಂದಿಕೊಳ್ಳಲು ಅಭ್ಯಾಸ ಪಂದ್ಯಗಳಲ್ಲಿ ಆಡುವುದು ಮಹತ್ವದ್ದಾಗಿದೆ. 

ಅಲ್ಲದೇ ಈ ಪಂದ್ಯಗಳಲ್ಲಿ ಆಟಗಾರರ ಸಾಮರ್ಥ್ಯವನ್ನು ನೋಡಿ 11 ಜನರ ಆಯ್ಕೆಗೆ ಯೋಜಿಸಲು ಕೋಚ್ ರಾಹುಲ್ ದ್ರಾವಿಡ್ ಮತ್ತು ವ್ಯವಸ್ಥಾಪಕ ಮಂಡಳಿಗೆ ಅನುಕೂಲವಾಗಲಿದೆ. 

ರೋಹಿತ್ ಅವರೊಂದಿಗೆ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಆದರೆ ಐಪಿಎಲ್‌ನಲ್ಲಿ ಆರಂಭಿಕ ಬ್ಯಾಟರ್ ಆಗಿ ಮಿಂಚಿರುವ ಕೊಹ್ಲಿ ಅವರನ್ನು ರೋಹಿತ್ ಜೊತೆ ಇನಿಂಗ್ಸ್ ಆರಂಭಿಸಲು ಅವಕಾಶ ಕೊಡುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. 

ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ ಅವರನ್ನು ಕಣಕ್ಕಿಳಿಸುವುದು ಸೂಕ್ತವಾಗಬಹುದು. ಬೌಲಿಂಗ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಅವರೊಂದಿಗೆ ಆರ್ಷದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಸಿದ್ಧಗೊಳಿಸುವ ಸಾಧ್ಯತೆ ಇದೆ. ಆದ್ದರಿಂದ ಅಭ್ಯಾಸ ಪಂದ್ಯಗಳ ಪ್ರಯೋಗ ಮುಖ್ಯವಾಗಲಿದೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಬೌಲಿಂಗ್ ವಿಭಾಗಕ್ಕೆ ಶಕ್ತಿ ತುಂಬಬಲ್ಲರು.  

ಬಾಂಗ್ಲಾ ತಂಡವು ಮಧ್ಯಮ ಕ್ರಮಾಂಕದಲ್ಲಿ ಶಕೀಬ್ ಅಲ್ ಹಸನ್ ಅಥವಾ ಮೆಹದಿ ಹಸನ್ ಅವರಲ್ಲಿ ಯಾರನ್ನು ಕಣಕ್ಕಿಳಿಸಲಿದೆ ಎಂದು ಕಾದು ನೋಡಬೇಕಿದೆ. ವೇಗಿ ಮುಸ್ತಫಿಜುರ್ ರೆಹಮಾನ್ ಅವರು ಫಿಟ್‌ನೆಸ್ ಪರೀಕ್ಷೆ ಕೂಡ ಇಲ್ಲಿ ಆಗಬಹುದು.

ನ್ಯೂಯಾರ್ಕ್‌ಗೆ ಬಂದ ಕೊಹ್ಲಿ 

ನ್ಯೂಯಾರ್ಕ್: ಭಾರತ ತಂಡದ ‘ಬ್ಯಾಟಿಂಗ್ ತಾರೆ‘ ವಿರಾಟ್ ಕೊಹ್ಲಿ ಶುಕ್ರವಾರ ಇಲ್ಲಿಗೆ ಬಂದಿಳಿದರು.  ಶನಿವಾರ ಅಭ್ಯಾಸ ಪಂದ್ಯದಲ್ಲಿ ಅವರು ಆಡುವ ಸಾಧ್ಯತೆ ಇದೆ. 

‘ವಿರಾಟ್ ಕೊಹ್ಲಿ ಅವರು ತಂಡದ ಹೋಟೆಲ್‌ಗೆ ಆಗಮಿಸಿ ದ್ದಾರೆ. ದೀರ್ಘ ಪ್ರಯಾಣ ದಿಂದ ಬಳಲಿರುವ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಅವರು 16 ಗಂಟೆಗಳ ಪ್ರಯಾಣ ಮಾಡಿ ಇಲ್ಲಿಗೆ ತಲುಪಿದ್ದಾರೆ. ನಾಲ್ಕು ದಿನಗಳ ಹಿಂದೆ ಇಲ್ಲಿಗೆ ಭಾರತ ತಂಡದ ಮೊದಲ ಬ್ಯಾಚ್ ಬಂದಿತ್ತು. 

ಕೊಹ್ಲಿ ಐಪಿಎಲ್‌ನಲ್ಲಿ 15 ಪಂದ್ಯಗಳಿಂದ 741 ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.