ADVERTISEMENT

ಮೈಕ್ರೊಸಾಫ್ಟ್: ಹೊಸ ನಿರೀಕ್ಷೆಗಳ ಬೆನ್ನತ್ತಿ...

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 19:30 IST
Last Updated 17 ಜನವರಿ 2012, 19:30 IST

ಯಾವುದೇ ಉತ್ಪನ್ನ ಇರಬಹುದು ಪ್ರತಿಬಾರಿಯೂ ಮೈಕ್ರೊಸಾಫ್ಟ್ ತನ್ನ ಹಳೆಯ ಆವೃತ್ತಿಯನ್ನೇ ಇನ್ನಷ್ಟು ಪರಿಷ್ಕೃತಗೊಳಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ಅದಕ್ಕೇ ಸ್ಟೀವ್ ಜಾಬ್ಸ್ ಒಮ್ಮೆ `ಮೈಕ್ರೋಸಾಫ್ಟ್ ಹೊಸತನದ ಕೊರತೆ ಎದುರಿಸುತ್ತಿರುವ ಹಳೆಯ ಕಂಪೆನಿ~ ಎಂದು ಟೀಕೆ ಮಾಡಿದ್ದರು. ವಿಂಡೋಸ್ ಕಾರ್ಯನಿರ್ವಹಣಾ ತಂತ್ರಾಂಶವನ್ನೇ ತೆಗೆದುಕೊಳ್ಳಿ. ಇದುವರೆಗೆ ಬಿಡುಗಡೆಯಾಗಿರುವ ವಿಂಡೋಸ್ 1ರಿಂದ 7ರ ವರೆಗಿನ ಎಲ್ಲ ಕಾರ್ಯನಿರ್ವಹಣಾ ತಂತ್ರಾಂಶಗಳೂ ಹಿಂದಿನದರ ಪರಿಷ್ಕೃತ ಆವೃತ್ತಿಗಳು.

ವಿಂಡೋಸ್6ರಲ್ಲಿ ಇದ್ದ  ಶೇ 80ರಷ್ಟು ನ್ಯೂನತೆಗಳು ವಿಂಡೋಸ್ 7 ರಲ್ಲಿ ಬಗೆಹರಿದಿರುತ್ತವೆ. `ಪರಿಪೂರ್ಣ~ ಉತ್ಪನ್ನದ ಕಡೆಗೆ ಕಂಪೆನಿ ಮೊದಲಿನಿಂದಲೂ ಆಸಕ್ತಿ ವಹಿಸಿದಂತೆ ಕಾಣುತ್ತಿಲ್ಲ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಪ್ರತಿ ಹೊಸ ಉತ್ಪನ್ನ ಬಿಡುಗಡೆಯಾದಾಗಲೂ ಬಿಲ್‌ಗೇಟ್ಸ್ ಇದು ಇದು ಇನ್ನಷ್ಟು ಪರಿಪೂರ್ಣಗೊಳ್ಳಬೇಕಿದೆ ಎನ್ನುತ್ತಿದ್ದರೆ ಹೊರತು, ಪರಿಪೂರ್ಣ ಉತ್ಪನ್ನವೊಂದನ್ನು ಗ್ರಾಹಕರಿಗೆ  ನೀಡುವ ಕುರಿತು ಚಿಂತಿಸುತ್ತಿರಲಿಲ್ಲ ಎನ್ನುತ್ತಾರೆ ಅನೇಕ ತಜ್ಞರು.

ಬಿಲ್‌ಗೇಟ್ಸ್ ನಂತರ ಮೈಕ್ರೊಸಾಫ್ಟ್ ಚುಕ್ಕಾಣಿ ಹಿಡಿದ ಕ್ಲೌಡ್ ಕಂಪ್ಯೂಟಿಂಗ್ ತಜ್ಞ ಸ್ಟೀವ್ ಬಲ್ಮರ್ ಇಂಟರ್‌ನೆಟ್ ಉದ್ಯಮದಲ್ಲಿ ಕಂಪೆನಿಗೆ ಹೊಸ ಸಾಧ್ಯತೆಗಳನ್ನು ಗುರುತಿಸಿದರೂ, ಮಾರುಕಟ್ಟೆ ವಿಸ್ತರಣೆಯಲ್ಲಿ ಹಿಂದೆ ಬಿದ್ದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕಳೆದ ಒಂದು ದಶಕದಲ್ಲಿ ಸುಮಾರು 8 ಬಾರಿ ಮೈಕ್ರೊಸಾಫ್ಟ್ ಮ್ಯೂಸಿಕ್ ಉದ್ಯಮ ಪ್ರವೇಶಿಸಲು ಪ್ರಯತ್ನಿಸಿದೆ. ಆದರೆ, ಇನ್ನೂ ಫಲಕಾರಿಯಾಗಿಲ್ಲ. ಪ್ರತಿ ಬಾರಿಯೂ ಒಂದಿಲ್ಲೊಂದು ಕಾರಣಕ್ಕೆ ಈ ಯೋಜನೆ ವಿಫಲಗೊಳ್ಳುತ್ತಿದೆ. ಆದರೆ, ಇದೇ ಉದ್ಯಮದಲ್ಲಿ ಆ್ಯಪಲ್ ಲಾಭ ಕೊಳ್ಳೆ ಹೊಡೆಯುತ್ತಿದೆ.

ಮೈಕ್ರೊಸಾಫ್ಟ್ ಶೋಧ ತಾಣ `ಬಿಂಗ್~ ಅನ್ನೇ ತೆಗೆದುಕೊಳ್ಳಿ. ಹಿಂದೆಂದಿಗಿಂತಲೂ ಈಗ ಹೆಚ್ಚು ಸುಧಾರಿಸಿದೆ. ಆದರೆ, ಅನೇಕರಿಗೆ ಬಿಂಗ್ ಎನ್ನುವ ಒಂದು ಸರ್ಚ್ ಎಂಜಿನ್ ಇದೆ ಎನ್ನುವುದೇ ತಿಳಿದಿಲ್ಲ. `ವಿಂಡೋಸ್~ ಮತ್ತು `ಆಫೀಸ್~ ಮೈಕ್ರೊಸಾಫ್ಟ್‌ನ ಎರಡು ಪ್ರಮುಖ ಉತ್ಪನ್ನಗಳು. ಜಾಗತಿಕ ಕಂಪ್ಯೂಟಿಂಗ್‌ಗೆ ಮಾದರಿಗಳಾಗಿಬೇಕಿದ್ದ ಇವು ಗ್ರಾಹಕ  ಆಸಕ್ತಿಯನ್ನೇ ಕಳೆದುಕೊಂಡಿವೆ.

ಆದರೆ, 2012ರಲ್ಲಿ ಇತಿಹಾಸ ಪುನರಾವರ್ತನೆ ಆಗಲಿದೆ ಎನ್ನುವ ನಂಬಿಕೆಯಲ್ಲಿ ಮೈಕ್ರೊಸಾಫ್ಟ್ ಇದೆ. ಈಗಾಗಲೇ ಕಂಪೆನಿ  ಡೆಸ್ಕ್‌ಟಾಪ್ ಕಂಪ್ಯೂಟಿಂಗ್‌ನಲ್ಲಿ ಆಧಿಪತ್ಯ ಹೊಂದಿದೆ. ಇಡೀ ವೆಬ್ ಮಾರುಕಟ್ಟೆಯ ಮುಂಬಾಗಿಲನ ಮೇಲೆ ನಿಯಂತ್ರಣ ಹೊಂದಿದೆ.

ಮೊಬೈಲ್ ಕಂಪ್ಯೂಟಿಂಗ್ ಉದ್ಯಮದಲ್ಲಿ ಗೂಗಲ್, ಅಮೇಜಾನ್, ಆ್ಯಪಲ್‌ಗಳನ್ನು ಹಿಂದಿಕ್ಕುವ ಯೋಜನೆ ರೂಪಿಸಿದೆ.  ಕಂಪೆನಿಯ ಹೊಸ ಮೊಬೈಲ್ ಕಾರ್ಯನಿರ್ವಹಣಾ ತಂತ್ರಾಂಶ `ವಿಂಡೋಸ್ 7~  ಇಡೀ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ. ನೋಕಿಯಾ ಕಂಪೆನಿ ಈ ಕಾರ್ಯನಿರ್ವಹಣಾ ತಂತ್ರಾಂಶ ಒಳಗೊಂಡ ಹೊಸ ಸ್ಮಾರ್ಟ್‌ಫೋನ್ `ಲುಮಿಯಾ 900~ ಅನ್ನು ಇತ್ತೀಚೆಗೆ ಲಾಸ್‌ವೆಗಾಸ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಎಲೆಕ್ಟ್ರಾನಿಕ್ ಮೇಳದಲ್ಲಿ ಪರಿಚಯಿಸಿದೆ.

ಇದು, ಇದುವರೆಗಿನ ಅತ್ಯಂತ ಸುಂದರ ಮತ್ತು ಸಮರ್ಥ ವಿಂಡೋಸ್ ಫೋನ್ ಎನ್ನುವ ವಿಶ್ಲೇಷಣೆಗೂ ಪಾತ್ರವಾಗಿದೆ. ಇದರ ಜತೆಗೆ ಕಂಪ್ಯೂಟರ್ ಕಾರ್ಯನಿರ್ವಹಣಾ `ವಿಂಡೋಸ್ 8~ ಈ ವರ್ಷದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.  ಇದು ಮೊಬೈಲ್ ಸ್ನೇಹಿ ಸ್ಪರ್ಶ ಸಂವೇದಿ ತಂತ್ರಜ್ಞಾನ ಹೊಂದಿದ್ದು, ಆ್ಯಪಲ್ ಐಪಾಡ್‌ಗೆ ತೀವ್ರ ಪೈಪೋಟಿ ನೀಡುವ ನಿರೀಕ್ಷೆಯೂ ಇದೆ.

ಇದರ ಜತೆಗೆ ಮೈಕ್ರೊಸಾಫ್ಟ್ `ಎಕ್ಸ್ ಬಾಕ್ಸ್~ ಅನ್ನು ಇನ್ನಷ್ಟು ಸುಧಾರಣೆಗೊಳಿಸಿದೆ. ಈಗ ಇದು ಬರೀ ಗೇಮ್ಸಗಳಿಗೆ ಮಾತ್ರ ಸೀಮಿತವಲ್ಲ. ನೂರಾರು ಮನೋರಂಜನೆ ಅಪ್ಲಿಕೇಷನ್ಸ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.

`ಶೀಘ್ರದಲ್ಲಿಯೇ ಮೈಕ್ರೊಸಾಫ್ಟ್ ಸಾವಿರಾರು ಜನರ ಮನಗಳಿಗೆ, ಮನೆಗಳಿಗೆ, ಕಚೇರಿಗಳಿಗೆ ಮರು ಪ್ರವೇಶ ಪಡೆಯಲಿದೆ~ ಎನ್ನುತ್ತಾರೆ ಬಲ್ಮರ್.

ಮೊಬೈಲ್ ಕಂಪ್ಯೂಟಿಂಗ್ ಉದ್ಯಮದಲ್ಲಿ ಆ್ಯಪಲ್ ಮತ್ತು ಗೂಗಲ್ ಮೈಕ್ರೊಸಾಫ್ಟ್‌ಗಿಂತ ಸಾವಿರಾರು ಮೈಲಿಗಳಷ್ಟು ಮುಂದಿದೆ. 2007ರಲ್ಲಿ ಐಫೋನ್ ಮಾರುಕಟ್ಟೆಗೆ ಬಿಡುಗಡೆಗೊಂಡ ಹಾಗೆ, ಮೈಕ್ರೋಸಾಫ್ಟ್ ಕೂಡ ಹೊಸ ಟ್ಯಾಬ್ಲೆಟ್ ಅಥವಾ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಮೂಲಕ ಈ ಏಕಸ್ವಾಮ್ಯ ಮುರಿಯಬಹುದು ಎನ್ನುತ್ತಾರೆ ಸ್ಮಾರ್ಟ್‌ಫೋನ್ ಅಪ್ಲಿಕೇಷನ್ ತಜ್ಞ  ಎಂ.ಜಿ ಸೈಗ್ಲರ್. 

ಆದರೆ, ಮೈಕ್ರೊಸಾಫ್ಟ್‌ನ ಗ್ಯಾಡ್ಜೆಟ್‌ಗಳು ಇತರ ಸ್ಪರ್ಧಿಗಳಿಗಿಂತಲೂ ಹತ್ತು ಪಟ್ಟು ಉತ್ತಮವಾಗಿರಬೇಕು. ಇಲ್ಲ    ದಿದ್ದರೆ ಯಾವುದೇ ಕಂಪೆನಿ ಹೊಸ ಅಪ್ಲಿಕೇಷನ್ ಅಭಿವೃದ್ಧಿಪಡಿಸಲು ಮುಂದೆ ಬರುವುದಿಲ್ಲ. ಕಡಿಮೆ ಅಪ್ಲಿಕೇಷನ್ ಇರುವ ಉತ್ಪನ್ನಗಳನ್ನು ಗ್ರಾಹಕರು ಖರೀದಿಸುವುದಿಲ್ಲ ಎನ್ನುತ್ತಾರೆ ಅವರು.

ಸದ್ಯ ವಿಂಡೋಸ್‌ನ 50ಸಾವಿರಕ್ಕೂ ಹೆಚ್ಚು ಅಪ್ಲಿಕೇಷನ್ಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ, ಆಂಡ್ರಾಯ್ಡ ಅಪ್ಲಿಕೇಷನ್ಸ್‌ಗಳ ಸಂಖ್ಯೆ ಇದರ ಎರಡು ಪಟ್ಟು ಹೆಚ್ಚಿದೆ. ಗ್ರಾಹಕರು ಮತ್ತು ಅಭಿವೃದ್ಧಿದಾರರಿಗೆ ಏಕಕಾಲದಲ್ಲಿ ಇಂಟರ್‌ನೆಟ್ ವೇದಿಕೆ ಒದಗಿಸುವುದರಿಂದ ಕಂಪೆನಿಗಳು ಏಕಕಾಲದಲ್ಲಿ ಉತ್ಪನ್ನ ಮತ್ತು ಅಪ್ಲಿಕೇಷನ್ ಕಡೆಗೆ ಗಮನ ಹರಿಸಬೇಕು. ಸದ್ಯ ಮಾರುಕಟ್ಟೆಯಲ್ಲಿ ಶೇ 50ರಷ್ಟು ಸ್ಮಾರ್ಟ್‌ಫೋನ್‌ಗಳಲ್ಲಿ ಆಂಡ್ರಾಯ್ಡ ಇರುವುದರ ಹಿಂದಿನ ಗುಟ್ಟು ಇದು ಎನ್ನುತ್ತಾರೆ ಸೈಗ್ಲರ್.

ಮೈಕ್ರೋಸಾಫ್ಟ್ ಈಗಲೂ ಡೆಸ್ಕ್‌ಟಾಪ್ ಕಂಪ್ಯೂಟಿಂಗ್ ಅನ್ನೇ ನೆಚ್ಚಿಕೊಂಡಿದ್ದು, ಹೊಸ ಆವಿಷ್ಕಾರಗಳಿಗೆ ಹೆಚ್ಚಿನ ಹಣ ವ್ಯಯಿಸುತ್ತಿಲ್ಲ ಎಂಬ ಮಾತುಗಳಿವೆ. ಕಾಲಕ್ಕೆ ತಕ್ಕಂತೆ ಹೊಸ ಉತ್ಪನ್ನ ಮತ್ತು ಮಾರುಕಟ್ಟೆ ವಿಸ್ತರಣೆಗೆ ಮುಂದಾಗದಿದ್ದರೆ ಸ್ಪರ್ಧೆಯಲ್ಲಿ ಹಿಂದುಳಿಯಬೇಕಾಗುತ್ತದೆ.

1990ರಲ್ಲಿ ಸ್ಟೀವ್ ಜಾಬ್ಸ್ ಆ್ಯಪಲ್‌ಗೆ ಮರಳಿದಾಗ ಮಾಡಿದ ಮೊದಲ ಕೆಲಸವೆಂದರೆ ಆ್ಯಪಲ್‌ನ ಕಾರ್ಯನಿರ್ವಹಣಾ ತಂತ್ರಾಂಶವನ್ನು ಇನ್ನಷ್ಟು ಅಭಿವೃದ್ಧಿಪಡಿಸಿದ್ದು ಮತ್ತು ಮೊಬೈಲ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು. ಅಪ್ಲಿಕೇಷನ್ಸ್‌ಗಳಿಗಾಗಿ ಆ್ಯಪಲ್ ಡಿಜಿಟಲ್ ಸ್ಟೋರ್‌ಗಳನ್ನು ತೆರೆದದ್ದು. ಆಗ ಎಲ್ಲರಿಗೂ ಅದೊಂದು ಹುಚ್ಚುತನ ಎನಿಸಿತ್ತು. ಇಂದು ಬೆಳೆದು ನಿಂತಿರುವ ಆ್ಯಪಲ್‌ನ ಹಿಂದಿನ ಗುಟ್ಟೇ ಜಾಬ್ಸ್‌ನ ಈ ದೂರದೃಷ್ಟಿ.

ಡೆಸ್ಕ್‌ಟಾಪ್ ಕಂಪ್ಯೂಟಿಂಗ್‌ನಿಂದ ಬರುವ ಮೂಲ ವರಮಾನಕ್ಕೆ ಪೆಟ್ಟು ಬೀಳದ ಹಾಗೆ ನೋಡಿಕೊಳ್ಳುತ್ತಾ, ಹೊಸದಾಗಿ ಮೊಬೈಲ್ ಮಾರುಕಟ್ಟೆಗೆ ಲಗ್ಗೆ ಇಡುವ ಕುರಿತು ಬಲ್ಮರ್ ಚಿಂತಿಸುತ್ತಿದ್ದಾರೆ. ಮತ್ತೊಮ್ಮೆ ನಿಧಾನವಾಗಿ ಮೈಕ್ರೊಸಾಫ್ಟ್ ಮಾರುಕಟ್ಟೆಗೆ ಮರು  ಪ್ರವೇಶಿಸುತ್ತಿದೆ. 2012ರ ಹೊಸ ನಿರೀಕ್ಷೆಗಳೊಂದಿಗೆ... 
- ವಿವಿಧ ಮೂಲಗಳಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.