ಮೊಬೈಲ್‌ಗಳಿಗೆ ಕಾಸ್‌ಪ್ರಸ್ಕಿ ಸುರಕ್ಷೆ
ಮೊಬೈಲ್ ಸುರಕ್ಷತಾ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸುವ ರಷ್ಯಾ ಮೂಲದ ‘ಕಾಸ್‌ಪ್ರಸ್ಕಿ’ ಕಂಪೆನಿ ಹೊಸ ಮೊಬೈಲ್ ಸುರಕ್ಷತಾ ತಂತ್ರಾಂಶವನ್ನು ಬಿಡುಗಡೆ ಮಾಡಿದೆ. ಈ ತಂತ್ರಾಂಶವನ್ನು ಸ್ಮಾರ್ಟ್‌ಫೋನ್ ಮತ್ತು ‘ಜಿಪಿಆರ್‌ಎಸ್’ ಸೌಲಭ್ಯದ ಹ್ಯಾಂಡ್‌ಸೆಟ್‌ಗಳಲ್ಲಿ ಬಳಸಬಹುದಾಗಿದ್ದು, ದತ್ತಾಂಶ ಸುರಕ್ಷತೆ, ವೈರಸ್ ದಾಳಿ ತಡೆ ಮುಂತಾದ ಸೌಲಭ್ಯಗಳನ್ನು ಹೊಂದಿದೆ.
ಸ್ಮಾರ್ಟ್‌ಫೋನ್ ಮಾರುಕಟ್ಟೆ ತೀವ್ರವಾಗಿ ಬೆಳೆಯುತ್ತಿದೆ. ಮೊಬೈಲ್ ಕಂಪ್ಯೂಟಿಂಗ್ ಜನಪ್ರಿಯತೆ ಹೆಚ್ಚುತ್ತಿರುವಂತೆ ಮಾಲ್‌ವೇರ್ ಮತ್ತು ವೈರಸ್ ದಾಳಿಯೂ ಹೆಚ್ಚುತ್ತಿದೆ. ಬಳಕೆದಾರರು ಮೊಬೈಲ್‌ನಲ್ಲಿ ಸಂರಕ್ಷಿಸಿ ಇಟ್ಟುಕೊಂಡಿರುವ ದತ್ತಾಂಶಗಳು ನಾಶವಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ದತ್ತಾಂಶ ಸುರಕ್ಷತೆಗಾಗಿ ‘ಕಾಸ್‌ಪ್ರಸ್ಕಿ-9’ ತಂತ್ರಾಂಶ ಬಿಡುಗಡೆ ಮಾಡುತ್ತಿದ್ದೇವೆ ಎಂದು ಕಂಪೆನಿ ಹೇಳಿದೆ. ದೇಶೀಯ ಮಾರುಕಟ್ಟೆಯಲ್ಲಿ ಈ ತಂತ್ರಾಂಶದ ಬೆಲೆ ್ಙ 599 ಎಂದು ಕಂಪೆನಿ ಹೇಳಿದೆ.
‘ಕಾಸ್‌ಪ್ರಸ್ಕಿ-9’ ದತ್ತಾಂಶ ಸುರಕ್ಷತೆ ಖಾತರಿ ನೀಡುತ್ತದೆ. ಸ್ಮಾರ್ಟ್ ಫೋನ್‌ಮಾರುಕಟ್ಟೆಯಲ್ಲಿ ಈ ತಂತ್ರಾಂಶಕ್ಕೆ ವಿಪುಲ ಬೇಡಿಕೆ ಇದ್ದು, ಈ ವರ್ಷಾಂತ್ಯಕ್ಕೆ ಒಂದು ಲಕ್ಷ ಘಟಕಗಳನ್ನು ಮಾರುವ ಯೋಜನೆ ಹೊಂದಿದ್ದೇವೆ ಎನ್ನುತ್ತಾರೆ ಕಂಪೆನಿಯ ಏಷ್ಯಾ-ಫೆಸಿಫಿಕ್ ವಲಯದ ಕಾರ್ಪೊರೇಟ್ ವ್ಯವಹಾರಗಳ ಮುಖ್ಯಸ್ಥೆ ಸೂಕ್‌ಲಿಂಗ್ ಗುನ್.
‘ಕಾಸ್‌ಪ್ರಸ್ಕಿ-9’ ಅನ್ನು ಸಿಂಬಿಯನ್, ಆಂಡ್ರಾಯ್ಡಾ ಮತ್ತು ಜಾವಾ ಕಾರ್ಯನಿರ್ವಹಣಾ ತಂತ್ರಾಂಶ ಹೊಂದಿರುವ ಮೊಬೈಲ್‌ಗಳಲ್ಲಿ ಬಳಸಬಹುದು. ಆದರೆ, ಆ್ಯಪಲ್ ಉಪಕರಣಗಳಲ್ಲಿ ಮಾತ್ರ ಇದು ಸದ್ಯ ತೆರೆದುಕೊಳ್ಳುವುದಿಲ್ಲ. ಐಪೋನ್‌ನಲ್ಲಿ ಈ ತಂತ್ರಾಂಶ ಬಳಕೆಯ ಕುರಿತು ‘ಆ್ಯಪಲ್’ ಜತೆ ಮಾತುಕತೆ ನಡೆಸುತ್ತಿದ್ದೇವೆ ಎನ್ನತ್ತಾರೆ ಗುನ್.
ಸದ್ಯ ಮೊಬೈಲ್ ಸುರಕ್ಷತಾ ತಂತ್ರಾಂಶಗಳ ಮಾರುಕಟ್ಟೆ ರೂ 1,400 ಕೋಟಿಯಷ್ಟಿದ್ದು, ಇದು ವಾರ್ಷಿಕ ಶೇ 25ರಷ್ಟು ವೃದ್ಧಿಯಾಗುತ್ತಿದೆ.
ಮೊಬೈಲ್ ಮಾರುಕಟ್ಟೆ ಪ್ರಗತಿ
ಜಾಗತಿಕ ಮೊಬೈಲ್ ಮಾರುಕಟ್ಟೆ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇ 19.8ರಷ್ಟು ವೃದ್ಧಿ ಕಾಣುವುದಾಗಿ ಇಂಟರ್‌ನ್ಯಾಷನಲ್ ಡೇಟಾ ಕಾರ್ಪೊರೇಷನ್ (ಐಡಿಸಿ) ಸಮೀಕ್ಷೆ ತಿಳಿಸಿದೆ.
ಭಾರತ ಚೀನಾ ಸೇರಿದಂತೆ ಏಷ್ಯಾ ವಲಯದಲ್ಲಿ ಮೊಬೈಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿದ್ದು, ಮೊಬೈಲ್ ತಯಾರಿಕಾ ಕಂಪೆನಿಗಳು ಮತ್ತು ಮಾರಾಟಗಾರರ ಸಂಖ್ಯೆ 371.8 ಶತಕೊಟಿಗಳಿಗೆ ಏರಲಿದೆ ಎಂದಿದೆ ಈ ವರದಿ.
ಜಪಾನನ್ನು ಹೊರತುಪಡಿಸಿದರೆ ಏಷ್ಯಾ-ಫೆಸಿಫಿಕ್ ವಲಯದಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆ ತೀವ್ರವಾಗಿ ಹೆಚ್ಚುತ್ತಿದೆ. ಮಧ್ಯಪ್ರಾಚ್ಯ ಮತ್ತು ಲ್ಯಾಟಿನ್ ಅಮೆರಿಕ ಭಾಗಗಳಲ್ಲೂ ಹೊಸ ಮಾರುಕಟ್ಟೆ ಅವಕಾಶಗಳು ಸೃಷ್ಟಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ 2011ನೇ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ಜಾಗತಿಕ ಮೊಬೈಲ್ ಮಾರುಕಟ್ಟೆ ದಾಖಲೆಯ ಪ್ರಗತಿಯನ್ನು ಕಾಣಲಿದೆ ಎಂದು ‘ಐಡಿಸಿ’ ಹೇಳಿದೆ.
ಮೊಬೈಲ್ ತಯಾರಿಕಾ ಕಂಪೆನಿಗಳು ಎಲ್ಲ ವರ್ಗದ ಜನರಿಗೆ ಸುಲಭವಾಗಿ ಕೈಗೆಟುಕುವ ದರದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಏಷ್ಯಾ-ಫೆಸಿಪಿಕ್ ವಲಯದಲ್ಲಿ ‘ಎಚ್‌ಟಿಸಿ’ ಕಂಪೆನಿ ಮುಂಚೂಣಿಯಲ್ಲಿದ್ದರೂ, ಹಲವು ಹೊಸ ಕಂಪೆನಿಗಳು ಹೊಸ ಮಾರುಕಟ್ಟೆ ಅವಕಾಶಗಳನ್ನು ಬಳಸಿಕೊಳ್ಳಲು ಮುಂದಾಗುತ್ತಿವೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೈಕ್ರೋಮ್ಯಾಕ್ಸ್, ಟಿಸಿಎಲ್-ಆಲ್ಕಾಟೆಲ್, ಹುವೈ, ರಿಮ್ ಕಂಪೆನಿಗಳ ಮಾರುಕಟ್ಟೆ ಗಣನೀಯ ಪ್ರಗತಿ ಕಂಡಿದ್ದು, ಹೊಸ ಹೊಸ ತಂತ್ರಜ್ಞಾನ ಸೌಲಭ್ಯಗಳಿರುವ ಹ್ಯಾಂಡ್‌ಸೆಟ್‌ಗಳು ಮಾರುಕಟ್ಟೆಗೆ ಬಿಡುಗಡೆಗೊಂಡಿವೆ.
ಸ್ಮಾರ್ಟ್‌ಫೋನ್‌ಗಳ ಒತ್ತಡವನ್ನು ತಾಳಲಾರದೆ, ಸಾಂಪ್ರದಾಯಿಕ ಮತ್ತು ಕಿವರ್ಟಿ ಫೋನ್‌ಗಳಿಂದ ಹೊಸ ಟಚ್‌ಸ್ಕ್ರೀನ್ ಮೊಬೈಲ್‌ಗಳಿಗೆ ಪಲ್ಲಟವಾಗುತ್ತಿರುವವರ ಸಂಖ್ಯೆಯೂ ದುಪ್ಪಟ್ಟು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಕಂಪೆನಿಗಳು ಹೊಸ ಸ್ಮಾರ್ಟ್‌ಫೋನ್‌ಮಾರುಕಟ್ಟೆ ಅವಕಾಶಗಳ ಕುರಿತು ಗಮನಹರಿಸುತ್ತಿದ್ದಾರೆ ಎಂದು ‘ಐಡಿಸಿ’ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.