ADVERTISEMENT

Computer Programming: ನಲಿಯುತ ಕಲಿಯುವ ಕಂಪ್ಯೂಟರ್ ಪ್ರೊಗ್ರಾಮಿಂಗ್‌

ರವಿಚಂದ್ರ ಎಂ.
Published 23 ಮಾರ್ಚ್ 2025, 23:35 IST
Last Updated 23 ಮಾರ್ಚ್ 2025, 23:35 IST
<div class="paragraphs"><p> ನಲಿಯುತ ಕಲಿಯುವ ಕಂಪ್ಯೂಟರ್ ಪ್ರೊಗ್ರಾಮಿಂಗ್‌</p></div>

ನಲಿಯುತ ಕಲಿಯುವ ಕಂಪ್ಯೂಟರ್ ಪ್ರೊಗ್ರಾಮಿಂಗ್‌

   

ಏಳನೇ ತರಗತಿಯ ಕೊನೆಯ ಪರೀಕ್ಷೆ ಮುಗಿಯಿತು. ಗಣಿತ ಪರೀಕ್ಷೆ ಬರೆದು ಮುಗಿಸಿದ ಖುಷಿಗೋ, ಬೇಸಿಗೆಯ ರಜೆಗಳಲ್ಲಿ ಅಡಗಿರುವ ಮಜಾವನ್ನು ನೆನೆದೋ ಪರೀಕ್ಷಾ ಕೊಠಡಿಯಿಂದ ಹೊರಬರುತ್ತಿದ್ದಂತೆ ಅಮರ್‌ ಮತ್ತು ಅನನ್ಯರ ಮುಖಗಳಲ್ಲಿ ಖುಷಿಯ ಸಂಭ್ರಮ ಕಾಣಿಸಿತು. ಪರೀಕ್ಷೆಯ ಕಾರಣಕ್ಕಾಗಿ ಕಳೆದ ಇಪ್ಪತ್ತು ದಿನಗಳಿಂದ ಮೊಬೈಲ್‌ ಫೋನ್‌ ಬಳಸಲು ನಿರ್ಬಂಧವಿದ್ದರಿಂದ ಸೀದಾ ತಮ್ಮ ಅಮ್ಮಂದಿರ ಕೈಚೀಲದಲ್ಲಿ ಅಡಗಿ ಕುಳಿತಿದ್ದ ಫೋನ್‌ ಅನ್ನು ಕಸಿದುಕೊಂಡು ನೇರವಾಗಿ ಶಾಲಾ ಆವರಣದಲ್ಲಿ ತಂಪಗೆ ನೆರಳು ಕೊಡುತ್ತಿದ್ದ ಹೊಂಗೆ ಮರಗಳ ಅಡಿ ಇರುವ ಕಲ್ಲು ಬೆಂಚುಗಳತ್ತ ಓಡಿದರು.

ಆ ಕ್ಷಣಕ್ಕೆ ಅಮರ್‌ಗೆ ತಮ್ಮ ಕಂಪ್ಯೂಟರ್‌ ಶಿಕ್ಷಕಿ ಮಾರ್ಗರೇಟ್‌ ಹೇಳಿದ್ದ ‘ಈ ಸಲದ ರಜೆಯಲ್ಲಿ ಕಂಪ್ಯೂಟರ್‌ ಗೇಮ್‌ ಆಡಿ. ಅದೇ ನಿಮಗೆ ಹೋಂವರ್ಕ್‌’ ಎಂಬ ಮಾತೊಂದು ನೆನಪಾಯಿತು. ತಮ್ಮ ಟೀಚರ್‌ ಪಟ್ಟಿ ಮಾಡಿ ಕೊಟ್ಟಿದ್ದ ಆ್ಯಪ್‌ಗಳಲ್ಲಿ ‘CodeCombat’ ಇದನ್ನು ಗೂಗಲ್ ಆ್ಯಪ್‌ ಸ್ಟೋರ್‌ನಿಂದ ಲಗುಬಗನೇ ಡೌನ್‌ಲೋಡ್‌ ಮಾಡಿದ. ‘ಈ ಗೇಮ್‌ನಲ್ಲಿ ಏನಿರಬಹುದು?’ ನೋಡೋಣ ಇರು ಎಂದು ಅನನ್ಯಳಿಗೂ ಹೇಳಿದ. ಇಬ್ಬರ ದೃಷ್ಟಿ ಫೋನ್‌ನ ಸ್ಕ್ರೀನ್‌ ಮೇಲೆ ಇತ್ತು.

ADVERTISEMENT

ಅಮರ್ ದೊಡ್ಡ ದೊಡ್ಡ ಗುಹೆಗಳ ಪ್ರವೇಶ ದ್ವಾರದ ಮೂಲಕ ಒಳ ಹೋಗಲು ತನ್ನ ಟೀಚರ್ ಕಲಿಸಿಕೊಟ್ಟಿದ್ದ (Python) ಪೈಥಾನ್ ಪ್ರೊಗ್ರಾಮ್‌ನ ಕೋಡ್/ಸೂಚನೆಗಳನ್ನು ನಮೂದಿಸುತ್ತ ಒಂದೊಂದೇ ಗುಹೆಯ ಬಾಗಿಲು ತೆರಯುತ್ತ ಹೋದ. ಅವನ ಕುತೂಹಲ ಗೇಮ್‌ ಗೆಲ್ಲುವುದಾದರೂ, ಆಟ ಒಂದು ಹಂತ ತಲುಪುವ ಹೊತ್ತಿಗೆ ಪೈಥಾನ್ ಪ್ರೊಗ್ರಾಮಿಂಗ್‌ನಲ್ಲಿ ಆಸಕ್ತಿ ತಳೆದ. ಅಮರ್‌ ಆಡುತ್ತಿದ್ದಂತೆ ಅನನ್ಯಳಿಗೂ ಕುತೂಹಲ ತಡೆಯಲಾಗಲಿಲ್ಲ. ಅವಳು ತನ್ನ ಅಮ್ಮನ ಫೋನ್‌ನಲ್ಲಿ ‘Grasshopper’ ಎಂಬ ಆ್ಯಪ್‌ ಡೌನ್‌ಲೋಡ್‌ ಮಾಡಿದಳು. ಅನೇಕ ಪಜಲ್‌ಗಳು (Puzzles) ಆಕೆಯ ಫೋನ್ ಪರದೆ ಮೇಲೆ ಮೂಡಿದವು. ಒಂದು ಆಟವಂತೂ ಅವಳ ಮನಸೂರೆ ಮಾಡಿತು. ಅದು ಲೆಗೋ-ಬ್ರಿಕ್ಸ್ (Lego-Bricks) ಜೋಡಿಸುವ ಆಟ. ಆದರೆ, ಅದರಲ್ಲಿನ ವಿಶೇಷತೆ ಒಂದೊಂದು ಇಟ್ಟಿಗೆಯು ಜಾವಾಸ್ಕ್ರಿಪ್ಟ್ (JavaScript)ಪ್ರೊಗ್ರಾಮ್‌ನ ಭಾಗವಾಗಿತ್ತು. ಅದನ್ನು ಆಡುತಾ ಆಡುತಾ ಅನನ್ಯ ತನಗೆ ಅರಿವಿಲ್ಲದಂತೆ ಜಾವಾ ಸ್ಕ್ರಿಪ್ಟ್‌ನಲ್ಲಿ ಆಸಕ್ತಿ ಸಾಧಿಸತೊಡಗಿದಳು. ಇನ್ನು ಇವರನ್ನು ಜತೆಗೂಡಿದ ಸಾದಿಕ್‌, ತನ್ನ ಫೋನ್‌ನಲ್ಲಿ ‘Google Cloud Skills Boost Arcade’ ಎಂಬ ಆ್ಯಪ್‌ ಡೌನ್‌ಲೋಡ್‌ ಮಾಡಿ ಅದರಲ್ಲಿ ಏನಿದೆ ಎಂದು ಕುತೂಹಲಗೊಂಡ. ಪುಟ್ಟ ಪುಟ್ಟ ಆಟಗಳ ಮೂಲಕ ವರ್ಚುವಲ್ ಮಷೀನ್ ಎಂದರೆ ಏನು, ಡೇಟಾ ಸ್ಟೋರೇಜ್‌ನ ರೂಪುರೇಷೆಗಳ ಬಗ್ಗೆ ಕಲಿಯುತ್ತ ಕ್ಲೌಡ್ ಕಂಪ್ಯೂಟಿಂಗ್ ಲೋಕವನ್ನೇ ಸೃಷ್ಟಿಸತೊಡಗಿದ.

ಎಲ್ಲರೂ ಜತೆಗೂಡಿ ಏನು ಮಾಡುತ್ತಿರುವರು? ಎಂದು ದೂರದಿಂದಲೇ ಕುತೂಹಲಗೊಂಡ ಗೌತಮ್‌ನಿಗೆ ಹೊಸ ವಿಚಾರಗಳನ್ನು ಅನ್ವೇಷಿಸುವ ತವಕ. ಆತ ಕೂಡಲೇ ಇವರ ಕಾರ್ಯದಿಂದ ಉತ್ಸಾಹಗೊಂಡು ‘Machine Learning for Kids’ ಎಂಬ ಆ್ಯಪ್‌ ಡೌನ್‌ಲೋಡ್‌ ಮಾಡಿದ. ನಾಯಿ, ಕುದುರೆ, ಒಂಟೆ, ಬೆಕ್ಕು ಇವುಗಳ ಚಿತ್ರ ಒದಗಿಸಿ, ತನ್ನ ಆ್ಯಪ್‌ ಅವುಗಳನ್ನು ಯಾವ ರೀತಿ ಗುರುತಿಸುತ್ತದೆ ಎಂಬುದನ್ನು ನೋಡಿ ತನ್ನ ಸಹಪಾಠಿಗಳಿಗೂ ತೋರಿಸಿದ.

ಜೀವವಿಜ್ಞಾನದಲ್ಲಿ ಕ್ಲಾಸಿಗೆ ಟಾಪರ್‌ ಎನಿಸಿಕೊಂಡಿದ್ದ ಆಸ್ಮಾ, ತನ್ನ ಫೋನ್‌ನಲ್ಲಿ ‘TensorFlow Playground’ ಎಂಬ ಆ್ಯಪ್‌ ಇರುವುದನ್ನು ತೋರಿಸಿದಳು. ಈ ಆ್ಯಪ್‌ ಕಂಪ್ಯೂಟರ್‌ನ ನ್ಯೂರಲ್‌ ನೆಟ್ವರ್ಕ್ಸ್ (Neural Networks) ಹೇಗೆ ಕಾರ್ಯನಿರ್ವಹಿಸುತ್ತೆ ಎಂಬುದರ ಚಿತ್ರಣವನ್ನು ಸೊಗಸಾಗಿ ಒದಗಿಸಿತ್ತು. ಇದೇ ಸಮಯಕ್ಕೆ ಬಂದ ಶಾಲೆಯ ಹಳೆಯ ವಿದ್ಯಾರ್ಥಿ ಬಸವ, ತಾನು ‘ಕ್ಲಾಡ್‌–ಅಟ್ಯಾಕ್‌’ ಆ್ಯಪ್‌ ಅನ್ನು ಸ್ನೇಹಿತರ ಜತೆಗೂಡಿ ರೂಪಿಸಿರುವ ಬಗ್ಗೆ ತಿಳಿಸಿದ. ಆಟದ ಮೂಲಕವೇ ಕ್ಲೌಡ್‌ ಬಗ್ಗೆ ಕಲಿಯಬಹುದು ಎಂದು ತಿಳಿಸಿದ. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳು Scratch Jr. ಎಂಬ ಆ್ಯಪ್‌ ಮೂಲಕ ಪ್ರೊಗ್ರಾಮಿಂಗ್ ಕಲಿಯಬಹುದು ಎಂಬ ಮಾಹಿತಿಯನ್ನೂ ಕೊಟ್ಟ. ಎಲ್ಲ ಸಹಪಾಠಿಗಳು ಒಬ್ಬರಿಗೊಬ್ಬರು ಮುಖ ನೋಡಿಕೊಂಡರು.

ಮೊಬೈಲ್‌ ಇರುವುದು ಬರೀ ರೀಲ್ಸ್‌, ಫೇಸ್‌ಬುಕ್‌, ಇನ್‌ಸ್ಟಾ ನೋಡಲು ಅಲ್ಲ. ಮನರಂಜನೆಯ ಜತೆಗೆ ಕಲಿಕೆಯನ್ನು ವ್ಯವಸ್ಥಿತವಾಗಿ ಮಾಡಲು ಸಾಧ್ಯ. ಅದಕ್ಕೆ ಸರಿಯಾದ ಅರಿವು ಇರಬೇಕು ಎಂಬ ನಿರ್ಧಾರಕ್ಕೆ ಬಂದರು. ಪರಸ್ಪರ ಮಾತನಾಡಿಕೊಂಡು, ರಜೆಯಲ್ಲಿ ಯಾವ ಪ್ರೊಗ್ರಾಮಿಂಗ್ ಕಲಿಯಬಹುದು ಎಂಬುದರ ಲೆಕ್ಕಚಾರ ಹಾಕತೊಡಗಿದರು.

ಆ್ಯಪ್‌ಗಳ ಹೆಸರು; ವೆಬ್‌ಲಿಂಕ್‌


CodeCombat: https://codecombat.com/


Grasshopper: https://grasshopper.com/apps/


Google Cloud Skills Boost Arcade‌: https://go.cloudskillsboost.google/arcade


Machine Learning for Kids: https://machinelearningforkids.co.uk/


TensorFlow Playground: https://playground.tensorflow.org/


Cloud-Attack: https://www.cloudattack.in/


Scratch Jr.: https://www.scratchjr.org/

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.