ಬೆಂಗಳೂರಿನ ಅರಮನೆ ಆವರಣದಲ್ಲಿ ಆಯೋಜನೆಗೊಂಡಿರುವ ಬೆಂಗಳೂರು ಟೆಕ್ ಸಮಿಟ್‌ನಲ್ಲಿನ ಸ್ಟಾರ್ಟ್‌ಅಪ್ ಮಳಿಗೆಯಲ್ಲಿ ಟೆಕ್‌ಟೈಲ್ ಕಾರ್ಯವಿಧಾನ ವಿವರಿಸಿದ ಯುಡಾಟ್‌ನ ಕೆ. ಲಲಿಕಾ ಲಯಾ
ಬೆಂಗಳೂರು: ಎದುರಿಗಿರುವ ವ್ಯಕ್ತಿಯ ಮಾತುಗಳ ಜತೆಗೆ, ಅವರ ಮುಖ ಚಹರೆಯ ಭಾವವನ್ನೂ ಅಂಧರಿಗೆ ತಿಳಿಸಬಲ್ಲ ಕನ್ನಡಕಗಳು ಹಾಗೂ ಅಂಧ ಮಕ್ಕಳ ಓದಿಗೆ ಚಿತ್ರ ಸಹಿತ ಮಾಹಿತಿ ನೀಡಲು ನೆರವಾಗುವ ಸಾಧನಗಳು ತಯಾರಾಗಿದ್ದು, ಕಣ್ಣು ಕಾಣದ ಸಮಸ್ಯೆ ಇರುವವರಿಗೆ ಹೊಸ ಬೆಳಕು ನೀಡಲಿವೆ.
ಬೆಂಗಳೂರು ಟೆಕ್ ಶೃಂಗದಲ್ಲಿ ಈ ಸಾಧನಗಳು ಗಮನ ಸೆಳೆಯುವಂತಿದ್ದವು.
ಚೆನ್ನೈನ ಐಐಟಿ ಮದ್ರಾಸ್‌ನ ವಿದ್ಯಾರ್ಥಿಗಳು ‘ಪ್ಯಾನಾಕುಲಾನ್ ಲ್ಯಾಬ್ಸ್’ ಎಂಬ ನವೋದ್ಯ ಮೂಲಕ ಪ್ಯಾನಾಕಲ್ ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ಸ್ಮಾರ್ಟ್ ಕನ್ನಡಕವನ್ನು ಅಂಧರಿಗಾಗಿ ಅಭಿವೃದ್ಧಿಪಡಿಸಿದ್ದಾರೆ. ಕ್ಯಾಮೆರಾ, ಇಯರ್‌ಪಾಡ್, ಇನ್‌ಫ್ರಾರೆಡ್ ರೇಡಿಯೇಷನ್, ಎಚ್ಚರಿಕೆ ನೀಡಬಲ್ಲ ವೈಬ್ರೇಷನ್ ಅನ್ನು ಇದು ಹೊಂದಿದೆ.
ಎದುರಿಗಿರುವ ವ್ಯಕ್ತಿಯ ಮುಖಭಾವನೆಗಳನ್ನು ಗ್ರಹಿಸಿ, ಕಿವಿಗೆ ಮಾಹಿತಿ ನೀಡುವ ಸ್ಮಾರ್ಟ್ ಗ್ಲಾಸ್ ಇದಾಗಿದೆ. ಇಷ್ಟೇ ಅಲ್ಲ, ಎದುರಿಗಿರುವ ವ್ಯಕ್ತಿಯು ನೀಡುವ ಮಾಹಿತಿಯನ್ನು ದಾಖಲಿಸಿ, ಅದನ್ನು ಅಕ್ಷರರೂಪದಲ್ಲಿ ದಾಖಲಿಸಿಕೊಳ್ಳುವ ಸಾಮರ್ಥ್ಯವೂ ಇದರಲ್ಲಿದೆ. ಒಮ್ಮೆ ಭೇಟಿ ನೀಡಿದ ವ್ಯಕ್ತಿ, ಮುಂದೆ ಎಂದಾದರೂ ಭೇಟಿಯಾದರೆ, ಅವರ ಪರಿಚಯ, ಹಿಂದೆ ಅವರೊಂದಿಗೆ ನಡೆಸಿದ ಸಂಭಾಷಣೆಯ ಸಂಕ್ಷಿಪ್ತ ಮಾಹಿತಿ ನೀಡಿ ನೆನಪಿಸುವ ಆಪ್ತಸಹಾಯಕ ಈ ಕನ್ನಡಕ. ರಸ್ತೆಯಲ್ಲಿ ನಡೆಯುವಾಗ ಎದುರಿಗೆ ಅಪಾಯ ಇರುವ ಮುನ್ಸೂಚನೆಯನ್ನೂ ನೀಡುವ ಮೂಲಕ ಬೀಳದಂತೆ ತಡೆಯಲಿದೆ ಎಂದು ಇದನ್ನು ಅಭಿವೃದ್ಧಿಪಡಿಸಿದ ತಂತ್ರಜ್ಞರು ವಿವರಿಸಿದರು.
ಚಿತ್ತಾರ ಗ್ರಹಿಸುವ ಟ್ಯಾಕ್ ಟೈಲ್: ಗುವಾಹಟಿ ಐಐಟಿಯಲ್ಲಿ ಬಿ.ಟೆಕ್ ಪದವಿ ಪಡೆದ ಕವಿರಾಜ್ ಪೃಥ್ವಿ ಹಾಗೂ
ಕೆ. ಲಲಿಕಾ ಲಯಾ ಅವರು ಬೆಂಗಳೂರಿನಲ್ಲಿ ಆರಂಭಿಸಿರುವ ‘ಯುಡಾಟ್’ ಎಂಬ ಸ್ಟಾರ್ಟ್ ಅಪ್ ಕಂಪನಿಯು ಟಚ್‌ಸ್ಕ್ರೀನ್ ಮಾದರಿಯ ಟ್ಯಾಕ್‌ಟೈಲ್ ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದೆ.
ಗರಿಷ್ಠ ಐದು ಸಾವಿರ ಚುಕ್ಕಿಗಳಿರುವ ಸಾಧನವಿದು. ಕಂಪ್ಯೂಟರ್‌ನಲ್ಲಿ ಶಿಕ್ಷಕರು ಮೂಡಿಸುವ ಉಬ್ಬು ಚುಕ್ಕಿಗಳಿಂದ ಮೂಡುವ ಚಿತ್ತಾರಗಳನ್ನು ಗ್ರಹಿಸಿ ಅಧ್ಯಯನ ನಡೆಸುವ ಸಾಧನ ಇದಾಗಿದೆ.
ಈ ಕುರಿತು ಮಾಹಿತಿ ನೀಡಿದ ಲಲಿಕಾ ಲಯಾ, ‘ಪ್ರತಿ ಐದು ಅಂಧ ವಿದ್ಯಾರ್ಥಿ ಗಳಿಗೆ ಒಬ್ಬರು ಶಿಕ್ಷಕರು ಇರಬೇಕು ಎಂಬ ನಿಯಮವಿದೆ. ಆದರೆ 20 ವಿದ್ಯಾರ್ಥಿ
ಗಳಿಗೆ ಒಬ್ಬ ಶಿಕ್ಷಕರು ಇರುವುದು ಸಾಮಾನ್ಯ ಎಂಬಂತಾಗಿದೆ. ಹೀಗಿದ್ದರೂ, ಚಿತ್ರ ಸಹಿತ ಕಲಿಕೆ ಮೂಲಕ ಅಂಧ ವಿದ್ಯಾರ್ಥಿಗಳ ಪರಿಣಾಮಕಾರಿ ಅಧ್ಯಯನಕ್ಕೆ ಈ ಸಾಧನ ನೆರವಾಗಲಿದೆ’ ಎಂದರು.
‘ಅಂಧ ವಿದ್ಯಾರ್ಥಿಗಳಿಗೆ ಹೊಸ ವಿಷಯವನ್ನು ಕೇವಲ ಬ್ರೈಲ್ ಮಾದರಿ
ಅಕ್ಷರದಲ್ಲಿ ವಿವರಿಸುವುದು ಅಸಾಧ್ಯ. ಇಂಥ ಸಂದರ್ಭದಲ್ಲಿ ಟ್ಯಾಕ್‌ಟೈಲ್ ಸಾಧನ
ದಿಂದ ಉಬ್ಬು ಚಿತ್ರಗಳನ್ನು ನಿರ್ಮಿಸಿ,
ಅದರ ಮೂಲಕ ವಿಷಯವನ್ನು ಕಲಿಸಲು ಸಾಧ್ಯ ಎಂಬುದನ್ನು ಅಧ್ಯಯನ ದಲ್ಲಿ ಕಂಡುಕೊಂಡ ನಂತರ ಈ ಸಾಧನ ವನ್ನು ಅಭಿವೃದ್ಧಿಪಡಿಸಲಾಗಿದೆ. ಕಂಪ್ಯೂಟರ್ ನಲ್ಲಿ ರಚಿಸುವ ಚಿತ್ರ ಗಳಂತೆಯೇ, ಈ ಸಾಧನ ಉಬ್ಬು ಚಿತ್ರಗಳನ್ನು ಮೂಡಿಸಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.