ADVERTISEMENT

ತಂತ್ರಜ್ಞಾನ | ಆವಿಯಾಗದ ಸ್ಮರಣೆ‌!

ಕೊಳ್ಳೇಗಾಲ ಶರ್ಮ
Published 15 ಜನವರಿ 2025, 0:34 IST
Last Updated 15 ಜನವರಿ 2025, 0:34 IST
   

ನೆನಪುಗಳೇ ಹಾಗೆ, ಮರೆಯಾಗಿ ಬಿಡಬಲ್ಲುವು. ಎಲೆಕ್ಟ್ರಾನಿಕ್‌ ನೆನಪುಗಳೂ ಅಷ್ಟೆ. ಶಾಶ್ವತವಲ್ಲ. ನಾವು ನಿತ್ಯವೂ ನಮ್ಮ ಕೆಲಸ ಸರಾಗವಾಗಿ ಆಗಲೆಂದು ಎಲೆಕ್ಟ್ರಾನಿಕ್‌ ನೆನಪಿನ ಸಾಧನಗಳನ್ನು ಅವಲಂಬಿಸಿರುತ್ತೇವೆ. ಸ್ಮಾರ್ಟ್‌ಫೋನ್‌, ಗಣಕಯಂತ್ರ, ಫೋನಿನ ಸಿಮ್‌ ಕಾರ್ಡ್‌ ಮೊದಲಾದವೆಲ್ಲವೂ ಸ್ಮರಣಸಾಧನಗಳು. ಇವು ಎಲೆಕ್ಟ್ರಾನಿಕ್‌ ಸರ್ಕೀಟಿನ ರೂಪದಲ್ಲಿ ನಾವು ಬರೆದ, ಕೊಟ್ಟ ಮಾಹಿತಿಯನ್ನು ನೆನಪಿನಲ್ಲಿಟ್ಟುಕೊಂಡಿರುತ್ತವೆ, ಅರ್ಥಾತ್‌, ಶೇಖರಿಸಿಟ್ಟಿರುತ್ತವೆ. ಸ್ಮರಣಸಾಧನಗಳು ಅಥವಾ ‘ಮೆಮೊರಿ’ ಸಾಧನಗಳಲ್ಲಿ ಇರುವ ನೆನಪನ್ನು ಬೇಕೆಂದಾಗ ಹೆಕ್ಕಿ ನಮ್ಮ ಕೆಲಸವನ್ನು ಸರಾಗಗೊಳಿಸಿಕೊಳ್ಳುತ್ತೇವೆ.

ಈ ಎಲೆಕ್ಟ್ರಾನಿಕ್‌ ನೆನಪುಗಳೇನೂ ಶಾಶ್ವತವಲ್ಲ. ಎಲ್ಲ ನೆನಪುಗಳಂತೆಯೇ ಇವು ಕೂಡ ಮರೆಯಾಗಿಬಿಡಬಲ್ಲವು. ನೀರಿನಲ್ಲಿ ಬಿದ್ದಾಗಲೋ, ಬಹಳ ಬಿಸಿಯಾದಾಗಲೋ ಸ್ಮರಣಸಾಧನಗಳಲ್ಲಿರುವ ಮೆಮೊರಿಯನ್ನು ಹೆಕ್ಕುವುದು ಕಷ್ಟವಾಗುತ್ತದೆ. ಸಾಧನ ಕೆಟ್ಟಿದೆ ಎನ್ನುತ್ತೇವೆ. ನಿಮ್ಮ ಸುಮಧುರ ಗಳಿಗೆಗಳ ಫೋಟೊಗಳನ್ನು ದಾಖಲಿಸಿಟ್ಟ ಫ್ಲಾಶ್‌ ಕಾರ್ಡ್‌ ಖಾಲಿಯಾಗಿ ಕಾಣುವುದು ಹೀಗೆ. ಅದರಲ್ಲಿ ಸಂಗ್ರಹಿಸಿದ ಮೆಮೊರಿ ಆವಿಯಾಗಿಬಿಟ್ಟಿರುತ್ತದೆ.

ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ ನೆನಪುಗಳನ್ನು ಉಳಿಸಿಕೊಳ್ಳುವಂಥ ಸಾಧನ ಸಾಧ್ಯವಿಲ್ಲವೇ? ಸಾಧ್ಯವಿದೆ – ಎನ್ನುತ್ತದೆ ‘ಡಿವೈಸಸ್‌’ ಪತ್ರಿಕೆಯಲ್ಲಿ ಮೊನ್ನೆ ಪ್ರಕಟವಾಗಿರುವ ಪ್ರಬಂಧ. ಅಮೆರಿಕದ ಮಿಶಿಗನ್‌ ವಿಶ್ವವಿದ್ಯಾಲಯದ ವಸ್ತುವಿಜ್ಞಾನ ಮತ್ತು ಎಂಜಿನಿಯರಿಂಗ್‌ ವಿಭಾಗದ ಪ್ರೊ. ಯಿಯಾಂಗ್‌ ಲೀ ಮತ್ತು ಸಂಗಡಿಗರು 600 ಡಿಗ್ರಿ ಸೆಲ್ಶಿಯಸ್‌ ಉಷ್ಣತೆಗೆ ಕಾಯಿಸಿದರೂ ಆವಿಯಾಗದೆ ಉಳಿಯುವ ನೆನಪಿನ ಸಾಧನವನ್ನು ರೂಪಿಸಿದ್ದಾರಂತೆ. ಇದನ್ನು ಇಷ್ಟು ಬಿಸಿ ಮಾಡಿದಾಗಲೂ ಅದರಲ್ಲಿ ಅಚ್ಚೊತ್ತಿದ ಮಾಹಿತಿಗಳು ಹಾಗೆಯೇ ಉಳಿದಿದ್ದುವು ಎಂದು ಲೀ ಹೇಳಿದ್ದಾರೆ.

ADVERTISEMENT

‘ಎಲೆಕ್ಟ್ರಾನಿಕ್‌ ಮೆಮೊರಿ’ ಎಂದರೆ ನಾವು ಸಂಗ್ರಹಿಸಬೇಕಾದ ಮಾಹಿತಿಯನ್ನು ಸರ್ಕೀಟಿನಲ್ಲಿ ವಿದ್ಯುತ್‌ ಹರಿಸಿ ಇಲ್ಲವೇ ನಿಲ್ಲಿಸಿ ಕೂಡಿಡುತ್ತೇವೆ. ಇದಕ್ಕಾಗಿ ಸಿಲಿಕಾನ್‌ ಪೊರೆಗಳಲ್ಲಿ ಅತಿ ಸೂಕ್ಷ್ಮವಾಗಿ ದಾಖಲಿಸಿದ ವಿದ್ಯುತ್‌ ಮಂಡಲಗಳನ್ನು ಅಥವಾ ಸರ್ಕೀಟನ್ನು ಬಳಸುತ್ತೇವೆ. ಈ ಸರ್ಕೀಟುಗಳಲ್ಲಿ ಮಾಹಿತಿ ಇದ್ದರೆ ಆಗ ವಿದ್ಯುತ್‌ ಹರಿಯುವುದಿಲ್ಲ. ಮಾಹಿತಿ ಇಲ್ಲದಾಗ ವಿದ್ಯುತ್‌ ಹರಿಯುತ್ತದೆ. ಹೀಗೆ ಎಲ್ಲಿ ಮಾಹಿತಿ ಇದೆ ಎಂದು ಗುರುತಿಸಬಹುದು. ಯಾವುದೇ ಮಾಹಿತಿಯನ್ನು ಹೀಗೆ ಇದೆ, ಇಲ್ಲ ಎನ್ನುವಂತೆ ಸಂಕೇತಿಸಿ ಬಿಟ್ಟರೆ, ಅವುಗಳನ್ನು ಸರ್ಕೀಟುಗಳಲ್ಲಿ ಬಂಧಿಸಿ ಇಡಬಹುದು. ಬೇಕೆಂದಾಗ ಯಾವ್ಯಾವ ಸರ್ಕೀಟುಗಳಲ್ಲಿ ವಿದ್ಯುತ್‌ ಹರಿಯಬಲ್ಲುದು, ಯಾವುದರಲ್ಲಿ ಇಲ್ಲ ಎಂದು ಗುರುತಿಸಿ, ನೆನಪನ್ನು ಮರುಕಳಿಸಿಕೊಳ್ಳಬಹುದು.

ಹೀಗೆ ಎರಡು ಸ್ಥಿತಿಗಳ ನಡುವೆ ಓಲಾಡುವ ಯಾವುದೇ ವಸ್ತುವನ್ನೂ ಮಾಹಿತಿ ಕೂಡಿಡಲು ಬಳಸಬಹುದು. ಎಲೆಕ್ಟ್ರಾನಿಕ್‌ ಸರ್ಕೀಟುಗಳಲ್ಲಿ ಬಳಸುವ ಅರೆವಾಹಕ ವಸ್ತುಗಳು ಅತಿ ಹೆಚ್ಚು ಎಂದರೆ ಇನ್ನೂರು ಡಿಗ್ರಿವರೆಗೆ ತಮ್ಮಲ್ಲಿ ಮಾಹಿತಿಯನ್ನು ಕೂಡಿಟ್ಟುಕೊಳ್ಳುತ್ತವೆ. ಇದಕ್ಕಿಂತಲೂ ಬಿಸಿಯಾದಾಗ ಸರ್ಕೀಟುಗಳಲ್ಲಿ ನಿಲ್ಲಬೇಕಾದ ಎಲೆಕ್ಟ್ರಾನುಗಳು ಅಲ್ಲಿ ಉಳಿಯದೆ ಹರಿದು ಹೋಗುತ್ತವೆ. ನೆನಪು ಅಳಿಸಿಹೋಯಿತು ಎನ್ನುತ್ತೇವೆ. ಮೆಮೊರಿ ಫೇಲ್‌ ಆಗುವುದು ಹೀಗೆ. ಬೇಕಾದ ನೆನಪನ್ನು ಹೆಕ್ಕುವುದು ಕಷ್ಟವಾದಾಗ ಸಾಧನ ಹ್ಯಾಂಗ್‌ ಆಗುತ್ತದೆ. ಫೋನು ಅತಿ ಬಿಸಿಯಾದಾಗ ಸರಿಯಾಗಿ ಕೆಲಸ ನಿರ್ವಹಿಸದೇ ಇರುವುದು ಇದೇ ಕಾರಣಕ್ಕೆ.
ಅತಿ ಬಿಸಿಯಾದಾಗಲೂ ನೆನಪುಗಳು ಕೆಡದಂತೆ ಉಳಿಸುವ ಸಾಧನ ಸಾಧ್ಯವಿಲ್ಲವೇ? ಇದು ಲೀ ಅವರ ಉದ್ದೇಶ. ಇದಕ್ಕಾಗಿ ಇವರು ಹೊಸ ಬಗೆಯ ಸ್ಮರಣಸಾಧನಗಳನ್ನು ರೂಪಿಸಿದ್ದಾರೆ. ಇವು ಕೇವಲ ಎಲೆಕ್ಟ್ರಾನಿಕ್‌ ಸರ್ಕೀಟುಗಳನ್ನು ಬಳಸುವುದಿಲ್ಲ. ಬದಲಿಗೆ ರಾಸಾಯನಿಕ ಕ್ರಿಯೆಗಳನ್ನು ಬಳಸುತ್ತವೆ. ಇಂಥ ಸ್ಮರಣ ತಂತ್ರಗಳನ್ನು ‘ಎಲೆಕ್ಟ್ರೋಕೆಮಿಕಲ್‌ ರೇಂಡಮ್‌ ಅಸೆಸ್‌ಮೆಮೊರಿ’ ಅಥವಾ ‘ಇಸಿರೇಮ್‌’ ಎನ್ನುತ್ತಾರೆ.

’ಇಸಿರೇಮ್‌’ ಅನ್ನು ತಯಾರಿಸಲು ಈ ಹಿಂದೆಯೂ ಹಲವು ಪ್ರಯತ್ನಗಳು ನಡೆದಿದ್ದುವು. ಆದರೆ ಅವು ಎಲ್ಲವೂ ಕೇವಲ ಇನ್ನೂರು ಅಥವಾ ಇನ್ನೂರೈವತ್ತು ಡಿಗ್ರಿ ಸೆಲ್ಸಿಯಸ್‌ ಉಷ್ಣತೆಯವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದುವು. ಇನ್ನೂ ಬಿಸಿಯಾದಾಗ ಅವು ಕೂಡ ಎಲೆಕ್ಟ್ರಾನಿಕ್‌ ಸಾಧನಗಳಂತೆಯೇ ನೆನಪನ್ನು ಕಳೆದುಕೊಳ್ಳುತ್ತಿದ್ದುವು. ಲೀ ತಂಡ ಇದೀಗ ಮುನ್ನೂರು ಡಿಗ್ರಿಯಿಂದ ನಾಲ್ಕುನೂರ ಐವತ್ತು ಡಿಗ್ರಿವರೆಗೂ ಸಮರ್ಥವಾಗಿ ಮಾಹಿತಿಯನ್ನು ಕೂಡಿಟ್ಟುಕೊಳ್ಳಬಲ್ಲ ಇಸಿರೇಮ್‌ ತಯಾರಿಸಿದ್ದಾರೆ.
ಇದು ಒಂದು ಬ್ಯಾಟರಿಯಂತೆ. ‘ಟಾಂಟಾಲಮ್‌’ ಎನ್ನುವ ಲೋಹ ಮತ್ತು ಅದರ ಆಕ್ಸೈಡ್‌ಗಳ ಪೊರೆಗಳು ಇದರಲ್ಲಿ ಆನ್‌–ಆಫ್‌ಗಳಂತೆ ಕೆಲಸ ಮಾಡುತ್ತವೆ. ಇವೆರಡೂ ವಸ್ತುಗಳ ಪೊರೆಗಳ ನಡುವೆ ‘ಯಿಟ್ರಿಯಂ’ ಹಾಗೂ ‘ಜಿರ್ಕೋನಿಯಂ’ ಆಕ್ಸೈಡ್‌ಗಳ ಸಂಯುಕ್ತವಿರುತ್ತದೆ. ಟಾಂಟಾಲಮ್‌ ಆಕ್ಸೈಡ್‌ ಇರುವ ಬದಿಗೆ ವಿದ್ಯುತ್ತು ಪೂರೈಸಿದಾಗ, ಆಕ್ಸೈಡಿನಲ್ಲಿರುವ ಆಕ್ಸಿಜನ್‌ ಅಣುಗಳು ಅಲ್ಲಿಂದ ದೂರ ಸರಿಯುತ್ತವೆ. ಇದೇ ನೆನಪನ್ನು ಸಂಗ್ರಹಿಸುವ ವಿಧಾನ.

ಆಕ್ಸಿಜನ್‌ ಸರಿಯುವುದರಿಂದ, ಆ ಜಾಗದಲ್ಲಿ ವಿದ್ಯುತ್ತಿನ ಹರಿವು ಸರಾಗವಾಗಿ ಆಗುವುದಿಲ್ಲ. ವಿದ್ಯುತ್‌ ಹರಿವಿನ ವೇಗಕ್ಕೂ ಪೂರೈಸಿದ ವಿದ್ಯುತ್ತಿನ ಪ್ರಮಾಣಕ್ಕೂ ಸಂಬಂಧವಿರುವುದರಿಂದ, ಎಲ್ಲೆಲ್ಲಿ ಈ ನೆನಪು ಇದೆ ಎಂಬುದನ್ನು ವೋಲ್ಟೇಜನ್ನು ಪತ್ತೆ ಮಾಡುವುದರ ಮೂಲಕ ತಿಳಿಯಬಹುದು. ಈ ರೀತಿಯಲ್ಲಿ ರೂಪಿಸಿದ ಇಸಿರೇಮ್‌ ಪೊರೆಯನ್ನು ಲೀ ತಂಡ ಪರಿಶೀಲಿಸಿತು. ವಿವಿಧ ತಾಪಮಾನದಲ್ಲಿ ಅದರಲ್ಲಿ ಎಷ್ಟು ನೆನಪು ಉಳಿಯುತ್ತದೆ ಎಂದು ಗಮನಿಸಿತು. ನೆನಪನ್ನು ವಿದ್ಯುತ್‌ ಹರಿಸುವ ಮೂಲಕ ಪತ್ತೆ ಮಾಡಬಹುದು. ಆರುನೂರು ಡಿಗ್ರಿ ಉಷ್ಣಾಂಶದವರೆಗೂ ಈ ಇಸರೇಮ್‌ನಲ್ಲಿ ವಿದ್ಯುತ್‌ ಹರಿವಿಗೆ ಅಡ್ಡಿ ಇದ್ದೇ ಇತ್ತು. ಅಂದರೆ ಅಲ್ಲಿಯವರೆವಿಗೂ ಇದು ನೆನಪನ್ನು ಕೂಡಿಟ್ಟುಕೊಂಡಿತ್ತು ಎಂದರ್ಥ.

ಈ ಸಾಧನವನ್ನು ತಯಾರಿಸುವುದಕ್ಕೂ ಸಾಧಾರಣ ಎಲೆಕ್ಟ್ರಾನಿಕ್ಸ್‌ ಚಿಪ್‌ಗಳನ್ನು ತಯಾರಿಸುವ ವಿಧಾನವೇ ಸಾಕು. ಆದರೆ ನೆನಪನ್ನು ಬರೆಯುವ ಹಾಗೂ ಅದನ್ನು ಓದುವ ಸಾಧನಗಳನ್ನು ರೂಪಿಸಬೇಕು ಎನ್ನುತ್ತಾರೆ ಲೀ. ಅದು ಆದ ಮೇಲೆ ಈ ಬಗೆಯ ಮೆಮೊರಿ ಸಾಧನಗಳನ್ನು ಅತಿ ಉಷ್ಣವಿರುವ ಪರಿಸರದಲ್ಲಿ ಬಳಸಬೇಕಾದ ಯಂತ್ರಗಳಲ್ಲಿ ಬಳಸಬಹುದು ಎನ್ನುವುದು ಇವರ ತರ್ಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.