ಬೆಂಗಳೂರು: ಮಲಯಾಳ ಚಿತ್ರರಂಗದ ನಟ ಫಹಾದ್ ಫಾಸಿಲ್ ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಅದು ಅವರ ಮುಂದಿನ ಚಿತ್ರ ‘ಮೊಲ್ಲಿವುಡ್ ಟೈಮ್ಸ್’ ಕಾರಣಕ್ಕಾಗಿ ಅಲ್ಲ. ಬದಲಿಗೆ ಅದೇ ಚಿತ್ರದ ಮುಹೂರ್ತದ ಸಂದರ್ಭದಲ್ಲಿ ಅವರ ಬಳಿ ಇದ್ದ ಕೀಪ್ಯಾಡ್ ಇರುವ ‘ಸರಳ’ ಮೊಬೈಲ್‌ಗಾಗಿ.
ಸರಳ ಕೀಪ್ಯಾಡ್ ಇರುವ ಫೋನ್ ಅನ್ನು ಇಂದಿನ ಪುಟ್ಟ ಮಕ್ಕಳೂ ಮುಟ್ಟುವುದಿಲ್ಲ. ಹಾಗಿದ್ದಾಗ, ಜನಪ್ರಿಯ ಹಾಗೂ ಬಹುಬೇಡಿಕೆಯ ನಟನೊಬ್ಬ ಸ್ಮಾರ್ಟ್‌ಫೋನ್ ಬದಲಿಗೆ ಇಂಥ ಸರಳ ಫೋನ್ ಬಳಸುತ್ತಿದ್ದಾರೆ. ಇದು ಅವರ ಸರಳತೆಯ ಸಂಕೇತ ಎಂಬಿತ್ಯಾದಿ ಒಕ್ಕಣೆಯೊಂದಿಗೆ ಸಾಮಾಜಿಕ ಮಾದ್ಯಮಗಳಲ್ಲಿ ದೃಶ್ಯ ಸಹಿತ ರೀಲ್ಸ್, ಮೀಮ್ಸ್‌ಗಳು ಓಡಾಡುತ್ತಿವೆ.
ಅಸಲಿಗೆ ಫಹಾದ್ ಬಳಸುತ್ತಿದ್ದ ಆ ಕೀಪ್ಯಾಡ್ ಇರುವ ‘ಸರಳ’ ಫೋನ್‌ನ ಬೆಲೆ ₹10 ಲಕ್ಷ ಎಂದರೆ ಎದೆಯೇ ಒಮ್ಮೆ ಝಲ್ ಎನ್ನುತ್ತದೆ.
ಬ್ರಿಟನ್‌ನ ಫೋನ್ ತಯಾರಕ ಕಂಪನಿ ವರ್ಟು ಈ ವಿಲಾಸಿ ಫೋನ್‌ಗಳನ್ನು ತಯಾರಿಸುತ್ತದೆ. ‘ಆಸೆಂಟ್ ರೆಟ್ರೊ ಕ್ಲಾಸಿಕ್ ಕೀಪ್ಯಾಡ್’ ಎಂಬ ಫೋನ್ ಇದಾಗಿದ್ದು, ಇದರ ಬೆಲೆ 11,920 ಅಮೆರಿಕನ್ ಡಾಲರ್ (₹10.27 ಲಕ್ಷ) ಎಂದು ವರ್ಟು ತನ್ನ ಅಧಿಕೃತ ಅಂತರ್ಜಾಲ ಪುಟದಲ್ಲಿದೆ.
ಈ ಮಾದರಿಯ ಫೋನ್ 2008ರಲ್ಲಿ ತಯಾರಾಗಿತ್ತು. ಅತ್ಯಂತ ಶ್ರೇಷ್ಠ ಗುಣಮಟ್ಟದ ಫೋನ್ ಆಗಿದ್ದ ‘ಆಸೆಂಟ್ ರೆಟ್ರೊ ಕ್ಲಾಸಿಕ್ ಕೀಪ್ಯಾಡ್’ ಸದ್ಯ ಬಳಕೆಯಲ್ಲಿಲ್ಲ. ಟೈಟಾನಿಯಂ ಲೋಹದಿಂದ ಇದರ ಹೊರಕವಚ ಸಿದ್ಧಪಡಿಸಲಾಗಿದೆ. ಅದಕ್ಕೆ ಚರ್ಮದ ಕವಚವಿದ್ದು, ಅದಕ್ಕೆ ಕೈಹೊಲಿಗೆ ಹಾಕಲಾಗಿದೆ. ಬ್ಲೂ ಟೂತ್, ಜಿಪಿಆರ್‌ಎಸ್, ಎಸ್‌ಎಂಎಸ್ ಹಾಗೂ ಎಂಎಂಎಸ್ ಸೌಕರ್ಯಗಳಿವೆ. 170 ರಾಷ್ಟ್ರಗಳನ್ನು ಪ್ರತಿಕ್ಷಣವೂ ಸಂಪರ್ಕಿಸಲು ಸಾಧ್ಯವಾಗುವ ಗುಂಡಿಯನ್ನು ಈ ಫೋನ್ ಹೊಂದಿದೆ. ಈ ಫೋನ್ 173 ಗ್ರಾಂ ತೂಕವಿದ್ದು, 22 ಮಿ.ಮೀ. ದಪ್ಪವಿದೆ. ಕೀಪ್ಯಾಡ್‌ಗಳು ಶ್ರೇಷ್ಠ ಗುಣಮಟ್ಟದ ಸ್ಟೈನ್‌ಲೆಸ್ ಸ್ಟೀಲ್‌ನಿಂದ ತಯಾರಿಸಲಾಗಿದೆ.
ಮಲಯಾಳದ ನಟ ವಿನಯ್ ಫೋರ್ಟ್ ಅವರು ಕಳೆದ ವಾರ ಫಹಾದ್ ಅವರ ಜೀವನಶೈಲಿ ಕುರಿತು ಮಾಹಿತಿ ಹಂಚಿಕೊಂಡಿದ್ದರು. ‘ಸಾಮಾಜಿಕ ಮಾಧ್ಯಮಗಳಿಂದ ಫಹಾದ್ ದೂರವಿದ್ದಾರೆ. ಸ್ಮಾರ್ಟ್‌ಫೋನ್ ಇರುವ ಬದಲು ಕೀಪ್ಯಾಡ್ ಇರುವ ಬೇಸಿಕ್ ಫೋನ್ ಇಟ್ಟುಕೊಂಡಿದ್ದಾರೆ’ ಎಂದಿದ್ದರು. ಆದರೆ ಅವರು ಯಾವ ಬ್ರಾಂಡ್‌ನ ಫೋನ್ ಬಳಸುತ್ತಿದ್ದಾರೆ ಎಂದು ಹೇಳಿರಲಿಲ್ಲ.
2023ರಲ್ಲಿ ಪಿಂಕ್‌ವಿಲ್ಲಾಗೆ ಫಹಾದ್ ನೀಡಿದ ಸಂದರ್ಶನದಲ್ಲೂ ಅವರು ತಮ್ಮ ಮೊಬೈಲ್ ಫೋನ್ ಬಳಕೆ ಕುರಿತು ಮಾತನಾಡಿದ್ದರು. ಕಾಲೇಜು ದಿನಗಳಲ್ಲಿ ಫೇಸ್‌ಬುಕ್ ಖಾತೆಯನ್ನು ಹೊಂದಿದ್ದೆ. ಆದರೆ ಈಗಿಲ್ಲ. ಸಾಮಾಜಿಕ ಮಾಧ್ಯಮಗಳ ಬದಲು ಅಭಿಮಾನಿಗಳೊಂದಿಗೆ ನೇರವಾಗಿ ಸಂಪರ್ಕ ಹೊಂದಬೇಕೆನ್ನುವುದು ನನ್ನ ಉದ್ದೇಶ. ಇದನ್ನು ಬದಲಿಸಲು ನನಗೆ ಇಷ್ಟವಿಲ್ಲ’ ಎಂದಿದ್ದರು.
ಆದರೆ ಇತ್ತೀಚೆಗೆ ಫಹಾದ್ ಅವರು ಬಳಸುವ ಫೋನ್ ಕುರಿತು ವ್ಯಾಪಕ ಚರ್ಚೆಗಳು ನಡೆದ ನಂತರ, ಅದು ಯಾವ ಬ್ರಾಂಡ್ ಎಂಬ ಚರ್ಚೆಗೆ ತೆರೆ ಬಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.