
ಪ್ರಾತಿನಿಧಿಕ ಚಿತ್ರ
ಎಐ ಚಿತ್ರ
ಈಗಂತೂ ಗೂಗಲ್ ಬಳಕೆ ಅತೀ ಎನಿಸಿದೆ. ಹೊಸ ಹೊಸ ಅಪ್ಡೇಟ್‌ಗಳು, ಮಾಹಿತಿ ಕಲೆಹಾಕುವಿಕೆ ಹೆಚ್ಚಾಗುತ್ತಿದೆ. ಈ ರೀತಿ ಮಾಹಿತಿ ಒದಗಿಸಲು ಗೂಗಲ್ ಶತಕೋಟಿ ಲೀಟರ್‌ಗಳಷ್ಟು ನೀರನ್ನು ಬಳಕೆ ಮಾಡುತ್ತಿದೆ ಎನ್ನುವುದನ್ನು ತಿಳಿದರೆ ಅಚ್ಚರಿಯಾಗಬಹುದು.
ಸದ್ಯ ಗೂಗಲ್‌ನ ಡೇಟಾ ಸೆಂಟರ್‌ಗಳಿಗೆ ಬಳಕೆಯಾಗುತ್ತಿರುವ ನೀರಿನ ಬಗ್ಗೆ ಜಾಗತಿಕವಾಗಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. 2023ರಲ್ಲಿ ಗೂಗಲ್‌ನ ಡೇಟಾ ಸೆಂಟರ್‌ಗಳು ತಮ್ಮ ಸರ್ವರ್‌ಗಳನ್ನು ತಂಪಾಗಿಸಲು ಸುಮಾರು 6.1 ಬಿಲಿಯನ್ ಗ್ಯಾಲನ್ ಅಂದರೆ ಸುಮಾರು 23 ಶತಕೋಟಿ ಲೀಟರ್ ನೀರನ್ನು ಬಳಕೆ ಮಾಡಿದೆ. ಬೆಂಗಳೂರಿಗೆ ಹೋಲಿಸಿದರೆ 3 ದಿನ ಇಡೀ ನಗರಕ್ಕೆ ಪೂರೈಕೆಯಾಗುವ ನೀರಿನ ಪ್ರಮಾಣವಾಗಿದೆ. ಈ ನೀರಿನ ಬಳಕೆಯ ಪ್ರಮಾಣ ಪ್ರತಿವರ್ಷ ಶೇ 17 ರಿಂದ 20ರಷ್ಟು ಹೆಚ್ಚಾಗುತ್ತಿದೆ.
2024ರ ಹೊತ್ತಿಗೆ ಈ ಪ್ರಮಾಣ 6.4 ಬಿಲಿಯನ್ ಗ್ಯಾಲನ್‌ಗಳಿಗೆ ಏರಿಕೆಯಾಗಿದೆ ಎಂದು ‘ಗೂಗಲ್ ಎನ್ವಿರಾನ್‌ಮೆಂಟ್ ರಿಪೋರ್ಟ್ 2024–25’ರ ವರದಿ ತಿಳಿಸಿದೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ಮತ್ತು ಸರ್ಚ್ ಎಂಜಿನ್ ಪ್ರಕ್ರಿಯೆ, ಗೂಗಲ್ ಬಿಡುಗಡೆ ಮಾಡುತ್ತಿರುವ ಅನೇಕ ರೀತಿಯ ವೈಶಿಷ್ಟ್ಯಗಳು ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿದೆ. ಇದರಿಂದಾಗಿ ಸರ್ವರ್‌ಗಳು ಕೆಲಸ ಮಾಡುವಾಗ ವಿಪರೀತ ಶಾಖವನ್ನು ಬಿಡುಗಡೆ ಮಾಡುತ್ತವೆ. ಇವುಗಳನ್ನು ತಂಪಾಗಿಸಲು ನೀರು ಅತ್ಯಗತ್ಯ. ಅದು ಕೊಳಚೆ ನೀರೋ ಅಥವಾ ಮರುಬಳಕೆಯ ನೀರು ಅಲ್ಲ. ಶುದ್ಧವಾಗಿರುವ ನೀರೇ ಬೇಕಾಗುತ್ತದೆ. ಅಲ್ಲದೆ ಒಮ್ಮೆ ಉಪಯೋಗಿಸಿದ ನೀರು ಮರು ಉಪಯೋಗಕ್ಕೆ ಸಿಗದು. ಅದಕ್ಕೆ ಕಾರಣವೂ ಇದೆ.
ಡೇಟಾ ಸೆಂಟರ್‌ಗಳಲ್ಲಿ ಎವಾಪೊರೇಟಿವ್ ಕೂಲಿಂಗ್ ತಂತ್ರಜ್ಞಾನ ಬಳಸಲಾಗುತ್ತದೆ. ಇಲ್ಲಿ ನೀರು ಆವಿಯಾಗುವ ಮೂಲಕ ಶಾಖವನ್ನು ಹೊರಹಾಕುತ್ತದೆ. ಡೇಟಾ ಸೆಂಟರ್‌ಗಳಲ್ಲಿ ಬಳಕೆಯಾಗುವ ಶೇ 80 ರಷ್ಟು ನೀರು ಆವಿಯಾಗಿ ಗಾಳಿಯನ್ನು ಸೇರಿಕೊಳ್ಳುತ್ತದೆ. ಹೀಗಾಗಿ ಮರುಬಳಕೆ ಸಾಧ್ಯವಾಗುವುದಿಲ್ಲ.
ಸ್ವಚ್ಛ ನೀರಿನ ಬಳಕೆಯೇ ಏಕೆ?
ಡೇಟಾ ಸೆಂಟರ್‌ಗಳಲ್ಲಿ ಸ್ವಚ್ಛ ನೀರನ್ನೇ ಬಳಸಲಾಗುತ್ತದೆ. ಏಕೆಂದರೆ ಸಾಮಾನ್ಯವಾಗಿ ನೀರಿನಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಅಂಶ ಇರುತ್ತದೆ. ಒಮ್ಮೆ ಡೇಟಾ ಸೆಂಟರ್‌ಗಳಲ್ಲಿ ಬಳಸಿದ ನೀರಿನಲ್ಲಿ ಈ ಅಂಶಗಳು ಅಧಿಕವಾಗಿರುತ್ತವೆ. ಇದನ್ನು ಮತ್ತೆ ಬಳಸಿದರೆ ಆ ಅಂಶಗಳು ಸರ್ವರ್‌ಗಳ ಪೈಪ್‌ಗಳಲ್ಲಿ 'ಲೈಮ್‌ಸ್ಕೇಲ್' ಎಂಬ ಕಠಿಣವಾದ ಪದರವನ್ನು ಸೃಷ್ಟಿಸುತ್ತವೆ. ಈ ಪದರವು ಇನ್ಸುಲೇಟರ್ ಆಗಿ ಕಾರ್ಯನಿರ್ವಹಿಸುವುದರಿಂದ ಶಾಖವು ಹೊರಹೋಗಲು ಸಾಧ್ಯವಾಗದೆ ಸರ್ವರ್‌ಗಳು ಕರಗುವ ಅಪಾಯವಿರುತ್ತದೆ.
ಹಾಗೊಂದು ವೇಳೆ ಮರುಬಳಕೆಯ ನೀರು ಬೇಕೆಂದರೆ ಅದನ್ನು ಸ್ವಚ್ಛಗೊಳಿಸಲು ಶುದ್ಧೀಕರಣ ಘಟಕ, ಪ್ರತ್ಯೇಕ ಪೈಪ್‌ಲೈನ್ ವ್ಯವಸ್ಥೆ ಇರಬೇಕಾಗುತ್ತದೆ. ಇದು ದುಬಾರಿ ವೆಚ್ಚಕ್ಕೆ ಕಾರಣವಾಗುತ್ತದೆ. ಇದೇ ಕಾರಣಕ್ಕೆ ನೀರನ್ನು ಮರುಬಳಕೆ ಮಾಡುತ್ತಿಲ್ಲ.
ಏರ್ ಕೂಲಿಂಗ್ ತಂತ್ರಜ್ಞಾನದತ್ತ ಹೆಜ್ಜೆ
ಡೇಟಾ ಸೆಂಟರ್‌ಗಳು ಈ ರೀತಿ ಲಕ್ಷಗಟ್ಟಲೇ ಲೀಟರ್ ನೀರನ್ನು ಬಳಕೆ ಮಾಡುವುದು ಪರಿಸರಕ್ಕೆ ಮಾರಕವಾಗುತ್ತದೆ. ಅಲ್ಲದೆ ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ ಈಗಾಗಲೇ ನೀರಿನ ಅಭಾವ ಇರುವ ಕಾರಣ ಪರ್ಯಾಯ ವ್ಯವಸ್ಥೆ ಅಗತ್ಯವಾಗಿದೆ. ಅದಕ್ಕಾಗಿಯೇ ಗೂಗಲ್ 2030ರ ವೇಳೆಗೆ 'Water Positive' ಆಗುವುದಾಗಿ ಘೋಷಿಸಿದೆ. ಅಂದರೆ ತಾನು ಬಳಸುವುದಕ್ಕಿಂತ ಹೆಚ್ಚು ನೀರನ್ನು ಪರಿಸರಕ್ಕೆ ಮರಳಿಸುವ ಗುರಿ ಹೊಂದಿದೆ. ಇದಕ್ಕಾಗಿ ಗಾಳಿಯ ಮೂಲಕ ತಂಪು ಮಾಡುವ ಏರ್ ಕೂಲಿಂಗ್ ತಂತ್ರಜ್ಞಾನ ಮತ್ತು ಮುಚ್ಚಿದ ಪೈಪ್ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಗೂಗಲ್ ಹೇಳಿಕೊಂಡಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.