
ಚಿತ್ರ ಕೃಪೆ: ಗೂಗಲ್
ಇನ್ನೇನು ಕ್ಯಾಲೆಂಡರ್ ವರ್ಷ 2025 ಮುಗಿಯುತ್ತಿದೆ. ಹಾಗಾದರೆ ಈ ವರ್ಷ ಗೂಗಲ್‌ನಲ್ಲಿ ಜನರು ಏನೆಲ್ಲಾ ಹುಡುಕಾಡಿದ್ದಾರೆ, ಯಾವೆಲ್ಲ ಕ್ಷೇತ್ರಗಳ ಬಗ್ಗೆ ಜನರು ಆಸಕ್ತಿ ತೋರಿದ್ದಾರೆ ಎನ್ನುವುದರ ಕುರಿತು ಗೂಗಲ್ ಮಾಹಿತಿ ಬಿಡುಗಡೆ ಮಾಡಿದೆ. ಆ ಬಗ್ಗೆ ಇಲ್ಲಿದೆ ವಿವರ.
ಈ ವರ್ಷ ಅನೇಕ ಮೊದಲುಗಳು ನಡೆದಿವೆ. ಆರ್‌ಸಿಬಿ ಮೊದಲ ಬಾರಿ ಐಪಿಎಲ್ ಕಪ್ ಗೆದ್ದಿದೆ, 144 ವರ್ಷಗಳ ಬಳಿಕ ಐತಿಹಾಸಿಕ ಮಹಾಕುಂಭ ಮೇಳ ನಡೆದಿದೆ, ಮಹಿಳಾ ತಂಡ ಐಸಿಸಿ ಕಪ್ ಗೆದ್ದಿದ್ದಾರೆ. ಹೀಗೆ ಬಹಳಷ್ಟು ಘಟನೆಗಳು ನಡೆದಿವೆ.
ಕ್ರೀಡೆಗಳ ಕುರಿತು ಹುಡುಕಾಟ
ಈ ವರ್ಷ ಕ್ರೀಡೆಯಲ್ಲಿ ಭಾರತ ಅನೇಕ ಸಾಧನೆಗಳನ್ನು ಮಾಡಿದೆ. ಹೀಗಾಗಿ ಜನರು ಗೂಗಲ್‌ನಲ್ಲಿ ಐಪಿಎಲ್ ಕ್ರಿಕೆಟ್ ಟೂರ್ನಿ, ಏಷ್ಯಾ ಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವಕಪ್ ಕುರಿತು ಹೆಚ್ಚು ಹುಡುಕಾಡಿದ್ದಾರೆ. ಇದರ ಕುರಿತ ಮಾಹಿತಿಯನ್ನು ಗೂಗಲ್ ಹಂಚಿಕೊಂಡಿದೆ.
ಗೂಗಲ್‌ನಲ್ಲಿ ಕೇಳಿದ ಅತಿ ಹೆಚ್ಚು ಪ್ರಶ್ನೆಗಳು
ಭಾರತದಲ್ಲಿ ಅನೇಕ ಹೊಸತು, ವಿಶೇಷ ಘಟನೆಗಳು ನಡೆದಿವೆ. ಅವುಗಳ ಬಗ್ಗೆ ಗೂಗಲ್‌ನಲ್ಲಿ ಜನರು ಆಪರೇಷನ್ ಸಿಂಧೂರ ಎಂದರೇನು, ವಕ್ಫ್ ಮಸೂದೆ ಎಂದರೇನು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಎಂದರೇನು ಎನ್ನುವದನ್ನೆಲ್ಲಾ ಹುಡುಕಾಡಿದ್ದಾರೆ.
ಸುದ್ದಿಗಳ ಕುರಿತ ಹುಡುಕಾಟ
ದೇಶದಲ್ಲಿ ಈ ವರ್ಷ ಅನೇಕ ಪ್ರಮುಖ ಘಟನೆಗಳು ನಡೆದಿವೆ. ಅವುಗಳಲ್ಲಿ ಬಳಕೆದಾರರು ಹುಡುಕಾಡಿದ್ದು, ಮಹಾಕುಂಭ ಮೇಳ, ಧರ್ಮೇಂದ್ರ ಕುರಿತಾದ ಸುದ್ದಿಗಳು, ಬಿಹಾರ– ದೆಹಲಿ ಚುನಾವಣೆ, ಭಾರತ– ಪಾಕಿಸ್ತಾನ ಕುರಿತಾದ ಸುದ್ದಿಗಳು, ಆಪರೇಷನ್ ಸಿಂಧೂರ್ ಕುರಿತ ಸುದ್ದಿಗಳನ್ನು ಹೆಚ್ಚು ಹುಡುಕಾಡಿದ್ದಾರೆ.
ವ್ಯಕ್ತಿಗಳ ಕುರಿತು ಹುಡುಕಾಟ
ಈ ವರ್ಷ ಅನೇಕರು ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆಗಳಿಂದ ಗುರುತಿಸಿಕೊಂಡಿದ್ದಾರೆ. ಅವರಲ್ಲಿ ಗೂಗಲ್‌ನಲ್ಲಿ ಈ ಬಾರಿ ವೈಭವ್ ಸೂರ್ಯವಂಶಿ ಹೆಸರನ್ನು ಅತಿ ಹೆಚ್ಚು ಜನರು ಹುಡುಕಾಟ ನಡೆಸಿದ್ದಾರೆ.
ಈ ಮಹಿಳೆಯರ ಬಗ್ಗೆ ಹುಡುಕಾಟ ಹೆಚ್ಚು
ಈ ವರ್ಷ ದೇಶದಲ್ಲಿ ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಅವರುಗಳ ಪೈಕಿ ಗೂಗಲ್‌ನಲ್ಲಿ ಮಹಿಳಾ ಕ್ರಿಕೆಟ್ ಆಟಗಾರ್ತಿಯರಾದ ಸ್ಮೃತಿ ಮಂದಾನ, ಶೆಫಾಲಿ ವರ್ಮ, ಹರ್ಮನ್‌ಪ್ರೀತ್ ಕೌರ್ ಬಗ್ಗೆ ಹೆಚ್ಚು ಗೂಗಲ್‌ನಲ್ಲಿ ಹುಡುಕಾಡಿದ್ದಾರೆ.
ಅತಿಹೆಚ್ಚು ಹುಡುಕಾಟ ನಡೆಸಿದ ಸಿನಿಮಾಗಳು
ಈ ಬಾರಿ ಬಾಲಿವುಡ್‌ನ ಸೈಯಾರಾ, ವಾರ್ 2, ಸನಮ್ ತೇರಿ ಕಸಮ್, ಕನ್ನಡದ ಕಾಂತಾರ, ಕೂಲಿ ಸಿನಿಮಾಗಳ ಬಗ್ಗೆ ಹೆಚ್ಚು ಜನ ಹುಡುಕಿದ್ದಾರೆ.
ಹೆಚ್ಚು ಹುಡುಕಾಟ ನಡೆಸಿದ ಶೋಗಳು
ಈ ಬಾರಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಸ್ಕ್ವಾಡ್ ಗೇಮ್, ಅಮೇಜಾನ್ ಪ್ರೈಮ್‌ನಲ್ಲಿ ತೆರೆಕಂಡ ಪಂಚಾಯತ್, ಬಿಗ್ ಬಾಸ್ ಶೋಗಳನ್ನು ಹೆಚ್ಚು ಹುಡುಕಾಟ ನಡೆಸಿದ್ದಾರೆ.
ಹೆಚ್ಚು ಹುಡುಕಾಟ ನಡೆಸಿದ ರೆಸಿಪಿಗಳು
ಅಚ್ಚರಿಯ ವಿಷಯವೆಂದರೆ ಈ ಬಾರಿ ಇಡ್ಲಿ ಮತ್ತು ಮಾಕ್ಟೈಲ್ ಬಗ್ಗೆ ಹೆಚ್ಚು ಜನರು ಹುಡುಕಾಡಿದ್ದಾರೆ.
ಪ್ರವಾಸಿ ಸ್ಥಳಗಳ ಹುಡುಕಾಟ
ಗೂಗಲ್‌ನಲ್ಲಿ ಜನರು ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳಕ್ಕೆ ಹೋಗುವ ಬಗ್ಗೆ ಜನರು ಹೆಚ್ಚು ಹುಡುಕಾಡಿದ್ದಾರೆ. ಇದಲ್ಲದೆ ಮಾರಿಷಸ್, ಫಿಲಿಪ್ಪೀನ್ಸ್ ಬಗ್ಗೆ ಹುಡುಕಾಟ ನಡೆಸಿದ್ದಾರೆ.
ಟ್ರೆಂಡ್‌ಗಳು
ಗೂಗಲ್‌ನ ಜೆಮಿನಿ ಎಐ, ನ್ಯಾನೋ ಬನಾನ 3ಡಿ ಮಾಡೆಲ್, ಗಿಬಿಲಿ ಸ್ಟೈಲ್‌ಗಳು ಗೂಗಲ್‌ನಲ್ಲಿ ಟ್ರೆಂಡ್ ಸೃಷ್ಟಿಸಿವೆ.
ಒಟ್ಟಾರೆಯಾಗಿ ಐಪಿಎಲ್, ಗೂಗಲ್ ಜೆಮಿನಿ, ಏಷ್ಯಾ ಕಪ್, ಐಸಿಸಿ ಚಾಂಪಿಯನ್ ಟ್ರೋಫಿ, ಪ್ರೊ ಕಬ್ಬಡಿ ಲೀಗ್‌ಗಳು 2025ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ವಿಷಯಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.