ADVERTISEMENT

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌20: ಭಾರತದಲ್ಲಿ ಆರಂಭಿಕ ಬೆಲೆ ₹66,999

ಏಜೆನ್ಸೀಸ್
Published 15 ಫೆಬ್ರುವರಿ 2020, 11:24 IST
Last Updated 15 ಫೆಬ್ರುವರಿ 2020, 11:24 IST
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌20
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌20   
""

ಬೆಂಗಳೂರು:ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ ಸಾಲಿನ ಹೊಸ ಆವೃತ್ತಿ 'ಎಸ್‌20' ಭಾರತದಲ್ಲಿ ಮುಂಗಡ ಬುಕ್ಕಿಂಗ್‌ ಆರಂಭವಾಗಿದ್ದು, ಬೆಲೆಯೂ ಬಹಿರಂಗಗೊಂಡಿದೆ. ಫೆಬ್ರುವರಿ 15ರಿಂದ ಬುಕ್‌ ಮಾಡಬಹುದಾಗಿದೆ ಹಾಗೂ ಮಾರ್ಚ್‌ 6ರ ನಂತರ ಫೋನ್‌ ಗ್ರಾಹಕರನ್ನು ಸೇರಲಿದೆ.

ಗ್ಯಾಲಕ್ಸಿ ಎಸ್‌20 ಬೆಲೆ ₹66,999, ಎಸ್‌20+ ಬೆಲೆ ₹73,999 ಹಾಗೂ ಎಸ್‌20 ಅಲ್ಟ್ರಾ ಮಾದರಿಯ ಫೋನ್‌ಗೆ ₹92,999 ನಿಗದಿಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ನಿಗದಿಯಾಗಿರುವುದಕ್ಕಿಂತಲೂ ಕಡಿಮೆ ಬೆಲೆಗೆ ಭಾರತದಲ್ಲಿ ಸಿಗಲಿದೆ.

ಆರಂಭಿಕ ಕೊಡುಗೆಯಾಗಿ, ಎಸ್‌20 ಅಲ್ಟ್ರಾ ಮತ್ತು ಎಸ್‌20+ ಖರೀದಿಸುವ ಗ್ರಾಹಕರಿಗೆ ₹1,999ಕ್ಕೆ ಗ್ಯಾಲಕ್ಸಿ ಬಡ್ಸ್‌+ ಸಿಗಲಿದೆ. ಎಸ್‌20 ಖರೀದಿಸುವವರು ₹2,999 ನೀಡಿ ಗ್ಯಾಲಕ್ಸಿ ಬಡ್ಸ್‌+ ಪಡೆಯಬಹುದು. 1 ವರ್ಷದ ವರೆಗೂ ಯಾವುದೇ ರೀತಿ ಫೋನ್‌ಗೆ ಹಾನಿಯಾದರೆ, ಉಚಿತವಾಗಿ ಡ್ಯಾಮೇಜ್‌ ಸರಿಪಡಿಸುವ ಸೇವೆಯನ್ನು ₹1,999 ನೀಡಿ ಪಡೆಯಬಹುದು.

ADVERTISEMENT

ಸ್ಯಾಮ್‌ಸಂಗ್‌ ರಿಲಯನ್ಸ್‌ ಜಿಯೊ, ಏರ್‌ಟೆಲ್‌ ಹಾಗೂ ವೊಡಾಫೋನ್‌ ಐಡಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ವಿಶೇಷ ಡಾಟಾ ಪ್ಲ್ಯಾನ್‌ ಕೊಡುಗೆಗಳು ಸಿಗಲಿವೆ.

ಆರ್ಟಿಫಿಶಿಯಲ್‌ ಕ್ಯಾಮೆರಾ ತಂತ್ರಜ್ಞಾನ ಮತ್ತು 5ಜಿ ಅಂತರ್ಜಾಲ ವ್ಯವಸ್ಥೆಗೆ ಸಹಕಾರಿಯಾಗುವಂತೆ ಎಸ್‌20 ರೂಪಿಸಲಾಗಿದೆ.
ನಮ್ಮ ನಿತ್ಯದ ಕೆಲಸಗಳು, ಸಂಪರ್ಕ, ಸಂವಹನ, ಗೇಮಿಂಗ್‌,...ಹೀಗೆ ಎಲ್ಲವನ್ನೂ ಬದಲಿಸುವ ಸಾಮರ್ಥ್ಯ 5ಜಿ ಹೊಂದಿರಲಿದೆ.

ಭವಿಷ್ಯದ ಸಂಪರ್ಕ ವ್ಯವಸ್ಥೆಯನ್ನು ಗಮನದಲ್ಲಿರಿಸಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (ಎಐ) ಕ್ಯಾಮೆರಾ ಟೆಕ್ನಾಲಜಿ ಅಳವಡಿಸಲಾಗಿದೆ. ಅತ್ಯಂತ ಸುರಕ್ಷಿತ ಪ್ರೊಸೆಸರ್‌ ಬಳಸಲಾಗಿದ್ದು, ಹಾರ್ಡ್‌ವೇರ್‌ ಮೂಲಕ ಹ್ಯಾಕ್‌ ಅಥವಾ ಅಟ್ಯಾಕ್‌ಗಳಿಂದ ರಕ್ಷಣೆ ಸಿಗಲಿದೆ.
ಕ್ಯಾಮೆರಾ ರೆಸಲ್ಯೂಷನ್‌ ಕಡೆಗೂ ಹೆಚ್ಚಿನ ಗಮನ ನೀಡಲಾಗಿದ್ದು, ಎಸ್‌20 ಮತ್ತು ಎಸ್‌20+ ಫೋನ್‌ಗಳಲ್ಲಿ 64ಎಂಪಿ ಕ್ಯಾಮೆರಾ ಅಳವಡಿಸಲಾಗಿದೆ. ಎಸ್‌20 ಅಲ್ಟ್ರಾದಲ್ಲಿ 108ಎಂಪಿ ಕ್ಯಾಮೆರಾ ನೀಡಲಾಗಿದೆ.

ಮೂರು ಕ್ಯಾಮೆರಾ ಮತ್ತು ಡೆಫ್ತ್‌ ವಿಷನ್‌ ಕ್ಯಾಮೆರಾದೊಂದಿಗೆ 8ಕೆ ವಿಡಿಯೊ ಸಾಮರ್ಥ್ಯ ಒಳಗೊಂಡಿರಲಿದೆ ಹಾಗೂ 100 ಪಟ್ಟು ಜೂಮ್‌ ಅನುಭವ ಸಿಗಲಿದೆ. ಸಿನಿಮಾ, ಟಿವಿ ಕಾರ್ಯಕ್ರಮಗಳನ್ನು ನೀಡುವ ವೇದಿಕೆ ನೆಟ್‌ಫ್ಲಿಕ್ಸ್‌ ಹಾಗೂ ಎಕ್ಸ್‌ಬಾಕ್ಸ್‌ ವಿಡಿಯೊ ಗೇಮ್‌ ಕಲ್ಸೋಲ್‌ ತಯಾರಿಸುವ ಮೈಕ್ರೊಸಾಫ್ಟ್ ಜೊತೆಗೆ ಹೊಸ ಒಪ್ಪಂದಗಳನ್ನು ಮಾಡಿಕೊಂಡಿದೆ.

ಗ್ಯಾಲಕ್ಸಿ ಎಸ್‌20 ಸರಣಿ 5ಜಿ ಫೋನ್‌ಗಳಲ್ಲಿ ಏನೆಲ್ಲ ಇದೆ?

* ಎಸ್‌20, ಎಸ್‌20+ : 64ಎಂಪಿ ಕ್ಯಾಮೆರಾ (30x ಜೂಮ್‌), 10ಎಂಪಿ ಸೆಲ್ಫಿ ಕ್ಯಾಮೆರಾ

* ಎಸ್‌20 ಅಲ್ಟ್ರಾ : 108ಎಂಪಿ ಕ್ಯಾಮೆರಾ (100x ಜೂಮ್‌), 40ಎಂಪಿ ಸೆಲ್ಫಿ ಕ್ಯಾಮೆರಾ

* 8ಕೆ ವಿಡಿಯೊ (ವಿಡಿಯೊ ಜೊತೆಗೆ 33ಎಂಪಿ ರೆಸಲ್ಯೂಷನ್‌ ಸ್ಟಿಲ್‌ ಪಡೆಯುವ ಸೌಲಭ್ಯ)

* ಪ್ರತಿ ಸೆಕೆಂಡ್‌ಗೆ 2ಜಿಬಿ ಡೌನ್‌ಲೋಡ್‌ (ಸ್ಟ್ರೀಮಿಂಗ್‌, ಗೇಮಿಂಗ್‌ಗೆ ಅನುಕೂಲ)

* 4000 ಎಂಎಎಚ್‌/ 5000 ಎಂಎಎಚ್‌ ಬ್ಯಾಟರಿ, 45 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌

* 128 ಜಿಬಿ ಸಂಗ್ರಹ ಸಾಮರ್ಥ್ಯ (ಮೈಕ್ರೊಎಸ್‌ಡಿ ಕಾರ್ಡ್‌ ಮೂಲಕ 1 ಟಿಬಿ ವರೆಗೂ ವಿಸ್ತರಿಸುವ ಅವಕಾಶ)

* ರ್‍ಯಾಮ್‌: 8 ಜಿಬಿ/ 12 ಜಿಬಿ

* ಡಿಸ್‌ಪ್ಲೇ: 6.2 / 6.7/ 6.9 ಇಂಚು ಕ್ಯುಎಚ್‌ಡಿ ಡೈನಾಮಿಕ್‌ ಅಮೋಲೆಡ್‌ ಡಿಸ್‌ಪ್ಲೇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.