ADVERTISEMENT

ಏನಿದು ಸಂಚಾರ್ ಸಾಥಿ ಆ್ಯಪ್: ಎಲ್ಲಾ ಮೊಬೈಲ್‌ಗಳಲ್ಲಿ ಕಡ್ಡಾಯ ಎಂದಿದ್ದೇಕೆ ಸರ್ಕಾರ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಡಿಸೆಂಬರ್ 2025, 15:58 IST
Last Updated 1 ಡಿಸೆಂಬರ್ 2025, 15:58 IST
   

ಹೊಸದಾಗಿ ತಯಾರಿಸುವ ಎಲ್ಲಾ ಮೊಬೈಲ್‌ಗಳಲ್ಲಿ ಸರ್ಕಾರಿ ಒಡೆತನದ ಸೈಬರ್ ಸೆಕ್ಯೂರಿಟಿ ಆ್ಯಪ್ ‘ಸಂಚಾರ್ ಸಾಥಿ’ಯನ್ನು ಪ್ರಿ ಇನ್‌ಸ್ಟಾಲ್ ಮಾಡಬೇಕು ಎಂದು ಆ್ಯಪಲ್, ಸ್ಯಾಮ್‌ಸಂಗ್, ವಿವೋ ಹಾಗೂ ಓಪ್ಪೋ ಸಹಿತ ಪ್ರಮುಖ ಸ್ಮಾರ್ಟ್ ಫೋನ್ ತಯಾರಕರಿಗೆ ಕೇಂದ್ರ ದೂರಸಂಪರ್ಕ ಸಚಿವಾಲಯ ನಿರ್ದೇಶನ ನೀಡಿದೆ.

ಈ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಲು 90 ದಿನಗಳನ್ನು ನೀಡಲಾಗಿದ್ದು, ಅದನ್ನು ಅನ್‌ ಇನ್‌ಸ್ಟಾಲ್ ಮಾಡುವ ಆಯ್ಕೆ ನೀಡಬಾರದು ಎಂದು ಸಚಿವಾಲಯ ಆದೇಶದಲ್ಲಿ ಹೇಳಿದೆ.

ಈಗಾಗಲೇ ಬಳಕೆಯಲ್ಲಿರುವ ಮೊಬೈಲ್‌ಗಳಿಗೆ ಸಾಫ್ಟ್‌ವೇರ್ ಅಪ್ಡೇಟ್ ಮೂಲಕ ಈ ಆ್ಯಪ್ ಲಭ್ಯವಾಗುವಂತೆ ಮಾಡಬೇಕು ಎಂದು ಸೂಚನೆ ನೀಡಿದೆ. ಈ ಆದೇಶವನ್ನು ಬಹಿರಂಗಗೊಳಿಸದೆ, ಸ್ಮಾರ್ಟ್‌ಫೋನ್ ತಯಾರಕರಿಗೆ ಖಾಸಗಿಯಾಗಿ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

ADVERTISEMENT

ಏನಿದು ಸಂಚಾರ್ ಸಾಥಿ ಆ್ಯಪ್?

2023ರಲ್ಲಿ ಪರಿಚಯಿಸಿದ ಸಂಚಾರ್ ಸಾಥಿ ವೆಬ್‌ಸೈಟ್‌ನ ಮುಂದುವರಿದ ಆವೃತ್ತಿಯೇ ಈ ಹೊಸ ಆ್ಯಪ್. ಈ ವರ್ಷದ ಜನವರಿಯಲ್ಲಿ ದೂರಸಂಪರ್ಕ ಇಲಾಖೆಯು ಆಂಡ್ರಾಯ್ಡ್ ಹಾಗೂ ಐಒಎಸ್ ಬಳಕೆದಾರರಿಗೆ ಈ ಆ್ಯಪ್ ಅನ್ನು ಬಿಡುಗಡೆ ಮಾಡಿತ್ತು.

ಈ ಆ್ಯಪ್‌ ಅಳವಡಿಸಿದ ಬಳಿಕ ಮೊಬೈಲ್ ಕಳೆದು ಹೋದರೆ ಅಥವಾ ಕಳ್ಳತನವಾದರೆ ಬಳಕೆದಾರರು ಯಾವುದೇ ನೆಟ್‌ವರ್ಕ್ ಇದ್ದರೂ ಮೊಬೈಲ್ ಅನ್ನು ಬ್ಲಾಕ್ ಮಾಡಬಹುದು. ಬ್ಲಾಕ್ ಆದ ಬಳಿಕ ದೇಶದ ಯಾವುದೇ ಭಾಗದಲ್ಲಿ ಮೊಬೈಲ್ ಬಳಕೆಯಾದರೂ, ಕಾನೂನು ಜಾರಿ ಸಂಸ್ಥೆಗಳಿಗೆ ತಿಳಿಯಲಿದೆ.

ಈ ಆ್ಯಪ್‌ನಲ್ಲಿ ‘ಚಕಾಸು’ (ವಂಚನೆ ಎಂದು ಬಳಕೆದಾರರಿಗೆ ತಿಳಿದು ಬಂದರೆ ರಿಪೋರ್ಟ್ ಮಾಡುವ ವ್ಯವಸ್ಥೆ) ಸೌಲಭ್ಯವಿದ್ದು ವಂಚನೆ ಕರೆ, ಸಂದೇಶ ಹಾಗೂ ವಾಟ್ಸ್‌ಆ್ಯಪ್ ಸಂದೇಶಗಳನ್ನು ಬ್ಲಾಕ್ ಮಾಡಬಹುದು.

ಜೊತೆಗೆ ನಿಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಸಂಖ್ಯೆಗಳನ್ನೂ ಇದರಲ್ಲಿ ಪರಿಶೀಲನೆ ಮಾಡಬಹುದು. ಅನಧೀಕೃತ ನೋಂದಣಿ ಬಗ್ಗೆ ವರದಿ ಮಾಡಬಹುದು.

ಇದರಲ್ಲಿ ನೊ ಯುವರ್ ಮೊಬೈಲ್ (ಕೆವೈಎಂ) ಎನ್ನುವ ಆಯ್ಕೆ ಇದ್ದು, ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳ ಅಧಿಕೃತತೆಯನ್ನು ಪರಿಶೀಲಿಸಬಹುದು.

ಎಲ್ಲಾ ಪ್ರಮಖ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿ ಈ ಆ್ಯಪ್‌ ಇನ್‌ಸ್ಟಾಲ್ ಮಾಡುವ ಮೂಲಕ, ಸೈಬರ್ ಅಪರಾಧ, ನಕಲಿ ಐಇಎಂಐ ಸಂಖ್ಯೆ ಬಳಸಿ ಹಗರಣ ಮಾಡುವುದನ್ನು ತಡೆಯುವ ಉದ್ದೇಶ ಸರ್ಕಾರ ಹೊಂದಿದೆ.

ಈ ಆ್ಯಪ್ 50 ಲಕ್ಷಕ್ಕೂ ಅಧಿಕ ಡೌನ್‌ಲೋಡ್ ಆಗಿದ್ದು, 37 ಲಕ್ಷಕ್ಕೂ ಅಧಿಕ ಕಳ್ಳತನ ಅಥವಾ ಕಳೆದುಹೋದ ಮೊಬೈಲ್ ಪತ್ತೆಗೆ ಹಾಗೂ 3 ಕೋಟಿಗೂ ಅಧಿಕ ನಕಲಿ ನೋಂದಣಿಯನ್ನು ರದ್ದು ಮಾಡಲು ಸಹಾಯಕವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.