ADVERTISEMENT

ವಿಡಿಯೊ ಮೀಟಿಂಗ್‌ ಆ್ಯಪ್ ಗೂಗಲ್‌ ಮೀಟ್: 5 ಕೋಟಿ ಬಾರಿ ಡೌನ್‌ಲೋಡ್–ಬಳಕೆ ಹೇಗೆ?

ಏಜೆನ್ಸೀಸ್
Published 19 ಮೇ 2020, 10:38 IST
Last Updated 19 ಮೇ 2020, 10:38 IST
ವಿಡಿಯೊ ಮೀಟಿಂಗ್‌ ಆ್ಯಪ್ ಗೂಗಲ್‌ ಮೀಟ್
ವಿಡಿಯೊ ಮೀಟಿಂಗ್‌ ಆ್ಯಪ್ ಗೂಗಲ್‌ ಮೀಟ್   
""

ಬೆಂಗಳೂರು: ಲಾಕ್‌ಡೌನ್‌ ಘೋಷಣೆಯಾದ ನಂತರದಲ್ಲಿ ಗೂಗಲ್‌ನ ವಿಡಿಯೊ ಕಾನ್ಫರೆನ್ಸ್‌ ಅಪ್ಲಿಕೇಷನ್‌ 'ಮೀಟ್‌' ಉಚಿತವೆಂದು ಕಂಪನಿ ಪ್ರಕಟಿಸಿತು. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಗೂಗಲ್‌ ಮೀಟ್‌ 5 ಕೋಟಿಗೂ ಹೆಚ್ಚು ಬಾರಿ ಡೌನ್‌ಲೋಡ್‌ ಆಗಿದೆ. ಜಿಮೇಲ್‌ನೊಂದಿಗೆ ಸಂಯೋಜಿಸಲಾಗಿರುವ ಈ ಆ್ಯಪ್‌ ಸುಲಭ ಬಳಕೆ ಆಯ್ಕೆಗಳಿಂದಲೂ ಗಮನ ಸೆಳೆದಿದೆ.

ವಿಡಿಯೊ ಕಾನ್ಫರೆನ್ಸ್ ಆ್ಯಪ್‌ಗಳ ಪೈಕಿ 'ಜೂಮ್‌' ಜಗತ್ತಿನಾದ್ಯಂತ ಬಹುಬೇಗ ಜನಪ್ರಿಯಗೊಂಡಿತು. ಆದರೆ, ಖಾಸಗಿ ವಿವರಗಳ ಸುರಕ್ಷತೆಯ ಕುರಿತು ಮೇಲೆದ್ದ ಅನುಮಾನಗಳಿಂದ ಹಲವು ಮಂದಿ ಜೂಮ್‌ ಬಳಕೆ ನಿಲ್ಲಿಸಿದರು. ಅದೇ ಸಮಯದಲ್ಲಿ ಪರ್ಯಾಯ ಹಾಗೂ ಸುರಕ್ಷಿತ ಆ್ಯಪ್‌ ಆಗಿ ಶಿಕ್ಷಣ ಸಂಸ್ಥೆಗಳು, ಕಾರ್ಪೊರೇಟ್‌ ಕಚೇರಿಗಳನ್ನು ಸೆಳೆದಿದ್ದು ಗೂಗಲ್‌ ಮೀಟ್‌.

ಆ್ಯಪ್‌ಬ್ರೇನ್‌ ವರದಿಯ ಪ್ರಕಾರ, ಮೇ 17ರ ವರೆಗೂ ಪ್ಲೇ ಸ್ಟೋರ್‌ನಿಂದ ಗೂಗಲ್‌ ಮೀಟ್‌ 5 ಕೋಟಿ ಬಾರಿ ಡೌನ್‌ಲೋಡ್‌ ಆಗಿದೆ. ಮಾರ್ಚ್‌ ಮೊದಲ ವಾರದ ವರೆಗೂ ಇದೇ ಆ್ಯಪ್‌ 50 ಲಕ್ಷ ಬಾರಿ ಡೌನ್‌ಲೋಡ್‌ ಆಗಿತ್ತು. ಅಂದರೆ, ಎರಡು ತಿಂಗಳ ಅಂತರದಲ್ಲಿ ಈ ಆ್ಯಪ್‌ ಬಳಸುವವರ ಸಂಖ್ಯೆ 4.5 ಕೋಟಿಯಷ್ಟು ಹೆಚ್ಚಿದೆ.

ADVERTISEMENT

ಪಾವತಿ ಮಾಡಿದ ಬಿಸಿನೆಸ್‌ ಮೀಟಿಂಗ್‌ಗಳಿಗೆ ಮಾತ್ರ ಗೂಗಲ್‌ ಮೀಟ್‌ ಬಳಕೆಯಾಗುತ್ತಿತ್ತು. ಅದರ ಪ್ರೋಗ್ರಾಮ್‌ನಲ್ಲಿ ಕೆಲವು ಬದಲಾವಣೆಗಳೊಂದಿಗೆ ಗೂಗಲ್‌, ಆ್ಯಪ್‌ನ್ನು ಎಲ್ಲರಿಗೂ ಉಚಿತವಾಗಿ ಸಿಗುವಂತೆ ಮಾಡಿತು. ಜಿ ಸ್ಯೂಟ್‌ ಬಳಸುವ ಎಲ್ಲರಿಗೂ ಅತ್ಯಾಧುನಿಕ ಮೀಟ್‌ ಆಯ್ಕೆಗಳನ್ನು ಉಚಿತವಾಗಿ ನೀಡಿತು. ಮಾರ್ಚ್‌ನಲ್ಲಿ ನಿತ್ಯ ಬಳಕೆದಾರರ ಸಂಖ್ಯೆ 30 ಪಟ್ಟು ಹೆಚ್ಚುವ ಮೂಲಕ ದಿನವೂ 300 ಕೋಟಿ ನಿಮಿಷಗಳ ವಿಡಿಯೊ ಮೀಟಿಂಗ್‌ ದಾಖಲಾಯಿತು. ಏಪ್ರಿಲ್‌ನಲ್ಲಿ ನಿತ್ಯವು 30 ಲಕ್ಷ ಹೊಸ ಬಳಕೆದಾರರು ಸೇರ್ಪಡೆಯಾದರು. ಹಾಗಾಗಿಯೇ ಉಚಿತ ಸೇವೆಯನ್ನು ಜಗತ್ತಿನಾದ್ಯಂತ ವಿಸ್ತರಿಸುತ್ತಿರುವುದಾಗಿ ಉಪಾಧ್ಯಕ್ಷ ಜೇವಿಯರ್‌ ಸಾಲ್ಟೆರೊ ಹೇಳಿರುವುದಾಗಿ ಜಿ ಸ್ಯೂಟ್‌ ಬ್ಲಾಗ್‌ನಲ್ಲಿ ಪ್ರಕಟಿಸಿದೆ.

ಗೂಗಲ್‌ ಮೀಟ್‌ ಬಳಕೆ ಹೇಗೆ?

* ಜಿಮೇಲ್‌ ಅಕೌಂಟ್‌ ಹೊಂದಿದ್ದರೆ ಗೂಗಲ್‌ ಮೀಟ್‌ ಬಳಕೆ ಸುಲಭವಾಗಲಿದೆ. ಜಿಮೇಲ್‌ನೊಂದಿಗೆ ಮೀಟ್‌ ಸಂಯೋಜಿಸಲಾಗಿದೆ.

* ಜಿಮೇಲ್‌ನಲ್ಲಿ ಎಡಭಾಗದಲ್ಲಿರುವ ಡ್ರಾಫ್ಟ್ಸ್‌ ಕೆಳಭಾಗದಲ್ಲಿ ಮೀಟ್‌ ಎಂಬ ಹೊಸ ಆಯ್ಕೆ ಸೇರ್ಪಡೆಯಾಗಿದೆ. ಸ್ಟಾರ್ಟ್‌ ಎ ಮೀಟಿಂಗ್‌ (Start a Meeting) ಹಾಗೂ ಜಾಯಿನ್‌ ಎ ಮೀಟಿಂಗ್‌ (Join a Meeting) ಎರಡು ಆಯ್ಕೆಗಳು ಕಾಣಸಿಗುತ್ತವೆ.

* ಕಂಪನಿ, ಸಂಸ್ಥೆಗಳು ಅಥವಾ ಸ್ನೇಹಿತರು ಮೀಟಿಂಗ್‌ ಆಯೋಜಿಸಿದ್ದರೆ, ಜಾಯಿನ್‌ ಮೀಟಿಂಗ್‌ ಆಯ್ಕೆ ಮೂಲಕ ಸಭೆಗೆ ಸೇರ್ಪಡೆಯಾಗಬಹುದು. ಹೊಸದಾಗಿ ಮೀಟಿಂಗ್‌ ಶುರು ಮಾಡಬೇಕಿದ್ದರೆ, ಸ್ಟಾರ್ಟ್‌ ಮೀಟಿಂಗ್‌ ಆಯ್ಕೆ ಬಳಸಬೇಕು.

* ಪ್ಲೇ ಸ್ಟೋರ್‌ನಿಂದ ಪ್ರತ್ಯೇಕ ಗೂಗಲ್‌ ಮೀಟ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಬಳಸಬಹುದು.

* ಆ್ಯಪ್‌ ತೆರೆದು ಅಲ್ಲಿ ಪ್ಲಸ್‌(+) ಚಿನ್ಹೆ ಮೇಲೆ ಕ್ಲಿಕ್‌ ಮಾಡಿ ಹೊಸ ಮೀಟಿಂಗ್ ಆರಂಭಿಸಬಹುದು ಅಥವಾ ಬೇರೆಯವರು ಮೀಟಿಂಗ್‌ ಕೋಡ್‌ ಕಳುಹಿಸಿದ್ದರೆ, ಅದನ್ನು ನಮೂದಿಸಿ ಮುಂದುವರಿಯಬಹುದು.

* ಗೂಗಲ್‌ ಕ್ಯಾಲೆಂಡ್‌ರನಲ್ಲಿ ಮೀಟಿಂಗ್‌ ನಡೆಯುವ ಸಮಯ, ದಿನಾಂಕದಲ್ಲಿ ಶೆಡ್ಯೂಲ್‌ ಮಾಡಬಹುದು.

* ಗೂಗಲ್‌ ಮೀಟ್‌ನಲ್ಲಿ ಶೆಡ್ಯೂಲಿಂಗ್‌ ಹಾಗೂ ಶೇರಿಂಗ್‌ ಸ್ಕ್ರೀನ್‌ ಆಯ್ಕೆಗಳಿವೆ.

* ಗರಿಷ್ಠ 250 ಮಂದಿ ವಿಡಿಯೊ ಮೀಟಿಂಗ್‌ನಲ್ಲಿ ಭಾಗಿಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.