ಬೆಂಗಳೂರು: ಚೀನಾದ ಸ್ಮಾರ್ಟ್‌ಫೋನ್ ಕಂಪನಿ ಶಓಮಿ ಇಂಡಿಯಾ, ಜಾಗತಿಕ ಮಾರುಕಟ್ಟೆಗೆ ರೆಡ್‌ಮಿ 14ಸಿ 5ಜಿ ಹೆಸರಿನ ಹೊಸ ಸ್ಮಾರ್ಟ್‌ಫೋನನ್ನು ಗುರುವಾರ ಬಿಡುಗಡೆ ಮಾಡಿದೆ.
ರೆಡ್‌ಮಿ ನೋಟ್ 14 5ಜಿ ಸರಣಿಯ ಯಶಸ್ಸಿನ ಹಿನ್ನೆಲೆಯಲ್ಲಿ ರೆಡ್‌ಮಿ 14ಸಿ 5ಜಿ ಅನ್ನು ಬಿಡುಗಡೆ ಮಾಡಿದೆ. ಇದು ಬಜೆಟ್ ಸ್ನೇಹಿ ಮೊಬೈಲ್ ಆಗಿದೆ ಎಂದು ಕಂಪನಿ ಹೇಳಿದೆ.
ಈ ಸ್ಮಾರ್ಟ್‌ಫೋನ್ 17.5 ಸೆಂ.ಮೀ (6.88 ಇಂಚು) ಎಚ್‌ಡಿ+ ಡಾಟ್ ಡ್ರಾಪ್ ಡಿಸ್‌ಪ್ಲೇ ಹೊಂದಿದೆ. ಗರಿಷ್ಠ ಬ್ರೈಟ್‌ನೆಸ್ 600 ನಿಟ್ಸ್ ಆಗಿದೆ. ಹೀಗಾಗಿ, ಇದು ಸ್ಟ್ರೀಮಿಂಗ್, ಗೇಮಿಂಗ್ ಅಥವಾ ಬ್ರೌಸಿಂಗ್‌ನಲ್ಲಿ ಉತ್ತಮ ವೀಕ್ಷಣೆಯ ಅನುಭವ ನೀಡಲಿದೆ ಎಂದು ತಿಳಿಸಿದೆ.
ಸ್ನ್ಯಾಪ್‌ಡ್ರ್ಯಾಗನ್ 4 ಜೆನ್ 2 5ಜಿ ಪ್ರೊಸೆಸರ್ ಅನ್ನು ಹೊಂದಿರುವ ಇದು 4ಎನ್‌ಎಮ್ ಆರ್ಕಿಟೆಕ್ಚರ್‌ನಲ್ಲಿ ತಯಾರಿಸಲಾಗಿದೆ. ಹೀಗಾಗಿ ಉತ್ತಮ ಕಾರ್ಯಕ್ಷಮತೆ ಒದಗಿಸುತ್ತದೆ. 12ಜಿಬಿ ರ್‍ಯಾಮ್ (6 ಜಿಬಿ + 6 ಜಿಬಿ ಎಕ್ಸ್‌ಟೆಂಡೆಡ್) ಮತ್ತು 128 ಜಿಬಿ ಯುಎಫ್‌ಎಸ್ 2.2 ಸ್ಟೋರೇಜ್ ಅನ್ನು ಹೊಂದಿದೆ.
ಮಲ್ಟಿಟಾಸ್ಕಿಂಗ್, ಗೇಮಿಂಗ್ ಮತ್ತು ಆ್ಯಪ್ ನ್ಯಾವಿಗೇಶನ್ ಅನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ. ಜೊತೆಗೆ, ಇದರಲ್ಲಿರುವ ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್, 1 ಟಿಬಿ ವರೆಗೆ ವಿಸ್ತರಿಸಬಹುದಾಗಿದೆ.
50 ಎಂಪಿ ಎ.ಐ ಡ್ಯುಯೆಲ್ ಕ್ಯಾಮೆರಾ, 5160 ಎಂಎಎಚ್ ಬ್ಯಾಟರಿ ಮತ್ತು 18 ವಾಟ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ. ಎರಡು ವರ್ಷಗಳ ಆಂಡ್ರಾಯ್ಡ್ ಅಪ್‌ಡೇಟ್‌ಗಳು ಮತ್ತು ನಾಲ್ಕು ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್ ಸೌಲಭ್ಯ ಒದಗಿಸುತ್ತದೆ.
ಜನವರಿ 10ರಿಂದ ಈ ಸ್ಮಾರ್ಟ್‌ಫೋನ್ Mi.com, Amazon.in, ಫ್ಲಿಪ್‌ಕಾರ್ಟ್ ಮತ್ತು ಅಧಿಕೃತ ಶಓಮಿ ರಿಟೇಲ್ ಮಳಿಗೆಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ.
4 ಜಿಬಿ + 64 ಜಿಬಿ ವೇರಿಯಂಟ್‌ಗೆ ₹9,999, 4ಜಿಬಿ + 128ಜಿಬಿಗೆ ₹10,999 ಹಾಗೂ 6 ಜಿಬಿ + 128 ಜಿಬಿ ವೇರಿಯಂಟ್ ಬೆಲೆ ₹11,999 ಆಗಿದೆ.
ರೆಡ್‌ಮಿ ನೋಟ್ 14 5ಜಿ ಸರಣಿಯ ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ಕೇವಲ ಎರಡು ವಾರಗಳಲ್ಲಿ ಭಾರತದಲ್ಲಿ ₹1 ಸಾವಿರ ಕೋಟಿ ಆದಾಯ ಗಳಿಸಲಾಗಿದೆ. ಇದು ಕಂಪನಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಗ್ರಾಹಕರು ಇಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಶಓಮಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.