ADVERTISEMENT

ಮನರಂಜನೆಗೆ ಯೋಗ್ಯ ‘OnePlus Nord Buds 2r’

ವಿಶ್ವನಾಥ ಎಸ್.
Published 12 ಆಗಸ್ಟ್ 2023, 16:05 IST
Last Updated 12 ಆಗಸ್ಟ್ 2023, 16:05 IST
ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 2ಆರ್
ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 2ಆರ್   

ಸ್ಮಾರ್ಟ್‌ ಸಾಧನಗಳಲ್ಲಿ ಒನ್‌ಪ್ಲಸ್‌ ಕಂಪನಿಯು ಈಚೆಗೆ ‘ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 2ಅರ್‌’ (OnePlus Nord Buds 2r) ಬಿಡುಗಡೆ ಮಾಡಿದೆ. ಬ್ಯಾಟರಿ ಬಾಳಿಕೆ, ಆಡಿಯೊ ಗುಣಮಟ್ಟ ಮತ್ತು ಕನೆಕ್ಟಿವಿಟಿ ದೃಷ್ಟಿಯಿಂದ ಉತ್ತಮವಾಗಿದೆ.

ಬ್ಲೂಟೂತ್‌ 5.3 ಆವೃತ್ತಿ ಇದ್ದು, ಸುಲಭವಾಗಿ ಮೊಬೈಲ್‌ ಜೊತೆ ಸಂಪರ್ಕಿಸಬಹುದು. ಒನ್‌ಪ್ಲಸ್‌ ಫೋನ್‌ ಜೊತೆ ಇದನ್ನು ಬಳಸುವುದಾದರೆ ಸೆಟ್ಟಿಂಗ್ಸ್‌ನಲ್ಲಿ ಹೆಚ್ಚು ಬದಲಾವಣೆ ಅಗತ್ಯ ಇಲ್ಲ. ಬ್ಯಾಲೆನ್ಸ್ಡ್‌, ಬಾಸ್‌ ಮತ್ತು ಬೋಲ್ಡ್‌ ಮೋಡ್‌ಗಳನ್ನು ಹೊಂದಿಸಿಕೊಳ್ಳುವ ಜೊತೆಗೆ ಹಲವು ಕಸ್ಟಮ್ ಈಕ್ವಲೈಸರ್‌ ಪ್ರೊಫೈಲ್‌ಗಳಿವೆ. ಬೇರೆ ಫೋನ್‌ಗಳ ಜೊತೆ ಬಳಸಲು ಹೇ-ಮೆಲೋಡಿ (HeyMelody) ಆ್ಯಪ್‌ ಡೌನ್ಲೋಡ್‌ ಮಾಡಿಕೊಳ್ಳಬೇಕು. ನಾಯ್ಸ್‌ ಕಂಟ್ರೋಲ್‌, ಕ್ಯಾಮೆರಾ ಕಂಟ್ರೋಲ್‌, ಗೇಮ್‌ ಮೋಡ್‌ಗೆ ಸಂಬಂಧಿಸಿದ ಹೆಚ್ಚಿನ ಸೆಟ್ಟಿಂಗ್ಸ್‌ಗಳನ್ನು ಆ್ಯಪ್‌ ಮೂಲಕ ನಿರ್ವಹಿಸಬಹುದು.

ಇದರ ಚಾರ್ಜಿಂಗ್‌ ಕೇಸ್‌ 38.1 ಗ್ರಾಂ ತೂಕ ಇದ್ದರೆ, ಇಯರ್‌ಬಡ್ಸ್‌ಗಳ ತೂಕ 4.3 ಗ್ರಾಂನಷ್ಟು ಇದೆ. ಒಂದು ಬಡ್‌ನಲ್ಲಿ ತಲಾ ಎರಡರಂತೆ ಒಟ್ಟು ನಾಲ್ಕು ಮೈಕ್ರೊಪೋನ್‌ಗಳಿವೆ. ಯುಎಸ್‌ಬಿ ಟೈಪ್‌ ಸಿ ಚಾರ್ಜಿಂಗ್‌ ವ್ಯವಸ್ಥೆ ಹೊಂದಿದೆ. ಚಾರ್ಜಿಂಗ್‌ ಕೇಸ್‌ 480 ಎಂಎಎಚ್‌ ಮತ್ತು ಇಯರ್‌ ಬಡ್‌ ಒಂದರ ಬ್ಯಾಟರಿ 36 ಎಂಎಎಚ್‌ ಇದೆ. ಪೂರ್ತಿ ಚಾರ್ಜ್‌ ಮಾಡಿದರೆ 8 ಗಂಟೆವರೆಗೆ ಬಳಸಬಹುದು. ಚಾರ್ಜಿಂಗ್‌ ಕೇಸ್‌ನಲ್ಲಿ ಇದ್ದರೆ 38ಗಂಟೆಯವರೆಗೆ ಬಳಸಬಹುದು. ಬ್ಯಾಟರಿ ಬಾಳಿಕೆ ಉತ್ತಮವಾಗಿದೆ. ನೀರು ಮತ್ತು ಧೂಳಿನಿಂದ ರಕ್ಷಣೆಗೆ ಐಪಿ55 ರೇಟಿಂಗ್ಸ್ ಇದೆ.

ADVERTISEMENT

ಟಚ್‌ ಕಂಟ್ರೋಲ್‌ ಬಳಕೆ ಸುಲಭವಾಗಿದೆ. ಬಡ್ಸ್‌ ಮೇಲೆ ಟ್ಯಾಪ್‌ ಮಾಡುವ ಮೂಲಕ ಮ್ಯೂಸಿಕ್‌ ಪ್ಲೇ/ಪಾಸ್‌ ಮಾಡಲು, ಮುಂದಿನ ಟ್ರ್ಯಾಕ್‌ಗೆ ಹೋಗಲು, ಕರೆ ಸ್ವೀಕರಿಸುವ/ಕಟ್‌ ಮಾಡುವುದನ್ನು ನಿರ್ವಹಿಸಬಹುದು. ಸಣ್ಣ, ಮಧ್ಯಮ ಮತ್ತು ದೊಡ್ಡ ಹೀಗೆ ಮೂರು ಗಾತ್ರದ ಇಯರ್‌ಟಿಪ್‌ಗಳು ಇರುವುದರಿಂದ ಕಿವಿಯ ಗಾತ್ರಕ್ಕೆ ಅನುಗುಣವಾಗಿ ಬಳಸಬಹುದು. ಫೋನ್‌ ಇರುವಲ್ಲಿಂದ 10ಮೀಟರ್‌ ವ್ಯಾಪ್ತಿಯಲ್ಲಿ ಹಾಡು ಕೇಳಲು, ಮಾತನಾಡಲು ಬಳಸಬಹುದು.

ಡ್ಯುಯಲ್‌ ಮೈಕ್‌ ಇದ್ದು, ಆಡಿಯೊ ಗುಣಮಟ್ಟ ಚೆನ್ನಾಗಿದೆ. ಡಾಲ್ಬಿ ಅಟ್ಮೋಸ್‌ ಸ್ಪೀಕರ್ ಬಳಸಿರುವುದರಿಂದ ಸಂಗೀತ ಆಲಿಸುವಾಗ ಮತ್ತು ಫೋನ್‌ನಲ್ಲಿ ಮಾತನಾಡುವಾಗ ಆಡಿಯೊ ಗುಣಮಟ್ಟ ಉತ್ತಮವಾಗಿದೆ. ಕಾಲ್‌ ಮಾಡಿದಾಗ/ಸ್ವೀಕರಿಸಿದಾಗ ಧ್ವನಿಯ ಸ್ಪಷ್ಟವಾಗಿ ಇರುವಂತೆ ಮಾಡಲು ಎಐ ಕ್ಲಿಯರ್‌ ಕಾಲಿಂಗ್‌ ಅಲ್ಗಾರಿದಂ ಬಳಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಕರೆ ಮಾಡಿದಾಗ ಅಥವಾ ಸ್ವೀಕರಿಸಿದಾಗ ನಮ್ಮ ಧ್ವನಿಯು ಫೋನಿನ ಇನ್ನೊಂದು ತುದಿಯಲ್ಲಿ ಇರುವವರಿಗೆ ಸ್ಪಷ್ಟವಾಗಿ ಕೇಳಿಸುವುದಿಲ್ಲ. ಹಾಗೆಂದು ಮನೆಯಲ್ಲಿ ಇದ್ದಾಗ ಬಡ್ಸ್ ಕನೆಕ್ಟ್‌ ಮಾಡಿಕೊಂಡು ಫೋನ್‌ನಲ್ಲಿ ಮಾತನಾಡಲು ಯಾವುದೇ ಸಮಸ್ಯೆ ಆಗುವುದಿಲ್ಲ. ಹೀಗಾಗಿ ಮನರಂಜನೆ ದೃಷ್ಟಿಯಿಂದ ಉತ್ತಮ ಬಡ್ಸ್‌ ಇದಾಗಿದ್ದು, ಬೆಲೆ ₹2,199.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.