ADVERTISEMENT

ದೀರ್ಘ ಬ್ಯಾಟರಿ ಬಾಳಿಕೆಯ ‘ಪಿಟ್ರಾನ್‌ ಬಾಸ್‌ಬಡ್ಸ್‌ ಎನ್‌ವೈಎಕ್ಸ್‌’

ವಿಶ್ವನಾಥ ಎಸ್.
Published 5 ಜನವರಿ 2023, 16:09 IST
Last Updated 5 ಜನವರಿ 2023, 16:09 IST
ಪಿಟ್ರಾನ್‌ ಬಾಸ್‌ಬಡ್ಸ್‌ ಎನ್‌ವೈಎಕ್ಸ್
ಪಿಟ್ರಾನ್‌ ಬಾಸ್‌ಬಡ್ಸ್‌ ಎನ್‌ವೈಎಕ್ಸ್   

ಪಿಟ್ರಾನ್‌ ಕಂಪನಿ ಈಚೆಗೆ ಬಿಡುಗಡೆ ಮಾಡಿರುವ ‘ಬಾಸ್‌ಬಡ್ಸ್‌ ಎನ್‌ವೈಎಕ್ಸ್‌’ ನೋಡಲು ಆಕರ್ಷವಾಗಿದ್ದು, ಈ ಹಿಂದಿನ ಎಲ್ಲಾ ಬಡ್ಸ್‌ಗಳಿಗಿಂತಲೂ ಭಿನ್ನವಾಗಿದೆ. ಪಾರದರ್ಶಕವಾದ ಕೇಸ್‌ ಹೊಂದಿದ್ದು, ಚಾರ್ಜ್‌ ಎಷ್ಟು ಉಳಿದಿದೆ, ಎಷ್ಟು ಪ್ರಮಾಣದಲ್ಲಿ ಚಾರ್ಜ್‌ ಆಗುತ್ತಿದೆ ಎನ್ನುವುದನ್ನು ತೋರಿಸಲು ಡಿಜಿಟಲ್‌ ಡಿಸ್‌ಪ್ಲೇ ನೀಡಲಾಗಿದೆ. ಇದು ಹೆಚ್ಚು ಉಪಯುಕ್ತ ಅನ್ನಿಸಿತು. ಅಮೆಜಾನ್‌ನಲ್ಲಿ ಇದರ ಬೆಲೆ ₹1,299.

ಬ್ಲುಟೂತ್‌ 5.1 ಆವೃತ್ತಿ ಹೊಂದಿದ್ದು, ಫೋನ್‌ ಜೊತೆ ಬಹಳ ಸುಲಭವಾಗಿ ಸಂಪರ್ಕಿಸಬಹುದು. ಫೋನ್‌ ಜೊತೆ ಪೇರ್ ಮಾಡುವಾಗ ‘ಪವರ್‌ ಆನ್‌, ಪೇರಿಂಗ್’ ಎನ್ನುವ ಧ್ವನಿ ಕೇಳಿಸುತ್ತದೆ. ಅದೇ ರೀತಿ ಬಡ್ಸ್‌ ಅನ್ನು ಕಿವಿಗೆ ಇಟ್ಟುಕೊಂಡು ಮೊಬೈಲ್‌ಗೆ ಸಂಪರ್ಕಿಸುವಾಗಲೂ ‘ಪಿಟ್ರಾನ್‌ ಬಾಸ್‌ಬಡ್ಸ್‌ ಕನೆಕ್ಟೆಡ್‌’ ಎನ್ನುವ ಧ್ವನಿ ಬರುತ್ತದೆ. ಟಚ್‌ ಮೂಲಕ ಕಾಲ್‌ ರಿಸೀವ್‌/ರಿಜೆಕ್ಟ್‌ ಮಾಡಬಹುದು. ವಾಲ್ಯುಂ ಕಂಟ್ರೋಲ್‌ ಹಾಗೂ ಮ್ಯೂಸಿಕ್‌ ಪ್ಲೇ/ಪಾಸ್‌ ಕೂಡಾ ಮಾಡಬಹುದು. ನೀರು ಮತ್ತು ಬೆವರಿನಿಂದ ರಕ್ಷಣೆಗೆ ಐಪಿಎಕ್ಸ್‌4 ರೇಟಿಂಗ್‌ ಹೊಂದಿದೆ. ಇದರಲ್ಲಿ ಇಯರ್‌ ಟಿಪ್‌ ಇಲ್ಲದೇ ಇರುವುದರಿಂದ ಬಡ್ಸ್‌ಗಳು ಕಿವಿಯಲ್ಲಿ ಗಟ್ಟಿಯಾಗಿ ಕೂರುವುದಿಲ್ಲ. ಒಂದು ಗಂಟೆಗಿಂತ ಹೆಚ್ಚು ಹೊತ್ತು ಹಾಕಿಕೊಂಡಿದ್ದರೆ ಕಿವಿ ನೋಯುತ್ತದೆ.

ವಿಡಿಯೊ, ಆಡಿಯೊ ಗುಣಮಟ್ಟ ಚೆನ್ನಾಗಿದೆ, ಸ್ಪಷ್ಟವಾಗಿದೆ. ಸಂಗೀತ ಆಲಿಸಲು ಈ ಬಾಸ್‌ಬಡ್ಸ್ ಹೆಚ್ಚು ಸೂಕ್ತವಾಗಿದೆ. ಕಾಲ್‌ ರಿಸೀವ್‌ ಮಾಡಿ ಮಾತನಾಡಲು ಮನೆಯ ಒಳಗಡೆ, ಹಾಗು ಹೆಚ್ಚು ಗದ್ದಲ ಇಲ್ಲದ ಸ್ಥಳಗಳಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಡ್ಯುಯಲ್‌ ಮೈಕ್‌ ಒಳಗೊಂಡಿದ್ದು, ಮೊನೊ ಅಥವಾ ಸ್ಟೀರಿಯೊ ಆಗಿ ಬಳಸಬಹುದು. ಅಂದರೆ ಒಂದು ಬಡ್‌ ಅನ್ನು ಮಾತ್ರವೇ ಆನ್‌ ಅಥವಾ ಆಫ್‌ ಮಾಡುವ ವ್ಯವಸ್ಥೆ ಇದೆ. ಬಡ್ಸ್‌ನಲ್ಲಿ ಪಿಟ್ರಾನ್‌ ಲೊಗೊ ಇರುವ ಜಾಗದಲ್ಲಿ ಕೆಲವು ಸೆಕಂಡ್‌ ಒತ್ತಿ ಹಿಡಿದರೆ ಪವರ್‌ ಆಫ್‌ ಆಗುವುದನ್ನು ಧ್ವನಿಯ ಮೂಲಕ ಕೇಳಬಹುದು. ಅದೇ ರೀತಿ ಕೆಲವು ಸೆಕೆಂಡ್‌ ಒತ್ತಿ ಹಿಡಿದರೆ ಮತ್ತೆ ಆನ್‌ ಆಗುತ್ತದೆ. ಬಡ್ಸ್‌ ಅನ್ನು ಕೇಸ್‌ನಲ್ಲಿ ಇಡದೇ ಹೊರಗಡೆ ಇಟ್ಟಾಗಲೂ ಕೆಲವು ಸೆಕಂಡ್‌ ಬಳಿಕ ತನ್ನಷ್ಟಕ್ಕೇ ಪವರ್ ಆಫ್‌ ಆಗುತ್ತದೆ. ಈ ಕಾರಣಗಳಿಂದಾಗಿ ಬ್ಯಾಟರಿ ದೀರ್ಘ ಸಮಯದವರೆಗೆ ಬಾಳಿಕೆ ಬರುತ್ತದೆ.

ADVERTISEMENT

ಪೂರ್ತಿ ಚಾರ್ಜ್‌ ಆಗಲು 1 ಗಂಟೆ ಬೇಕು. ಒಮ್ಮೆ ಚಾರ್ಜ್‌ ಮಾಡಿದರೆ 9 ಗಂಟೆಗಳವರೆಗೆ ಬಳಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಆದರೆ ದಿನಕ್ಕೆ ಸುಮಾರು 2 ಗಂಟೆಯಂತೆ ಸತತವಾಗಿ ಒಂದು ವಾರ ಬಳಸಿದರೂ ಬ್ಯಾಟರಿ ಖಾಲಿ ಆಗಲಿಲ್ಲ. ಯುಎಸ್‌ಬಿ ಚಾರ್ಜಿಂಗ್‌ ಕೇಸ್‌ ಹೊಂದಿದ್ದು, ಸಿ–ಟೈಪ್‌ ಫಾಸ್ಟ್ ಚಾರ್ಜಿಂಗ್‌ ಕೇಬಲ್‌ ಒಳಗೊಂಡಿದೆ. ಒಟ್ಟಾರೆಯಾಗಿ ಬೆಲೆ, ಬ್ಯಾಟರಿ ಬಾಳಿಕೆ ದೃಷ್ಟಿಯಿಂದ ಉತ್ತಮ ಬಡ್ಸ್‌ಗಳ ಸಾಲಿಗೆ ಇದು ಸೇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.