ADVERTISEMENT

ಸ್ಯಾಮ್‌ಸಂಗ್ ಗ್ಯಾಲಕ್ಸಿ Z Flip 5: ಲಂಬವಾಗಿ ಮಡಚಬಲ್ಲ ಸ್ಟೈಲಿಶ್ ಫೋನ್

ಅವಿನಾಶ್ ಬಿ.
Published 23 ಆಗಸ್ಟ್ 2023, 1:23 IST
Last Updated 23 ಆಗಸ್ಟ್ 2023, 1:23 IST
ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫ್ಲಿಪ್ 5
ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫ್ಲಿಪ್ 5   

ಪುಸ್ತಕದಂತೆ ಅಡ್ಡ ಮಡಚಬಲ್ಲ ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫೋಲ್ಡ್ 5ಕ್ಕಿಂತ ಭಿನ್ನವಾಗಿ, ಲಂಬವಾಗಿ ಮಡಚಬಲ್ಲ ಫೋನ್ ಗ್ಯಾಲಕ್ಸಿ ಝಡ್ ಫ್ಲಿಪ್ 5. ಇದು ಇತ್ತೀಚೆಗಷ್ಟೇ ಫೋಲ್ಡ್ 5 ಜೊತೆಗೆಯೇ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಮಡಚಿದಾಗ ಅಥವಾ ಮುಚ್ಚಿದಾಗ ಬಹುತೇಕ ಚೌಕಾಕಾರದಲ್ಲಿರುವ ಈ ಸ್ಮಾರ್ಟ್‌ಫೋನ್ ಹೇಗಿದೆ, ತಿಳಿದುಕೊಳ್ಳೋಣ.

ಪ್ರಮುಖ ವೈಶಿಷ್ಟ್ಯಗಳು:

  • ಪ್ರೊಸೆಸರ್: 2ನೇ ಪೀಳಿಗೆಯ ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 8

  • ಡಿಸ್‌ಪ್ಲೇ: 6.7 ಇಂಚು 2640x1080, 120Hz OLED ಪ್ರಧಾನ ಡಿಸ್‌ಪ್ಲೇ ಹಾಗೂ 3.4 ಇಂಚು 720x748 60Hz OLED ಕವರ್ ಡಿಸ್‌ಪ್ಲೇ (ಮಡಚಿದಾಗ).

    ADVERTISEMENT
  • RAM: 8ಜಿಬಿ

  • ಸ್ಟೋರೇಜ್: 256 ಅಥವಾ 512 ಜಿಬಿ

  • ಬ್ಯಾಟರಿ: 3700 mAh

  • ಪೋರ್ಟ್: ಯುಎಸ್‌ಬಿ-ಸಿ

  • ಕಾರ್ಯಾಚರಣಾ ವ್ಯವಸ್ಥೆ: ಆಂಡ್ರಾಯ್ಡ್ 13 ಆಧಾರಿತ ಒನ್ ಯುಐ 5.1.1

  • ಮುಂಭಾಗದ ಕ್ಯಾಮೆರಾ: 10 ಮೆಗಾಪಿಕ್ಸೆಲ್

  • ಪ್ರಧಾನ ಕ್ಯಾಮೆರಾ: 12 ಮೆಗಾಪಿಕ್ಸೆಲ್ ವೈಡ್ ಆ್ಯಂಗಲ್, 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್

  • ತೂಕ: 187ಗ್ರಾಂ

  • ಲಭ್ಯ ಬಣ್ಣಗಳು: ಗ್ರಾಫೈಟ್, ಕ್ರೀಮ್, ಲ್ಯಾವೆಂಡರ್, ಮಿಂಟ್

ವಿನ್ಯಾಸ, ಸ್ಕ್ರೀನ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫ್ಲಿಪ್ 5 ಹೆಸರಿನಲ್ಲಿ ಈ ಮಾಸಾರಂಭದಲ್ಲಿ ಮಾರುಕಟ್ಟೆಗೆ ಬಂದಿರುವ, ಮೇಲಿನಿಂದ ಕೆಳಕ್ಕೆ ಮಡಚುವ ಫೋನ್ ಕಳೆದ ವರ್ಷದ ಆವೃತ್ತಿಗೆ ಹೋಲಿಸಿದರೆ ಮುಚ್ಚಿದಾಗ ಕವರ್ ಡಿಸ್‌ಪ್ಲೇ ದೊಡ್ಡದಾಗಿರುವುದು ಎದ್ದುಕಂಡ ಅಂಶ. ನೋಡಲು ಆಕರ್ಷಕವಾಗಿದ್ದು, ಕೈಯಲ್ಲಿ ಹಿಡಿದುಕೊಳ್ಳುವ ಅನುಭವ ವಿಶಿಷ್ಟ. ಮಡಚಿದ್ದಾಗ 3.4 ಇಂಚು ಸೂಪರ್ ಅಮೊಲೆಡ್ ಹಾಗೂ 60Hz ರಿಫ್ರೆಶ್ ರೇಟ್ ಇರುವ ಕವರ್ ಡಿಸ್‌ಪ್ಲೇ ಮತ್ತು ತೆರೆದಾಗ 6.7 ಇಂಚಿನ ಸೂಪರ್ ಅಮೊಲೆಡ್, 120Hz ರಿಫ್ರೆಶ್ ರೇಟ್ ಇರುವ ಸ್ಕ್ರೀನ್ ಇಲ್ಲಿದೆ. ಕಳೆದ ಆವೃತ್ತಿಯಲ್ಲಿ ಕವರ್ ಡಿಸ್‌ಪ್ಲೇ ಗಾತ್ರ ಕೇವಲ 1.9 ಇಂಚು ಇತ್ತು. ಈ ಬಾರಿ ಅದರ ವ್ಯಾಪ್ತಿ ವಿಸ್ತರಿಸಲಾಗಿದ್ದು, ನೋಟದಲ್ಲಿ ಕಂಪ್ಯೂಟರಿನ ಫೋಲ್ಡರ್ ಐಕಾನ್ ರೀತಿ ಕಾಣಿಸುತ್ತದೆ. ಇದನ್ನು ಫ್ಲೆಕ್ಸ್ ವಿಂಡೋ ಎಂದು ಸ್ಯಾಮ್‌ಸಂಗ್ ಕರೆದಿದೆ. ವಾಚ್ ಫೇಸ್‌ಗಳ ರೀತಿಯಲ್ಲಿ ಈ ಮಡಚಿದ ಡಿಸ್‌ಪ್ಲೇಯಲ್ಲೂ ನಮಗೆ ಬೇಕಾದ ವಾಲ್‌ಪೇಪರ್ ಅಥವಾ ಥೀಮ್ ಮೂಲಕ ಅಲಂಕರಿಸಿಕೊಳ್ಳಬಹುದು.

ಹಿಂಜ್ (ಬಿಜಾಗಿರಿ)ಯಲ್ಲಿ ಸ್ವಲ್ಪ ಬದಲಾವಣೆ ಮಾಡಿರುವುದರಿಂದಾಗಿ ಝಡ್ ಫ್ಲಿಪ್ 4 ಫೋನ್‌ಗಿಂತ ಗ್ಯಾಲಕ್ಸಿ ಝಡ್ ಫ್ಲಿಪ್ 5 ಫೋನ್ ಕೊಂಚ ತೆಳುವಾಗಿ ಕಾಣಿಸುತ್ತದೆ. ಐಪಿಎಕ್ಸ್8 ರೇಟಿಂಗ್ ಇರುವುದರಿಂದ ಸಾಮಾನ್ಯ ನೀರಿನ ತೋಯುವಿಕೆಯನ್ನು ಇದು ತಾಳಿಕೊಳ್ಳಬಲ್ಲುದು.

ಕವರ್ ಡಿಸ್‌ಪ್ಲೇಯಲ್ಲಿ ಕಾರ್ಡ್ ಮಾದರಿಯ ಸ್ಕ್ರೀನ್ ಲೇಔಟ್‌ಗಳನ್ನು ಒದಗಿಸಲಾಗಿದೆ (ಸ್ಮಾರ್ಟ್ ವಾಚ್‌ಗಳಲ್ಲಿರುವಂತೆ). ಇದರಲ್ಲಿ ಮಡಚಿದ್ದ ಸ್ಥಿತಿಯಲ್ಲಿಯೇ ಸ್ವೈಪ್ ಮಾಡುತ್ತಾ ನಮಗೆ ಬೇಕಾದ ಆ್ಯಪ್ ನೋಡಬಹುದಾಗಿದೆ. ತಕ್ಷಣ ವೀಕ್ಷಣೆಗಾಗಿ ಬೇಕಾಗಿರುವ ಆ್ಯಪ್‌ಗಳನ್ನು ಸೇರಿಸಬಹುದು ಅಥವಾ ತೆಗೆಯಬಹುದಾಗಿದೆ.

ಕ್ಯಾಮೆರಾ

ಹಾರ್ಡ್‌ವೇರ್‌ನಲ್ಲಿ ಕಳೆದ ಬಾರಿಗಿಂತ ಏನೂ ವಿಶೇಷ ಬದಲಾವಣೆ ಕಂಡುಬಂದಿಲ್ಲ. 12 ಮೆಗಾಪಿಕ್ಸೆಲ್ ಸಾಮರ್ಥ್ಯದ, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (ಒಐಎಸ್) ವೈಶಿಷ್ಟ್ಯವಿರುವ ಪ್ರಧಾನ ಕ್ಯಾಮೆರಾ ಹಾಗೂ 12 ಮೆಗಾಪಿಕ್ಸೆಲ್ ಸಾಮರ್ಥ್ಯದ ಅಲ್ಟ್ರಾವೈಡ್ ಕ್ಯಾಮೆರಾ ಸೆನ್ಸರ್ ಇದ್ದು, 10 ಮೆಗಾಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಇದೆ. ವಿಶೇಷವೆಂದರೆ, ಮಡಚಿದ ಸಂದರ್ಭದಲ್ಲಿ ಪ್ರಧಾನ ಕ್ಯಾಮೆರಾವನ್ನೇ ಸೆಲ್ಫಿ ಕ್ಯಾಮೆರಾ ಆಗಿ ಬಳಸಬಹುದು. ಫ್ಲಿಪ್ 5ರಲ್ಲಿ ದೊಡ್ಡ ಕವರ್ ಡಿಸ್‌ಪ್ಲೇ ಇರುವುದರಿಂದ, ಪ್ರಧಾನ ಕ್ಯಾಮೆರಾದಲ್ಲಿ ಸೆಲ್ಫಿ ತೆಗೆಯುವುದು ಮತ್ತಷ್ಟು ಸುಲಭ. ಸೆರೆಹಿಡಿದ ಚಿತ್ರ ಮತ್ತು ವಿಡಿಯೊಗಳ ಗುಣಮಟ್ಟವೂ ಶಾರ್ಪ್ ಆಗಿದ್ದು, ಚಿತ್ರದ ಡೀಟೇಲ್ಸ್ ಚೆನ್ನಾಗಿಯೇ ಮೂಡಿಬರುತ್ತವೆ. ಉತ್ತಮ ಬೆಳಕಿರುವಲ್ಲಿ ಮಾತ್ರವಲ್ಲದೆ, ಬೆಳಕು ಕಡಿಮೆ ಇರುವೆಡೆಗಳಲ್ಲಿ ಕೂಡ ಗುಣಮಟ್ಟ ಕಾಪಾಡಿಕೊಳ್ಳುತ್ತದೆ. 4ಕೆ ಗುಣಮಟ್ಟದ ವಿಡಿಯೊ ರೆಕಾರ್ಡಿಂಗ್ ಚೆನ್ನಾಗಿ ಮೂಡಿಬರುತ್ತದೆ.

ಕಾರ್ಯಾಚರಣೆ

ಆಂಡ್ರಾಯ್ಡ್ 13 ಆಧಾರಿತ ಒನ್ ಯುಐ 5.1.1 ಕಾರ್ಯಾಚರಣೆ ವ್ಯವಸ್ಥೆ ಇದರಲ್ಲಿದ್ದು, ಕಾರ್ಯಾಚರಣೆ ಸುಲಲಿತವಾಗಿದೆ. ಮುಚ್ಚಿರುವಾಗ, ಫ್ಲೆಕ್ಸ್ ವಿಂಡೋದಲ್ಲಿನ ನೋಟಿಫಿಕೇಶನ್ ಕೇವಲ ನೋಡುವುದಷ್ಟೇ ಸಾಧ್ಯ. ಅದನ್ನು ಒತ್ತಿಹಿಡಿದರೆ ಅಥವಾ ಕೆಳಗೆ ಸ್ವೈಪ್ ಮಾಡಿದರೆ ಇದ್ದಂತೆಯೇ ಇರುತ್ತದೆ. ಆದರೆ, ಕ್ಯಾಮೆರಾವನ್ನು ಈ ವಿಂಡೋದಿಂದಲೇ ನಿಭಾಯಿಸಬಹುದು; ವಿಡಿಯೊ, ಫೋಟೊ ಹಾಗೂ ಪೋರ್ಟ್ರೇಟ್ ಫೋಟೊಗಳನ್ನು ಸೆಲ್ಫಿ ರೂಪದಲ್ಲಿ ತೆಗೆಯಬಹುದಾಗಿದೆ.

ಪ್ರಧಾನ ಸ್ಕ್ರೀನ್‌ನಲ್ಲಿ ಯಾವುದೇ ಗೇಮ್ ಆಡುವಾಗ ಅಥವಾ ವಿಡಿಯೊ ಪ್ಲೇ ಮಾಡುವಾಗ ವಿಳಂಬದ (ಲ್ಯಾಗಿಂಗ್) ಅನುಭವ ಬಂದಿಲ್ಲ. ಕೆಲವೊಂದು ಬ್ಲಾಟ್‌ವೇರ್‌ಗಳಿವೆಯಾದರೂ, ಒನ್ ಯುಐ ಸುಲಲಿತವಾಗಿ ಕೆಲಸ ಮಾಡುತ್ತದೆ.

ಬ್ಯಾಟರಿ

3700mAh ಬ್ಯಾಟರಿ ಇದ್ದು, 25W ವೇಗದ ಚಾರ್ಜಿಂಗನ್ನು ಬೆಂಬಲಿಸಬಲ್ಲುದು. ಆದರೆ ಬಾಕ್ಸ್‌ನಲ್ಲಿ ಚಾರ್ಜರ್ ಒದಗಿಸಲಾಗಿಲ್ಲ. 15W ವೈರ್‌ಲೆಸ್ ಚಾರ್ಜಿಂಗನ್ನು ಕೂಡ ಇದು ಬೆಂಬಲಿಸುತ್ತದೆ. ಸಾಮಾನ್ಯ ಕೆಲಸ ಕಾರ್ಯಗಳ ನಿಭಾವಣೆಯ ಸಂದರ್ಭದಲ್ಲಿ ಇಪ್ಪತ್ತನಾಲ್ಕು ಗಂಟೆಗಳ ಕಾಲದ ಬ್ಯಾಟರಿ ಚಾರ್ಜ್‌ಗೆ ಸಮಸ್ಯೆಯಾಗಿಲ್ಲ. ಇದಕ್ಕೆ ಪೂರಕವಾಗಿರುವುದು 2ನೇ ಪೀಳಿಗೆಯ ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 8 ಪ್ರೊಸೆಸರ್.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫ್ಲಿಪ್ 5 ಬೆಲೆ 256ಜಿಬಿ ಆವೃತ್ತಿಗೆ ₹99,999 ಹಾಗೂ 512ಜಿಬಿ ಆವೃತ್ತಿಗೆ ₹1,09,999.

ಒಟ್ಟಾರೆಯಾಗಿ ಹೇಳುವುದಾದರೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫ್ಲಿಪ್ 5 ಜೇಬಿನಲ್ಲಿ ಸುಲಭವಾಗಿ ಕೂರಬಹುದಾದ, ಆಕರ್ಷಕ ನೋಟದ ಮಡಚುವ ಫೋನ್. ಕ್ಯಾಮೆರಾ ಗುಣಮಟ್ಟ ಚೆನ್ನಾಗಿದ್ದು, ಮಡಚಿದಾಗ ಪುಟ್ಟದಾಗುವ ಇದನ್ನು ಹಿಡಿದುಕೊಳ್ಳುವುದು ವಿಶಿಷ್ಟ ಅನುಭವ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.