ADVERTISEMENT

ಸಾಯಿ ತೇಜನ ಆಲ್ಕೋಹಾಲ್‌ ಡಿಟೆಕ್ಟರ್‌

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 19:30 IST
Last Updated 19 ಜೂನ್ 2019, 19:30 IST
Sai Teja
Sai Teja   

ಹೈದರಾಬಾದ್‌ನ ಯುವಕ ಸಾಯಿತೇಜ ಹೊಸದೊಂದು ಸ್ಮಾರ್ಟ್‌ ಸ್ಟಿಸ್ಟಮ್‌ ರೂಪಿಸಿದ್ದಾರೆ. ಮದ್ಯ ಸೇವಿಸಿ ವಾಹನ ಚಾಲನೆಗೆ ಮುಂದಾದರೆ ಜಪ್ಪಯ್ಯ ಎಂದರೂ ವಾಹನದ ಎಂಜಿನ್‌ ಚಾಲನೆಗೊಳ್ಳುವುದಿಲ್ಲ. ಹೀಗೆ ಮದ್ಯ ಸೇವನೆಯನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತದೆ ಈ ಸಿಸ್ಟಮ್‌. ಅಷ್ಟೇ ಅಲ್ಲ ಚಾಲಕ ಕುಡಿದಿರುವ ಬಗ್ಗೆ ನಿರ್ದಿಷ್ಟ ಇಲಾಖೆಯ ಸಂಖ್ಯೆಗಳಿಗೆ ತಕ್ಷಣವೇ ಎಸ್‌ಎಂಎಸ್‌ ಸಂದೇಶವನ್ನೂ ರವಾನಿಸುತ್ತದೆ. ಚಾಲಕ ಕುಳಿತಿರುವ ವಾಹನ ಸಂಖ್ಯೆ ಹಾಗೂ ಅದಕ್ಕೆ ಬೆಸೆದುಕೊಂಡಿರುವ ಮೊಬೈಲ್‌ ಸಂಖ್ಯೆಗಳಿಗೂ ಸಂದೇಶ ಹೋಗುತ್ತದೆ. ವಾಹನದ ಮಾಹಿತಿಯೂ ಅದರಲ್ಲಿ ಇರುತ್ತದೆ. ಅಂಥ ಸೂಕ್ಷ್ಮ ನಿಯಂತ್ರಣ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದೆ.

‘ಚಾಲಕ ಶೇ 30ಕ್ಕಿಂತ ಹೆಚ್ಚು ಪ್ರಮಾಣದ ಮದ್ಯ ಸೇವಿಸಿದರೂ ಸಾಕು ವಾಹನ ಚಾಲನೆಗೊಳ್ಳುವುದಿಲ್ಲ. ಮದ್ಯ ಸೇವನೆಯಿಂದ ಸಂಭವಿಸುವ ಅಪಘಾತ ತಪ್ಪಿಸಲು ಈ ಸಾಧನ ನೆರವಾಗಲಿದೆ’ ಎಂಬುದು ತೇಜ ಅವರ ವಿವರಣೆ.

ಅಂದಹಾಗೆ ತೇಜ ಓದಿದ್ದು ಕೇವಲ 10ನೇ ತರಗತಿ. ಎಲೆಕ್ಟ್ರಾನಿಕ್‌ ವ್ಯವಸ್ಥೆಯ ಬಗ್ಗೆ ಇಂಟರ್‌ನೆಟ್‌ ಮೂಲಕ ತಿಳಿದುಕೊಂಡ ತೇಜ, ಆ ಮಾಹಿತಿ ಆಧರಿಸಿ ಆಲ್ಕೊಹಾಲ್‌ ಡಿಟೆಕ್ಟರ್‌ನ್ನು ಕಂಡು ಹಿಡಿದಿದ್ದಾರೆ. ‘ಈ ಸಾಧನ ರೂಪಿಸಲು 15 ದಿನ ತಗುಲಿದೆ. ₹ 2,500 ವೆಚ್ಚವಾಗಿದೆ’ ಎನ್ನುತ್ತಾರೆ ತೇಜ.

ADVERTISEMENT

ಪುಟ್ಟ ಮದರ್‌ಬೋರ್ಡ್‌ ಮಾದರಿಯ ಕಿಟ್‌, ಸೆನ್ಸರ್‌, ಚಿಪ್‌ ಅನ್ನು ಈ ಸಾಧನ ಒಳಗೊಂಡಿದೆ. ಕಾರ್ಯನಿರ್ವಹಣೆ ಹೇಗೆ ಎಂಬ ಬಗ್ಗೆ ತೇಜ ಗುಟ್ಟು ಬಿಟ್ಟುಕೊಟ್ಟಿಲ್ಲ.

ಅಮೆರಿಕದಲ್ಲಿ ಇದೇ ಮಾದರಿಯ ಸಾಧನ ಇರುವುದಾಗಿ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಈ ಕಾರಣಕ್ಕಾಗಿ ಈ ಸಾಧನಕ್ಕೆ ಆದಷ್ಟು ಬೇಗನೆ ಪೇಟೆಂಟ್‌ ಪಡೆಯಿರಿ ಎಂದು ತೇಜ ಅವರಿಗೆ ಹಲವರು ಸಲಹೆ ನೀಡಿದ್ದಾರೆ. ಹೀಗಾಗಿ ಇದು ಬಹುಬೇಡಿಕೆಯ ಸಾಧನವಾಗುವುದರಲ್ಲಿ ಸಂದೇಹವೇ ಇಲ್ಲ ಎಂದು ಪ್ರೋತ್ಸಾಹದಾಯಕ ಮಾತುಗಳನ್ನಾಡಿದ್ದಾರೆ.

ಈ ಸಾಧನವೇನಾದರೂ ಅಭಿವೃದ್ಧಿಗೊಂಡಲ್ಲಿ ಈಗಾಗಲೇ ಇರುವ ಜಿಪಿಎಸ್‌ ಆಧರಿತ ವಾಹನ ನಿಗಾ (ಟ್ರ್ಯಾಕಿಂಗ್‌) ವ್ಯವಸ್ಥೆ ಕಡ್ಡಾಯದಂತೆಯೇ ಈ ಸಾಧನ ಅಳವಡಿಸುವುದೂ ಕಡ್ಡಾಯವಾಗಲಿದೆ ಎಂದು ಹಲವು ಮಂದಿ ನೆಟ್ಟಿಗರು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

(ಮಾಹಿತಿ: ವಿವಿಧ ಮೂಲಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.