ADVERTISEMENT

ಇರುವೆಗಳಲ್ಲಿ ಇರುವ ಸಹಕಾರದ ಸಹಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 0:50 IST
Last Updated 29 ಅಕ್ಟೋಬರ್ 2025, 0:50 IST
<div class="paragraphs"><p> ತಡೆಗಳನ್ನೊಳಗೊಂಡ ಟಿ-ಕೋಣೆಗಳು ಮತ್ತು ಇರುವೆ</p></div>

ತಡೆಗಳನ್ನೊಳಗೊಂಡ ಟಿ-ಕೋಣೆಗಳು ಮತ್ತು ಇರುವೆ

   

ವಿಜ್ಞಾನಿಗಳು ಕೆಲವೊಮ್ಮೆ ಕೆಲವು ವಿಶಿಷ್ಟವಾದ ಹಾಗೂ ವಿಚಿತ್ರವಾದ ಪ್ರಯೋಗಗಳನ್ನು ನಡೆಸುತ್ತಾರೆ. ಇತ್ತೀಚೆಗೆ ಅಮೆರಿಕದ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದ ಜೀವವಿಜ್ಞಾನ ವಿಭಾಗದ ಸಂಶೋಧಕರು ವಿಚಿತ್ರ ಪ್ರಯೋಗವೊಂದನ್ನು ನಡೆಸಿ, ಇರುವೆಗಳು ಸಹಕಾರ ಜೀವನದ ಮೂಲಕ ಹೆಚ್ಚು ಶ್ರಮವಾದ, ಜಟಿಲವಾದ ಕೆಲಸಗಳನ್ನು, ಮಾನವರಿಗಿಂತ ಹೆಚ್ಚು ಸಮರ್ಥವಾಗಿ, ಯುಕ್ತಿಯಿಂದ ಮಾಡುತ್ತವೆ ಎಂದು ಕಂಡುಹಿಡಿದಿದ್ದಾರೆ. ಅಮೆರಿಕದ ಪ್ರಸಿದ್ಧ ವಿಜ್ಞಾನದ ಪತ್ರಕರ್ತ ಮತ್ತು ಲೇಖಕ, ಕ್ರಿಸ್ಟಿ ವಿಲ್ಕಾಕ್ಸ್ ಈ ತಂಡದ ಕಾರ್ಯವನ್ನು ತನ್ನ ಲೇಖನವೊಂದರಲ್ಲಿ ಶ್ಲಾಘಿಸಿದ್ದಾರೆ.

‘ಒಂಟಿಯಾಗಿ ಮಾಡಲು ಸಾಧ್ಯವಾಗದ ಅನೇಕ ದೊಡ್ಡ ಕೆಲಸಗಳನ್ನು ಹಲವರು ಕೂಡಿ ಒಗ್ಗಟ್ಟಿನಿಂದ ಸುಲಭವಾಗಿ ಮಾಡಿ ಮುಗಿಸಬಹುದು. ಗುಂಪಿನಲ್ಲಿದ್ದಾಗ ನಾವು ಮಾತಿನ ಮೂಲಕ ಪರಸ್ಪರ ಚರ್ಚಿಸಿ ಅಸಾಧ್ಯವಾದ ಕೆಲಸವನ್ನು ಸಾಧಿಸುತ್ತೇವೆ. ಕೆಲಸವನ್ನು ಮಾಡುವಾಗ ಎದುರಾಗುವ ಅಡಚಣೆಗಳನ್ನು ಮಾತುಕತೆ ಅಥವಾ ಸನ್ನೆಗಳ ಮುಖಾಂತರ ಪರಿಹರಿಸಿಕೊಂಡು ಆ ಕಾರ್ಯವನ್ನು ನಿರ್ವಹಿಸುತ್ತೇವೆ. ಮಾನವನಂತೆಯೇ ಸಹಕಾರ ಜೀವನವನ್ನು ನಡೆಸುವ, ಆದರೆ ಮಾತನಾಡಲಾರದ ಮೂಕ ಇರುವೆಗಳು ಗುಂಪಾಗಿ ಒಗ್ಗಟ್ಟಿನಿಂದ ಅಷ್ಟೇ ಸಮರ್ಥವಾಗಿ ಅಸಾಧ್ಯವಾದ ಕೆಲಸಗಳನ್ನು ಸಾಧ್ಯವಾಗಿಸುತ್ತವೆ’ ಎಂದು ಕಂಡುಹಿಡಿದಿರುವುದಾಗಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ತಂಡವು ಕಳೆದ ಫೆಬ್ರುವರಿಯಲ್ಲಿ ಅಮೆರಿಕದ ‘ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ನಡವಳಿಕೆಗಳು’ ಎಂಬ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಪ್ರಕಟ ಮಾಡಿದೆ.

ADVERTISEMENT

ಪ್ಯಾರಾಟ್ರೆಚಿನಾ ಲಾಂಗಿಕಾರ್ನಿಸ್ ಎಂಬ ಪ್ರಭೇದದ ಇರುವೆಗಳು ಮತ್ತು ಮಾನವರನ್ನು ಅಧ್ಯಯನಕ್ಕೊಳಪಡಿಸಿ ಈ ಎರಡು ಪ್ರಭೇದಗಳ ಗುಂಪುಕಾರ್ಯ ಸಾಮರ್ಥ್ಯವನ್ನು ಹೋಲಿಕೆ ಮಾಡಲಾಗಿದೆ. ಈ ಅಧ್ಯಯನದಲ್ಲಿ, ಮಾನವ ಮತ್ತು ಇರುವೆಗಳು ಗುಂಪಿನಲ್ಲಿ ಕೆಲಸ ಮಾಡುವಾಗ ಅಡ್ಡಬಂದ ತಡೆಗಳನ್ನು ಪರಿಹರಿಸಿಕೊಳ್ಳುವ ಸಾಮರ್ಥ್ಯವನ್ನು ಪರೀಕ್ಷಿಸಲಾಗಿದೆ. ಮಾನವನು ಮಾತು ಮತ್ತು ಸಂಜ್ಞೆಗಳ ಮೂಲಕ ಪರಸ್ಪರ ಸಂವೇದನೆ ನಡೆಸಿ ಅಡೆತಡೆಗಳನ್ನು ನಿವಾರಿಸಿಕೊಳ್ಳಬಲ್ಲ ಎಂಬುದು ನಾವೆಲ್ಲ ಬಲ್ಲ ವಿಚಾರ. ಒಂದು ವೇಳೆ ಮಾನವನಿಗೆ ಮಾತಾಡುವ ಸಾಮರ್ಥ್ಯ ಇಲ್ಲದಿದ್ದರೆ ಇಷ್ಟೇ ಸಮರ್ಥವಾಗಿ ಅಡೆತಡೆಗಳನ್ನು ನಿವಾರಿಸಿಕೊಳ್ಳುತ್ತಿದ್ದನೇ? ‘ಇಲ್ಲ’ ಎನ್ನುತ್ತವೆ, ಈ ಅಧ್ಯಯನಗಳು. ಈ ಎರಡು ಪ್ರಭೇದಗಳು (ಮಾನವ ಮತ್ತು ಇರುವೆ) ಅವುಗಳ ಕಾರ್ಯದ ನಡುವೆ ಅಡ್ಡಬರುವ ತಡೆಗಳನ್ನು ಒಟ್ಟಾಗಿ ಎಷ್ಟು ಸಮರ್ಥವಾಗಿ ನಿವಾರಿಸಿಕೊಳ್ಳುತ್ತವೆ ಎಂಬುದನ್ನು ತಿಳಿಯುವುದು ಈ ಪ್ರಯೋಗದ ಉದ್ದೇಶ.

ಈ ಪ್ರಯೋಗಗಳನ್ನು ನಡೆಸಲು ವಿಜ್ಞಾನಿಗಳು, ಮಾನವ ಮತ್ತು ಇರುವೆ ಎರಡೂ ಪ್ರಭೇದಗಳ ಗುಂಪನ್ನು ಪರಸ್ಪರ ಕಣಕ್ಕಿಳಿಸಿದರು. ಇದಕ್ಕೆ ಅವರು ಇಂಗ್ಲಿಷ್ ಟಿ- ಆಕಾರದ ಎರಡು ಕೋಣೆಗಳ ಜಾಲಗಳನ್ನು ನಿರ್ಮಿಸಿದರು (ಚಿತ್ರ ನೋಡಿ). ಮಾನವನಿಗೆ ದೊಡ್ಡ ಗಾತ್ರದ ಕೋಣೆಗಳು, ಇರುವೆಗಳಿಗೆ ಅವುಗಳ ಗಾತ್ರಕ್ಕೆ ಅನುಗುಣವಾಗಿ ಪುಟ್ಟ ಗಾತ್ರದ ಕೋಣೆಗಳು. ಜಾಲದ ಕೊನೆಯ ಕೋಣೆಯಲ್ಲಿ ಆಹಾರವನ್ನು ಇರಿಸಲಾಗಿತ್ತು. ಪ್ರಯೋಗಕ್ಕೆ ಒಳಪಡಿಸಿದ ವ್ಯಕ್ತಿಗಳು ತಮ್ಮಲ್ಲಿ ಪರಸ್ಪರ ಮಾತನಾಡಲು ಸಾಧ್ಯವಾಗದಂತೆ ಅವರ ಬಾಯಿಗೆ ಬಟ್ಟೆ ಕಟ್ಟಲಾಗಿತ್ತು, ಸಂಜ್ಞೆ ತೋರದಂತೆ ಕೈಗಳನ್ನೂ ಕಟ್ಟಿಹಾಕಲಾಗಿತ್ತು. ಅಂದರೆ ಅವರು ಇರುವೆಗಳಂತೆಯೇ ವಾಸನೆ ಮತ್ತು ದೃಷ್ಟಿಗಳನ್ನು ಮಾತ್ರ ಬಳಸಿ ಸಂಪರ್ಕ ಏರ್ಪಡಿಸಿಕೊಳ್ಳಬಹುದಿತ್ತು. ಆರಂಭದ ಕೋಣೆಯನ್ನು ಮಾನವ/ಇರುವೆಗಳ ಪ್ರವೇಶಕ್ಕೆ ಮೀಸಲಿಟ್ಟಿದ್ದು, ಜಾಲದೋಪಾದಿಯಲ್ಲಿ ಅಳವಡಿಸಿದ್ದ ಕೋಣೆಗಳನ್ನು ದಾಟಿ ಅವು ಆಹಾರವನ್ನು ಇರಿಸಿದ್ದ ಕೊನೆಯ ಕೋಣೆಗೆ ಪ್ರವೇಶಿಸಬೇಕಿತ್ತು. ಈ ಕೋಣೆಗಳ ಜಾಲದಲ್ಲಿ ಆರು ವಿಶಿಷ್ಟವಾದ ದ್ವಾರಗಳನ್ನು ಅಳವಡಿಸಲಾಗಿತ್ತು. ಮಾನವ ಗುಂಪಿನ ಸದಸ್ಯರಿಗೆ ಒಟ್ಟಾಗಿ ದ್ವಾರಗಳನ್ನು ತೆರೆದು ಆಹಾರವನ್ನು ಇರಿಸಿದ ಕೋಣೆಯನ್ನು ಪ್ರವೇಶಿಸುವುದರೊಂದಿಗೆ ಪ್ರಯೋಗ ಮುಗಿಯುತ್ತದೆ ಎಂದು ಮೊದಲೇ ತಿಳಿಸಲಾಗಿತ್ತು. ಇರುವೆಗೆ ಕೊನೆಯ ಕೋಣೆಯಲ್ಲಿ ಆಹಾರವನ್ನಿರಿಸಿದ್ದರಿಂದ, ನಿರ್ದೇಶನವಿಲ್ಲದಿದ್ದರೂ ಅವು ಅದರ ಆಕರ್ಷಣೆಯಿಂದ ತಮ್ಮ ಕಾರ್ಯವನ್ನು ಆರಂಭಿಸಿದ್ದವು.

ಈ ಪ್ರಯೋಗದಲ್ಲಿ ವಿಜ್ಞಾನಿಗಳಿಗೆ ಅತ್ಯಾಶ್ಚರ್ಯಕರ ಫಲಿತಾಂಶಗಳು ದೊರಕಿದವು. ಇರುವೆಗಳು ಮಾನವರಿಗಿಂತ ಮೊದಲು ಕೋಣೆಗಳ ನಡುವೆ ಇರಿಸಿದ್ದ ತಡೆಗಳನ್ನು ಸರಿಸಿ ಆಹಾರವಿದ್ದ ಕೋಣೆಯನ್ನು ಪ್ರವೇಶಿಸಿದ್ದವು! ಮಾನವ ತನ್ನ ದ್ವಂದ್ವವರ್ತನೆಯಿಂದ, ಅಂದರೆ ಒಬ್ಬ ಒಂದೆಡೆ ತಡೆಯನ್ನು ತೆರವುಗೊಳಿಸಲು ಪ್ರಯತ್ನಿಸಿದರೆ ಇನ್ನೊಬ್ಬ ವಿರುದ್ಧ ದಿಕ್ಕಿನಿಂದ ಪ್ರಯತ್ನಿಸುತ್ತಿದ್ದ. ಅದರಿಂದ ಮಾನವಗುಂಪು ತಡೆಯನ್ನು ತೆರವುಗೊಳಿಸಲು ಅಸಮರ್ಥವಾಗುತ್ತಿತ್ತು. ಇರುವೆಗಳು ಯಾವುದೇ ದ್ವಂದ್ವ ಇಲ್ಲದೆ ಬಹುಬೇಗನೆ ತಡೆಯನ್ನು ನಿವಾರಿಸಿಕೊಂಡು ಮಾನವರಿಗಿಂತ ಮುಂಚೆ ಆಹಾರವನ್ನು ತಲುಪಿದ್ದವು!

ಇರುವೆಗಳು ಸಂವಹನಕ್ಕಾಗಿ ಶರೀರದಲ್ಲಿ ಉತ್ಪತ್ತಿಯಾಗುವ ‘ಫೀರೊಮೋನ್’ ಎಂಬ ರಸಾಯನಗಳನ್ನು ಅವಲಂಬಿಸಿವೆ. ಅವು ದ್ವಾರದ ಮೂಲಕ ಆಹಾರವನ್ನು ಪಡೆಯಲು ಯಾವುದೇ ಜ್ಯಾಮಿತಿಯ ಲೆಕ್ಕವನ್ನು ಹಾಕುವುದಿಲ್ಲ. ಗುಂಪಿನ ಎಲ್ಲ ಇರುವೆಗಳೂ ಫಿರೊಮೋನ್ ಆಧಾರಿತ ಸಂವಹನವನ್ನು ನಿರ್ದಿಷ್ಟವಾಗಿ ಪಾಲಿಸುತ್ತವೆ, ಎಲ್ಲವೂ ಒಂದೇ ದಿಕ್ಕಿನಲ್ಲಿ ಚಲಿಸುತ್ತವೆ, ಒಂದೇ ಕೆಲಸವನ್ನು ಮಾಡುತ್ತವೆ. ಮಾನವನ ಸಂವಹನ ಹಲವು ದಿಕ್ಕುಗಳಲ್ಲಿ ಸಾಗುತ್ತದೆ. ‘ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು’ ಎಂಬಂತೆ ಒಬ್ಬೊಬ್ಬ ಒಂದೊಂದು ರೀತಿ ಯೋಚಿಸುತ್ತಾನೆ, ಲೆಕ್ಕ ಹಾಕುತ್ತಾನೆ, ಒಂದೊಂದು ರೀತಿಯಲ್ಲಿ ತಡೆಯನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಅದರಿಂದ ಇರುವೆಗಳಿಗೆ ಹೋಲಿಸಿದರೆ ತಡೆಯನ್ನು ನಿವಾರಿಸಿಕೊಳ್ಳುವುದರಲ್ಲಿ ಸೋಲುತ್ತಾನೆ! ಹೀಗೆ ಈ ಪ್ರಯೋಗವು ಇರುವೆಗಳಲ್ಲಿ ಸಂಘಜೀವನ ಉತ್ಕೃಷ್ಟವಾಗಿ ವಿಕಾಸವಾಗಿದೆ ಎಂದು ತೋರಿಸಿತು. ಇರುವೆಗಳು ವಿಕಾಸದಲ್ಲಿ ಮಾನವನಿಗಿಂತ 150 ದಶಲಕ್ಷ ವರ್ಷಗಳ ಹಿಂದೆಯೇ ಉದಯವಾದುವು. ಆದರೂ ಸಹಕಾರ ಜೀವನದಿಂದಾಗಿ ಅವು ಇನ್ನೂ ಭೂಮಿಯ ಮೇಲೆ ಅಳಿಯದೆ ಉಳಿದಿವೆ. ಆಧುನಿಕ ಮಾನವ ಪ್ರಭೇದ ಕೇವಲ ಒಂದೂವರೆ ದಶಲಕ್ಷ ವರ್ಷಗಳ ಹಿಂದೆ ವಿಕಾಸವಾಯಿತು. ಇರುವೆ ಹಾಗೂ ಮಾನವವಿಕಾಸದ ಅವಧಿಯನ್ನು ಪರಿಗಣಿಸಿದರೆ, ಮಾನವವಿಕಾಸದ ಅವಧಿ ತೀರ ಕಡಿಮೆ. ಮಾತಿನ ಮೂಲಕ ಚರ್ಚಿಸುವ ಸಾಮರ್ಥ್ಯವಿಲ್ಲದಿದ್ದರೆ ಬಹುಶಃ ಮಾನವನಲ್ಲಿ ಸಹಕಾರ ಜೀವನ ಅಸಾಧ್ಯವಾಗುತ್ತಿತ್ತು – ಎಂದು ಈ ಅಧ್ಯಯನಗಳು ಹೇಳುತ್ತವೆ. ಇಂದಿನ ಕೆಲವು ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾನವನಲ್ಲಿ ಸಾಮಾಜಿಕವಾದ ಎಷ್ಟೋ ದ್ವಂದ್ವ ನಿಲುವುಗಳನ್ನು ನಾವು ಕಾಣುತ್ತೇವೆ. ಹೀಗಾಗಿ ಮಾನವಗುಂಪುಗಳ ನಡುವೆ ಆಗಾಗ ಸಾಮರಸ್ಯ ಕೆಡುತ್ತಿದೆ. ಬಹುಶಃ ಸಾಮಾಜಿಕ ಜೀವನದ ಅರೆಬರೆ ವಿಕಾಸವೇ ಈ ವಿಫಲತೆಗೆ ಕಾರಣವಿರಬಹುದೆ?
ಬಡವ-ಬಲ್ಲಿದ, ಮೇಲು-ಕೀಳುಗಳೆಂಬ ವೈರುದ್ಧ್ಯಗಳನ್ನೊಳಗೊಂಡ ಇಂಥ ದ್ವಂದ್ವ ಮನೋಭಾವವೇ ಮುಂದೊಂದು ದಿನ ಮಾನವನ ಅಳಿವಿಗೆ ಕಾರಣವಾಗಬಹುದು ಎಂಬ ಸಂದೇಶವನ್ನು ಕೂಡ ಈ ಪ್ರಯೋಗಗಳು ನೀಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.