ADVERTISEMENT

ಎಂದಿಗೂ ‘ಕೆಡದ’ ಲೋಹ

ನೇಸರ ಕಾಡನಕುಪ್ಪೆ
Published 26 ಜುಲೈ 2023, 0:35 IST
Last Updated 26 ಜುಲೈ 2023, 0:35 IST
   

ಲೋಹದ ಬಳಕೆ ಎಲ್ಲಿ ಇಲ್ಲ ಹೇಳಿ? ಕಟ್ಟಡ ಕಾಮಗಾರಿ, ವಾಹನ ನಿರ್ಮಾಣ, ಆಭರಣ, ಅಡುಗೆಸಾಮಗ್ರಿಗಳಿಂದ ಹಿಡಿದು ನಮ್ಮ ಜೀವನದ ಎಲ್ಲ ಹಂತಗಳಲ್ಲೂ ಲೋಹಗಳು ಹಾಸು ಹೊಕ್ಕಾಗಿ ಸೇರಿಕೊಂಡುಬಿಟ್ಟಿದೆ. ಆದರೆ ಲೋಹಕ್ಕೆ ಇತರೆ ಎಲ್ಲ ಸಾಮಗ್ರಿಗಳಿಗೆ ಇರುವಂತೆ ಒಂದು ಪ್ರಮುಖವಾದ ಮಿತಿಯಿದೆ. ಅದೇನೆಂದರೆ ಕಾಲಾಂತರದಲ್ಲಿ ಲೋಹಗಳು ಹಳತಾಗಿ ಹಾಳಾಗುವುದು.
ಲೋಹ ಹಲವು ಬಗೆಗಳಲ್ಲಿ ಹಾಳಾಗಬಹುದು. ತುಕ್ಕು ಹಿಡಿದು ಇರುವಲ್ಲಿಯೇ ತಿಂದುಹೋಗಬಹುದು. ಹೊರೆ ಹೆಚ್ಚಾದರೆ ಬಿರುಕು ಮೂಡಬಹುದು. ಬಿಸಿಲು, ಗಾಳಿಗೆ ಸವೆಯಬಹುದು. ಏಟು ಬಿದ್ದು ಮುರಿಯಲೂಬಹುದು.

ಈ ತೊಂದರೆಗಳಿಗೆ ಈಗ ಇರುವ ಪರಿಹಾರವೇನು? ಆ ಲೋಹವನ್ನೇ ಬದಲಿಸಿ ಹೊಸತನ್ನು ಬಳಸುವುದು ಅಲ್ಲವೇ? ಇನ್ನು ಮುಂದೆಯೂ ಇದೇ ಪರಿಹಾರ ಬಳಕೆಯಾಗಬೇಕು ಎಂದೇನೂ ಇಲ್ಲ. ಏಕೆಂದರೆ ವಿಜ್ಞಾನಿಗಳು ಹೊಸ ಆವಿಷ್ಕಾರವೊಂದನ್ನು ಮಾಡಿದ್ದಾರೆ. ತನಗೆ ತಾನೇ ಗುಣಹೊಂದುವ ಈ ಲೋಹವು ಹಳತಾಗುವುದೇ ಇಲ್ಲ! ಹಾಗಾಗಿ ಲೋಹಗಳು ಹಾಳಾಗುವ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವಂತಹ ಸಂಶೋಧನೆಯಾಗಿದೆ.

ಈ ಸಂಶೋಧನೆ ಹೊರಜಗತ್ತಿಗೆ ಬಂದಿದ್ದೇ ಆದಲ್ಲಿ ಕಟ್ಟಡಗಳು ಶಿಥಿಲ ಆಗುವುದೇ ಇಲ್ಲ! ಅಪಘಾತಗೊಂಡ ವಾಹನಗಳ ಭಾಗಗಳನ್ನು ಬದಲಿಸುವಂತೆಯೇ ಇಲ್ಲ. ಅಷ್ಟೇ ಏಕೆ? ಈಗಿನ ದಿನಗಳಲ್ಲಿ ಮಾನವನ ದೇಹದಲ್ಲಿ ವೈದ್ಯಕೀಯವಾಗಿ ಲೋಹದ ಬಳಕೆ ಇದೆ. ಉದಾಹರಣೆಗೆ: ಮೂಳೆ ಮುರಿದಾಗ, ಕೃತಕ ಅಂಗಗಳು, ಹಲ್ಲುಗಳ ಗುಣ ಪಡಿಸುವಿಕೆ ಇತ್ಯಾದಿ. ದೇಹದ ಅಗತ್ಯಕ್ಕೆ ತಕ್ಕಂತೆ ಬದಲಾಗುತ್ತ ಕೊಂಚವೂ ಹಾಳಾಗದೇ ಹೊಸತಂತೇ ಇರುವ ಸಾಧ್ಯತೆಗಳ ಸಂಶೋಧನೆ ಇದಾಗಿದೆ.

ADVERTISEMENT

ಅಮೆರಿಕದ ಸ್ಯಾಂಡಿಯಾ ರಾಷ್ಟ್ರೀಯ ಪ್ರಯೋಗಾಲಯ ಹಾಗೂ ಟೆಕ್ಸಾಸ್ ಎ ಅಂಡ್ ಎಂ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೊಸ ಬಗೆಯ ಸಂಶೋಧನೆ ಮಾಡಿದ್ದಾರೆ.

ಡೆಮ್ಕೋವಿಕ್ಸ್ ಸಿದ್ಧಾಂತದ ಅಳವಡಿಕೆ:


ಲೆಜೆಕ್‌ ಎಫ್ ಡೆಮ್ಕೋವಿಕ್ಸ್ ಅಮೆರಿಕದ ಒಡೆನ್ ಕಂಪ್ಯೂಟರೀಕೃತ ಎಂಜಿನಿಯರಿಂಗ್ ಸಂಸ್ಥೆಯ ಸಹಾಯಕ ನಿರ್ದೇಶಕ. ಇವರದು ವಸ್ತುವಿಜ್ಞಾನ ಕ್ಷೇತ್ರದಲ್ಲಿ ದೊಡ್ಡ ಹೆಸರು‌. ಇವರ ‘ಡೆಮ್ಕೋವಿಕ್ಸ್ ಸಿದ್ಧಾಂತ’ದ ಪ್ರಕಾರ ಯಾವುದೇ ಲೋಹವೊಂದನ್ನು ಸತತ ಅಣು ಸೂಕ್ಷ್ಮ ಕಂಪನಕ್ಕೆ ಅಳವಡಿಸಿದರೆ ಅದರಲ್ಲಿರುವ ಬಿರುಕು, ಇತ್ಯಾದಿ ಸಮಸ್ಯೆಗಳು ತನಗೆ ತಾನೇ ಗುಣಹೊಂದುತ್ತವೆ. ಈ ಸಿದ್ಧಾಂತ ಇಷ್ಟು ದಿನಗಳ ಕಾಲ ಕೇವಲ ಕಾಗದದಲ್ಲಿ ಮಾತ್ರವೇ ಇತ್ತು. ಇದೀಗ ಸ್ಯಾಂಡಿಯಾ ರಾಷ್ಟ್ರೀಯ ಪ್ರಯೋಗಾಲಯ ಹಾಗೂ ಟೆಕ್ಸಾಸ್ ಎ ಅಂಡ್ ಎಂ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಸಿದ್ಧಾಂತವನ್ನು ಪ್ರಯೋಗಕ್ಕೆ ಒಳಪಡಿಸಿ ಸಾಬೀತು ಪಡಿಸಿದ್ದಾರೆ.

ಸ್ಯಾಂಡಿಯಾ ರಾಷ್ಟ್ರೀಯ ಪ್ರಯೋಗಾಲಯ ಹಾಗೂ ಟೆಕ್ಸಾಸ್ ಎ ಅಂಡ್ ಎಂ ವಿಶ್ವವಿದ್ಯಾಲಯದ ಮುಖ್ಯ ವಿಜ್ಞಾನಿ ಬ್ರ್ಯಾಡ್‌ ಬಾಯ್ಸ್ ಮತ್ತು ಅವರ ತಂಡದ ವಿಜ್ಞಾನಿಗಳು ಬಿರುಕು ಬಿಟ್ಟ ಲೋಹದ ಹಾಳೆಯೊಂದನ್ನು ಈ ಪ್ರಯೋಗಕ್ಕೆ ಒಳಪಡಿಸಿದ್ದಾರೆ. ಈ ಲೋಹದ ಮೇಲೆ ಎಲೆಕ್ಟ್ರಾನಿಕ್ ದೂರದರ್ಶಕದ ಸಹಾಯದಿಂದ ಪ್ರಬಲ ಬೆಳಕನ್ನು ಸೆಕೆಂಡಿಗೆ 400 ಬಾರಿ ಹಾಯಿಸಿದ್ದಾರೆ. ಇದರ‌ ಪರಿಣಾಮ ಅತ್ಯದ್ಭುತವಾಗಿ ವಿಜ್ಞಾನಿಗಳಿಗೆ ಕಂಡುಬಂದಿದೆ. ಈ ಪ್ರಕ್ರಿಯೆಯನ್ನು ಬಂದ್‌ ಮಾಡಿ ಲೋಹವನ್ನು ವೀಕ್ಷಿಸಿದಾಗ ಆ ಲೋಹದ ಮೇಲಿದ್ದ ಬಿರುಕುಗಳೆಲ್ಲಾ ಮುಚ್ಚಿಹೋಗಿದ್ದವು. ಅಲ್ಲದೇ ಲೋಹದ ಇತರ ಭಾಗಗಳಲ್ಲಿನ ಬಿರುಕುಗಳು ನಿಧಾನವಾಗಿ ಮುಚ್ಚಿಕೊಳ್ಳಲು ಶುರುವಾಗಿದ್ದವು.

‘ಈ ಪ್ರಯೋಗದ ಮೂಲಕ ನಾವು ಡೆಮ್ಕೋವಿಕ್ಸ್ ಸಿದ್ಧಾಂತವನ್ನು ಸಾಬೀತು ಪಡಿಸಿದ್ದೇವೆ. ಈ ರೀತಿಯ ಪ್ರಯೋಗವನ್ನು ಜನಸಾಮಾನ್ಯರು ತಮ್ಮ ಮನೆಗಳಲ್ಲಿ ನಡೆಸಿದರೆ ಹಾನಿಯಾದ ಲೋಹ ಸರಿಯಾಗುತ್ತದೆ ಎಂದು ಅರ್ಥವಲ್ಪ. ಜನಸಾಮಾನ್ಯರು ಬಳಸಬಲ್ಲ ಸರಳ ಸಾಧನಗಳನ್ನು ನಾವು ತಯಾರಿಸಿಕೊಡುತ್ತೇವೆ. ಇಂತಹ ಸಾಧನಗಳನ್ನು ಅವರು ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಬಹುದು. ಕಟ್ಟಡದಲ್ಲಿ ಇರಿಸಿಕೊಳ್ಳಬಹುದು. ದೇಹದಲ್ಲಿ ಬಳೆ, ಓಲೆ, ಗಡಿಯಾರದಂತೆ ಧರಿಸಬಹುದು’ ಎಂದು ವ್ಯಾಖ್ಯಾನಿಸಿದ್ದಾರೆ.

‘ಇದರಿಂದ ಹೊಸ ಲೋಹದ‌ ಮೇಲಿನ ಅವಲಂಬನೆ‌ ಕಡಿಮೆಯಾಗುತ್ತದೆ‌ ಎಂಬ ವಿಶ್ವಾಸ‌ ನಮಗಿದೆ. ಈಗಿನ ದಿನಗಳಲ್ಲಿ ಲೋಹವೂ ಸೇರಿದಂತೆ ಎಲ್ಲ ನೈಸರ್ಗಿಕ ಸಂಪನ್ಮೂಲಗಳ ಮರುಬಳಕೆಗೆ ಹೆಚ್ಚಿನ ಆದ್ಯತೆ‌ ನೀಡಲಾಗುತ್ತಿದೆ. ಕಾರಣ‌ ಬಹು ಸರಳ. ಸಂಪನ್ಮೂಲಗಳು ಖಾಲಿಯಾಗುತ್ತಿವೆ. ಆದರೆ‌, ಮಾನವ‌ ಬೇಡಿಕೆ‌ ಕಡಿಮೆಯಾಗಿಲ್ಲ. ಇದಕ್ಕೆ ಪರಿಹಾರ ಎಂಬಂತೆ ನಮ್ಮ ಸಂಶೋಧನೆಯು ದಾರಿ ತೋರಿಸಬಲ್ಲದು’ ಎಂದು ವಿಜ್ಞಾನಿ ಬ್ರ್ಯಾಡ್ ಬಾಯ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.